More

    ಚಿಕ್ಕೋಡಿಯಲ್ಲಿ ವೈರಾಲಜಿ ಲ್ಯಾಬ್

    ಚಿಕ್ಕೋಡಿ: ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತಿ ದೊಡ್ಡ ಜಿಲ್ಲೆಯಾಗಿರುವುದರಿಂದ ಚಿಕ್ಕೋಡಿಯಲ್ಲಿಯೂ ವೈರಾಲಜಿ ಲ್ಯಾಬ್ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಅವರು ಪಟ್ಟಣದ ಇಂದಿರಾ ನಗರದಲ್ಲಿರುವ ಲೋಕೋಪಯೋಗಿ ಸಭಾಭವನದಲ್ಲಿ ಕರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಕಠಿಣ ಕ್ರಮಗಳಿಂದ ಮಾತ್ರ ಈ ರೋಗ ನಿಯಂತ್ರಣ ಸಾಧ್ಯ. ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ತೆರಳಿ ಗ್ರಾಮಮಟ್ಟದ ಸಭೆ ನಡೆಸಬೇಕು ಎಂದು ಸಲಹೆ ನೀಡಿದರು. ಗ್ರಾಮೀಣ ಭಾಗದ ಯುವಕರು ಹೊರಗಡೆ ತಿರುಗಾಡುತ್ತಿದ್ದು, ಇದರ ಬಗ್ಗೆ ಗಮನಹರಿಸಬೇಕು ಎಂದರು.

    ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ತಾಲೂಕು ಮಟ್ಟದ ಅಧಿಕಾರಿಗಳ ಸಭೆಗೆ ಬಾರದ ಹುಕ್ಕೇರಿ ಹಾಗೂ ರಾಯಬಾಗ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳಿಗೆ ನೋಟಿಸ್ ನೀಡುವಂತೆ ಚಿಕ್ಕೋಡಿ ಉಪ ವಿಭಾಗಾಧಿಕಾರಿಗೆ ಸಚಿವೆ ಸೂಚನೆ ನೀಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಲೋಕಸಭಾ ಸದಸ್ಯರ ಅನುದಾನದಡಿ ಆರೋಗ್ಯ ಇಲಾಖೆಗೆ ಬೇಕಾಗುವ ಸಲಕರಣೆಗಳನ್ನು ನೀಡಲು ಸಿದ್ಧ ಎಂದು ತಿಳಿಸಿದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ 155 ಜನ ವಿದೇಶದಿಂದ ಬಂದಿದ್ದು, ಅವರನ್ನು ತಪಾಸಣೆಗೊಳಪಡಿಸಲಾಗಿದ್ದು, ಯಾರಲ್ಲೂ ರೋಗ ಕಂಡು ಬಂದಿಲ್ಲ ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಮಾಹಿತಿ ನೀಡಿದರು. ಗಡಿಯಂಚಿನಲ್ಲಿ 8 ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಕೇವಲ ಸರಕು ವಾಹನಗಳನ್ನು ಮಾತ್ರ ಬಿಡಲಾಗುತ್ತಿದೆ. ತರಕಾರಿ ಹಾಗೂ ದಿನಸಿ ವಸ್ತುಗಳನ್ನು ಮನೆ ಮನೆಗೆ ತಲುಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಡಿವೈಎಸ್ಪಿ ಮನೋಜಕುಮಾರ ನಾಯಿಕ ಮಾಹಿತಿ ನೀಡಿದರು. ತಾಲೂಕು ವೈದ್ಯಾಧಿಕಾರಿ ಡಾ. ವಿ.ವಿ. ಶಿಂಧೆ ಮಾತನಾಡಿ, ಹೊರಗಡೆಯಿಂದ ಮರಳಿರುವ ಜನರ ಮೇಲೆ ತೀವ್ರ ನಿಗಾ ಇಡಲಾಗಿದ್ದು, 14 ದಿನಗಳ ಕಾಲ ಹೊರ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದರು. ಐಎಂಎ ಅಧ್ಯಕ್ಷೆ ಡಾ. ರೋಹಿಣಿ ಕುಲಕರ್ಣಿ ಮಾತನಾಡಿ, ಮನೆಯಿಂದ ಹೊರಗಡೆ ಬರುವ ಸಂದರ್ಭದಲ್ಲಿ ಜನರು ಮಾಸ್ಕ್‌ಗಳನ್ನು ಧರಿಸಬೇಕು. ಐಎಂಎ ಉಚಿತವಾಗಿ ಮಾಸ್ಕ್ ನೀಡಲು ಪ್ರಯತ್ನಿಸುತ್ತಿದೆ ಎಂದರು. ಎಡಿಎಚ್‌ಒ ಹಾಗೂ ತಾಲೂಕಾಧಿಕಾರಿಗಳು ಉಪಸ್ಥಿತರಿದ್ದರು.

    ಕರೊನಾ ವೈರಸ್ ಹರಡುವಿಕೆ ತಡೆಯಲು ಪ್ರತಿಯೊಬ್ಬರೂ ಸರ್ಕಾರದ ನಿಯಮ ಪಾಲಿಸಬೇಕು. ರೋಗಕ್ಕೆ ಯಾರೂ ಭಯಪಡಬಾರದು. ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜನರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ವ್ಯವಸ್ಥೆ ಮಾಡಬೇಕು. ಮನೆ ಬಿಟ್ಟು ಯಾರೂ ಹೊರ ಬರಬಾರದು.
    | ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts