More

    ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಜವಾಬ್ದಾರಿ

    ಧಾರವಾಡ: ಕೋವಿಡ್​ನಿಂದ ಪ್ರಸಕ್ತ ವರ್ಷದಲ್ಲಿ ಮಕ್ಕಳು ಶಾಲಾ ಪಾಠಗಳಿಂದ ವಂಚಿತರಾಗಿದ್ದಾರೆ. ಅನೇಕರು ಆನ್​ಲೈನ್ ಪಾಠಗಳನ್ನು ಆಲಿಸುತ್ತಿದ್ದಾರೆ. ಆದರೆ, ಈ ಅವಕಾಶದಿಂದ ಕೆಲವರು ವಂಚಿತರಾಗಿದ್ದಾರೆ. ಅಂತಹ ಮಕ್ಕಳ ಬಾಲ್ಯ, ಶೈಕ್ಷಣಿಕ ಹಕ್ಕುಗಳನ್ನು ರಕ್ಷಿಸುವುದು ಸಮಾಜದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

    ಜಿಲ್ಲಾಡಳಿತ, ಮಕ್ಕಳ ಸಹಾಯವಾಣಿ 1098 ಸಿಐಎಫ್, ಇತರ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಗರದ ಉಪನಗರ, ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ ಸಹಾಯವಾಣಿಯೊಂದಿಗೆ ಗೆಳೆತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಮಕ್ಕಳು ಬಾಲ್ಯ, ಶಿಕ್ಷಣದಿಂದ ವಂಚಿತರಾಗಬಾರದು. ಕೋವಿಡ್​ನಿಂದ ಆರ್ಥಿಕ ಬೆಳವಣಿಗೆಗೆ ಹಿನ್ನಡೆ ಆಗಿದ್ದರಿಂದ ಅನೇಕ ಮಕ್ಕಳು ಮಾರುಕಟ್ಟೆಯಲ್ಲಿ ಕಂಡುಬರುತ್ತಿರುವ ಬಗ್ಗೆ ಜನರಿಂದ ದೂರುಗಳು ಬರುತ್ತಿವೆ. ಅಂತಹ ಮಕ್ಕಳನ್ನು ರಕ್ಷಿಸಲು ಕ್ರಮ ವಹಿಸಲಾಗಿದೆ. ಪ್ರಜ್ಞಾವಂತ ನಾಗರಿಕರು ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಂಡುಬಂದರೆ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.

    ಬಿಡಿಎಸ್​ಎಸ್ ಸಂಸ್ಥೆ ನಿರ್ದೇಶಕ ಫಾ. ಯುಜಿಬಿಯೋ ಫರ್ನಾಂಡಿಸ್ ಸಾನ್ನಿಧ್ಯ ವಹಿಸಿದ್ದರು. ವಾಕರಸಾಸಂ ವಿಭಾಗೀಯ ನಿಯಂತ್ರಕ ಬಸವಲಿಂಗಪ್ಪ ಬೀಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ಹಂಚಾಟೆ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ.ಎಚ್.ಲಲಿತಾ, ಡಾ.ಉಮೇಶ ಹಳ್ಳಿಕೇರಿ, ಜಿಲ್ಲಾ ರಾಷ್ಟ್ರೀಯ ಬಾಲ ಕಾರ್ವಿುಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಾಳಾಗೌಡ ಪಾಟೀಲ, ಕಲಘಟಗಿ ಕಲ್ಯಾಣ ಕಿರಣ ಸಂಸ್ಥೆಯ ಬಿ.ವೈ. ಪೊಲೀಸ್ ಪಾಟೀಲ, ಸ್ನೇಹಾ ಶಿಕ್ಷಣ ಸಂಸ್ಥೆಯ ನಾಗರತ್ನ ಜೇಡದ, ಕುಂದಗೋಳ ಕರ್ಮಣಿ ಸಂಸ್ಥೆಯ ಎನ್.ಬಿ. ಹೊಸಮನಿ, ಪೀಟರ್ ಆಶೀರ್ವಾದ ಇತರರಿದ್ದರು. ಶಿವಲೀಲಾ ಗಾಯಕವಾಡ ಸ್ವಾಗತಿಸಿದರು. ರವಿ ಭಂಡಾರಿ, ಚಂದ್ರಶೇಖರ ರಾಹುತರ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts