More

    ಸಿಗ್ನಲ್, ಬಸ್‌ಸ್ಟಾೃಂಡ್‌ಗಳಲ್ಲಿ ಮಕ್ಕಳಿಂದ ವ್ಯಾಪಾರ

    ಭರತ್ ಶೆಟ್ಟಿಗಾರ್ ಮಂಗಳೂರು
    ಅಣ್ಣಾ ಊಟ ಮಾಡಿಲ್ಲಣ್ಣ…ಒಂದು ಸ್ಟಿಕ್ಕರ್ ತಗೊಳಣ್ಣ…ಒಂದಕ್ಕೆ 20 ರೂ…ತಗೊಳ್ಳಣ್ಣ…. ಎನ್ನುತ್ತ ಬಣ್ಣ ಬಣ್ಣದ ಕಾರ್ಟೂನ್ ಕ್ಯಾರೆಕ್ಟರ್‌ಗಳ ಸ್ಟಿಕ್ಕರ್, ಪೆನ್ ಮಾರಾಟ ಮಾಡುವ ಮಕ್ಕಳು ಮಂಗಳೂರಿನ ವಿವಿಧೆಡೆ ಕಂಡು ಬರುತ್ತಿದ್ದಾರೆ. ಪಾಪ ಪುಣ್ಯ ನೋಡಿ ಪಾದಚಾರಿಗಳು, ವಾಹನ ಸವಾರರು ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಈ ಮಕ್ಕಳು ಅಪ್ರಾಪ್ತರು ಎನ್ನುವುದು ಕಳವಳಕಾರಿ ವಿಚಾರ.

    ಲಾಕ್‌ಡೌನ್ ಸಡಿಲಿಕೆ ಬಳಿಕ ಆರಂಭವಾದ ಈ ಕಸುಬು ಶಾಲೆ ಆರಂಭವಾದರೂ ಮುಂದುವರಿದಿದೆ. ಶಾಲೆಯತ್ತ ಮುಖ ಮಾಡದ ಮಕ್ಕಳು ಸಿಗ್ನಲ್, ಮಾಲ್‌ಗಳ ಬಳಿ, ಬಸ್ ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದ್ದಾರೆ. ಸಿಗ್ನಲ್‌ಗಳಲ್ಲಂತೂ ಅಪಾಯಕಾರಿ ರೀತಿಯಲ್ಲಿ ವಸ್ತುಗಳನ್ನು ಮಾರುವ ಇವರು, ವಾಹನ ಸವಾರರಿಗೂ ಅಡ್ಡಿಪಡಿಸುತ್ತಿದ್ದಾರೆ. ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಇದಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳೂ ಈ ವಿಚಾರದಲ್ಲಿ ಇನ್ನೂ ಮೌನವಾಗಿ ಇರುವುದು ಅವರಿಗೆ ಅನುಕೂಲವಾಗಿಯೇ ಪರಿಣಮಿಸಿದೆ.

    ಶಾಲೆಗೆ ಹೋಗ್ತೇವೆ ಅಂತಾರೆ!: ರಸ್ತೆಯಲ್ಲಿ ಅಲೆಯುತ್ತ್ತ ಸ್ಟಿಕ್ಕರ್ ಮಾರುವ ಮಕ್ಕಳನ್ನು ವಿಚಾರಿಸಿದರೆ, ನಾವು ಶಾಲೆಗೆ ಹೋಗ್ತೇವೆ. ಕಾರ್‌ಸ್ಟ್ರೀಟ್ ಶಾಲೆ, ಕುದ್ರೋಳಿ ಶಾಲೆ, ಬಂದರ್ ಶಾಲೆ ಎಂದು ಹೇಳುತ್ತಾರೆ. ಯಾಕೆ ಹೋಗಿಲ್ಲ ಅಂತ ಕೇಳಿದ್ರೆ ರಜಾ ಎನ್ನುವ ಉತ್ತರ. ಭಿಕ್ಷಾಟನೆಯ ಬದಲು ಈ ರೀತಿ ಸ್ಟಿಕ್ಕರ್, ಪೆನ್ ಮಾರಾಟ ಮಾಡುತ್ತಿದ್ದಾರೆ. ಹೊಯ್ಗೆಬಜಾರ್, ಉಳ್ಳಾಲ, ಕುದ್ರೋಳಿ ಮೊದಲಾದೆಡೆ ವಾಸವಾಗಿರುವ ಇವರಲ್ಲಿ ಬಹುತೇಕರು, ತಮಿಳುನಾಡು ಅಥವಾ ಅಲ್ಲಿನ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳ ನಿವಾಸಿಗಳು. ಹೆತ್ತವರು ದಕ್ಕೆಗೆ ಕೆಲಸಕ್ಕೆ ಹೋದರೆ ಮಕ್ಕಳು, ಈ ರೀತಿ ದುಡ್ಡು ಸಂಪಾದಿಸುತ್ತಾರೆ.

    ಸಿಗ್ನಲ್‌ಗಳಲ್ಲಿ ಪ್ರತ್ಯೇಕ ತಂಡ: ಇನ್ನೊಂದೆಡೆ ಪೆನ್, ಟವಲ್, ಮೊಬೈಲ್ ಸ್ಟಾೃಂಡ್ ಸೇರಿದಂತೆ ವಿವಿಧ ವಸ್ತುಗಳನ್ನು ಸಿಗ್ನಲ್‌ಗಳಲ್ಲಿ ಮಾರಾಟ ಮಾಡುವ ತಂಡವೂ ವಿವಿಧೆಡೆ ಕಾರ್ಯಾಚರಿಸುತ್ತಿದೆ. ತಂಡದಲ್ಲೂ ಗಂಡು ಮಕ್ಕಳು ಮಾತ್ರವಲ್ಲದೆ, ಹೆಣ್ಣು ಮಕ್ಕಳು, ಯುವತಿಯರು, ಹಿರಿಯರು, ವೃದ್ಧರು ಎಲ್ಲರೂ ಇದ್ದಾರೆ. ಸಿಗ್ನಲ್‌ಗಳಲ್ಲಿ ಮಾರಾಟ ಮಾಡುತ್ತಿರುವ ಇವರ‌್ಯಾರು ಸ್ಥಳೀಯರಲ್ಲ. ಬದಲಾಗಿ ಹೊರರಾಜ್ಯಗಳಿಂದ ಬಂದ ಅಲೆಮಾರಿಗಳು. ನಗರದ ಆಯ್ದ ಕಡೆ ಫುಟ್‌ಪಾತ್, ಮೈದಾನಗಳಲ್ಲಿ ಟೆಂಟ್ ನಿರ್ಮಿಸಿ ವಾಸವಿದ್ದು, ಈ ರೀತಿ ವಿವಿಧ ರೀತಿಯ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ತಮ್ಮೊಂದಿಗೆ ಮಕ್ಕಳನ್ನೂ ಕರೆದುಕೊಂಡು ಬಂದು ಕೆಲಸ ಮಾಡಿಸುತ್ತಿದ್ದಾರೆ.

    ಅಲೆಮಾರಿಗಳಾಗಿರುವುದರಿಂದ ಸ್ವಲ್ಪ ಸಮಯ ಇಲ್ಲಿದ್ದು, ಬಳಿಕ ಬೇರೆ ಕಡೆಗೆ ಹೋಗುತ್ತಾರೆ. ಮಕ್ಕಳನ್ನು ಕೆಲಸಕ್ಕೆ ನಿಯೋಜಿಸುವವರ ಮೇಲೆ ಪ್ರಕರಣ ದಾಖಲಿಸಲು ಅವಕಾಶವಿದೆ. ಚೈಲ್ಡ್ ಲೈನ್ ಸಂಸ್ಥೆಯವರು ಪೊಲೀಸರ ಸಹಾಯದಿಂದ ರಕ್ಷಿಸಿ ಸಿಡಬ್ಲುೃಸಿ ಮುಂದೆ ಹಾಜರುಪಡಿಸಿ, ಅವರಿಗೆ ಪುನರ್ವಸತಿ ಕಲ್ಪಿಸುತ್ತಿದ್ದಾರೆ. ವಿವಿಧ ಇಲಾಖೆಯವರೂ ಆಗಾಗ ಜಂಟಿ ಕಾರ್ಯಾಚರಣೆ ನಡೆಸಿ, ಇಂತಹ ಚಟುವಟಿಕೆಗಳನ್ನು ತಡೆಗಟ್ಟುವ ಅವಶ್ಯಕತೆಯಿದೆ.
    ರೆನ್ನಿ ಡಿಸೋಜ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts