More

    ಮಕ್ಕಳ ದತ್ತು ಯೋಜನೆಗೆ ನಿರಾಸಕ್ತಿ, ಮೂರು ವರ್ಷದಲ್ಲಿ ಕೇವಲ 2 ಅರ್ಜಿ

    – ಗೋಪಾಲಕೃಷ್ಣ ಪಾದೂರು ಉಡುಪಿ
    ಬಾಲನ್ಯಾಯ ಕಾಯ್ದೆ ಅನ್ವಯ ಮಕ್ಕಳ ಪಾಲನೆ, ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ಮಗುವನ್ನು ಪೋಷಕತ್ವ ಯೋಜನೆಯಡಿ ದತ್ತು ನೀಡಬಹುದು. ಆದರೆ, ಈ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ಉತ್ತೆ ೀಜನ ಸಿಕ್ಕಿಲ್ಲ. ಕಳೆದ ಮೂರು ವರ್ಷಗಳಲ್ಲಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಕೇವಲ ಎರಡು. ಇಲಾಖೆ ನಿಯಮಕ್ಕೆ ಹೊಂದಾಣಿಕೆಯಾಗದ ಕಾರಣ ಅರ್ಜಿ ಸ್ವೀಕೃತಗೊಂಡಿಲ್ಲ.

    ಮಗು ಹಾಗೂ ಕುಟುಂಬದ ಹೊಂದಾಣಿಕೆಯ ಆಧಾರದ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿ ಮಗುವನ್ನು 18 ವರ್ಷದ ವಯಸ್ಸಿ ನವರೆಗೂ ಪೋಷಕತ್ವ ಮುಂದುವರಿಸಲು ಯೋಜನೆಯಲ್ಲಿ ಅವಕಾಶವಿದೆ. 6ರಿಂದ 18 ವರ್ಷದೊಳಗಿನ ಮಕ್ಕಳನ್ನು ದತ್ತು ನೀಡಲಾಗುತ್ತದೆ. ಜಿಲ್ಲೆಯಲ್ಲಿ ಅರ್ಹ 7 ಮಕ್ಕಳಿದ್ದರೂ, ಆಸಕ್ತ ಪೋಷಕರ ಕೊರತೆ ಕಾಡುತ್ತಿದೆ.

    4 ಮಕ್ಕಳ ದತ್ತು: 2018ರಲ್ಲಿ ಮಣ್ಣಪಳ್ಳದಲ್ಲಿ ಪತ್ತೆಯಾದ ನವಜಾತ ಶಿಶು ಸೇರಿದಂತೆ 4 ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಟ್ಟು ಅರ್ಹ ದಂಪತಿಗಳಿಗೆ ನೀಡಲಾಗಿದೆ. ವಾರದ ಹಿಂದೆ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸಮೀಪ ಹೆಣ್ಣು ಮಗು ಪತ್ತೆಯಾಗಿದ್ದು, ಮಮತೆಯ ತೊಟ್ಟಿಲಿನಲ್ಲಿ ಮೂರು ಮಕ್ಕಳು ಸಿಕ್ಕಿದ್ದಾರೆ. 6 ಗಂಡು ಹಾಗೂ 11 ಹೆಣ್ಣು ಸಹಿತ 17 ಮಕ್ಕಳು ಜಿಲ್ಲೆಯಲ್ಲಿ ದತ್ತು ನೀಡಲು ಅರ್ಹರಾಗಿದ್ದಾರೆ. ಹೆತ್ತವರು ಸರೆಂಡರ್ ಡೀಡ್ ಮೂಲಕ 6 ಮಕ್ಕಳನ್ನು ರಕ್ಷಣಾ ಘಟಕದ ವಶಕ್ಕೆ ಒಪ್ಪಿಸಿದ್ದಾರೆ. ಇಬ್ಬರು ಪರಿತ್ಯಕ್ತ ಮಕ್ಕಳನ್ನೂ ಕೃಷ್ಣಾನುಗ್ರಹ ದತ್ತು ಸಂಸ್ಥೆಯಲ್ಲಿ ಪೋಷಿಸಲಾಗುತ್ತಿದೆ.

    ಏನಿದು ಪೋಷಕತ್ವ?: ಯೋಜನೆ ಪ್ರಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಅರ್ಜಿ ಸಲ್ಲಿಸಿದವರ ಕೌಟುಂಬಿಕ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತದೆ. ಮಗುವಿನ ಬೆಳವಣಿಗೆಗೆ ಅಲ್ಲಿ ಪೂರಕ ವಾತಾವರಣವಿದ್ದರೆ ಮಾತ್ರ ಮಗುವನ್ನು ವಶಕ್ಕೆ ನೀಡಲಾಗುತ್ತದೆ. ಒಂದು ವರ್ಷದ ಬಳಿಕ ಮಕ್ಕಳ ರಕ್ಷಣಾಧಿಕಾರಿ ಮನೆಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ಈ ಸಂದರ್ಭ ಮಗು ಕುಟುಂಬದ ಜತೆಗೆ ಬಾಳಲು ಇಷ್ಟ ಪಟ್ಟರೆ ಪೋಷಕತ್ವ ಅವಧಿಯನ್ನು 18 ವರ್ಷಕ್ಕೆ ವಿಸ್ತರಿಸಲಾಗುತ್ತದೆ. ಈ ಮಧ್ಯೆ, ಮಗು ಇಲಾಖೆಗೆ ವಾಪಸ್ ಬರಲು ಇಚ್ಛೆ ವ್ಯಕ್ತಪಡಿಸಿದರೆ ಅವಕಾಶವಿದೆ.

    ಸರೆಂಡರ್ ಡೀಡ್ ಅಂದರೆ…
    ಅನಪೇಕ್ಷಿತ ಗರ್ಭಧಾರಣೆ, ಅತ್ಯಾಚಾರದಿಂದ ತಾಯ್ತನ ಅಥವಾ ಅಂಗವಿಕಲತೆ ಮುಂತಾದ ಕಾರಣಗಳಿಗಾಗಿ ಹೆತ್ತವರು ಮಕ್ಕಳನ್ನು ಸರ್ಕಾರದ ಸ್ವಾಧೀನಕ್ಕೆ ಒಪ್ಪಿಸಲು ಸರೆಂಡರ್ ಡೀಡ್ ಮೂಲಕ ಅವಕಾಶವಿದೆ. ಬಾಣಂತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ದಿನ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಶಕ್ಕೆ ನೀಡಬೇಕು. ಅವರು ನವಜಾತ ಶಿಶುವನ್ನು ದತ್ತು ಕೇಂದ್ರದಲ್ಲಿ ಆರೈಕೆ ಮಾಡುತ್ತಾರೆ. 60 ದಿನದ ಒಳಗೆ ಮನಪರಿವರ್ತನೆಗೆ ಒಳಗಾಗಿ ಮಗುವನ್ನು ವಾಪಸ್ ಪಡೆಯಬಹುದು. ನಂತರ ಆಕೆಯ ಸಹಿ ಪಡೆದು ಸರೆಂಡರ್ ಡೀಡ್ ಮೂಲಕ ಮಕ್ಕಳ ಕಲ್ಯಾಣ ಸಮಿತಿ ದತ್ತು ಮುಕ್ತ ಮಗು ಎಂದು ಘೋಷಿಸುತ್ತದೆ. ಜಿಲ್ಲೆಯಲ್ಲಿ ಇಂಥ 6 ಮಕ್ಕಳಿದ್ದಾರೆ. ಹೊರ ಜಿಲ್ಲೆಯಿಂದ ಆಗಮಿಸಿದ ವಲಸೆ ಕಾರ್ಮಿಕರ 4, ಕಾರ್ಕಳ ಮತ್ತು ಕುಂದಾಪುರ ತಾಲೂಕಿನ ಇಬ್ಬರು ಮಕ್ಕಳಿದ್ದಾರೆ.

    ಪ್ರಚಾರದ ಹೊರತಾಗಿಯೂ ಪೋಷಕತ್ವ ಯೋಜನೆಯಲ್ಲಿ ಮಕ್ಕಳನ್ನು ಪೋಷಿಸಲು ದಂಪತಿ ಮುಂದೆ ಬರುತ್ತಿಲ್ಲ. ಇಲಾಖೆ ವಶದಲ್ಲಿರುವ ಮಕ್ಕಳನ್ನು ಇನ್ನೊಬ್ಬರಿಗೆ ಕೊಡುವ ಸಂದರ್ಭ ಬಾಲನ್ಯಾಯ ಕಾಯ್ದೆಯ ನಿಯಮಗಳನ್ನು ಪಾಲಿಸಲಾಗುತ್ತದೆ. ಹೀಗಾಗಿ ಅರ್ಜಿಗಳು ಸುಲಭದಲ್ಲಿ ಸ್ವೀಕೃತವಾಗುತ್ತಿಲ್ಲ. ಮಕ್ಕಳಿಲ್ಲದ ಅರ್ಹ ಕುಟುಂಬ ಪೋಷಕತ್ವ ಯೋಜನೆಯಲ್ಲಿ 6 ವರ್ಷದಿಂದ 18 ವರ್ಷದೊಳಗಿನ ಮಕ್ಕಳನ್ನು ಅರ್ಜಿ ಸಲ್ಲಿಸಬಹುದು.
    -ಪ್ರಭಾಕರ ಆಚಾರ್, ಕಾನೂನು ಪರಿವೀಕ್ಷಣಾಧಿಕಾರಿ, ಮಕ್ಕಳ ರಕ್ಷಣಾ ಘಟಕ, ಉಡುಪಿ

    ದ.ಕ.ದಲ್ಲಿ 8 ಮಕ್ಕಳಿಗೆ ಪೋಷಕತ್ವ

    ಮಂಗಳೂರು: ಮಕ್ಕಳ ಪೋಷಕತ್ವ ಯೋಜನೆಗೆ ಸಂಬಂಧಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ದ.ಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮೂಲಕ 47 ಅರ್ಜಿಗಳನ್ನು ಸ್ವೀಕರಿಸಿದೆ. ಇದರಲ್ಲಿ 2016ರಿಂದ ಇಲ್ಲಿವರೆಗೆ 6ರಿಂದ 18 ವರ್ಷದೊಳಗಿನ 8 ಮಕ್ಕಳನ್ನು ಅರ್ಹ ಕುಟುಂಬಗಳಿಗೆ ಪೋಷಕತ್ವಕ್ಕೆ ನೀಡಲಾಗಿದೆ. ಇದರಲ್ಲಿ 5 ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳು ಎಂದು ದ.ಕ.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts