More

    ಮತದಾನ ಬಹಿಷ್ಕರಿಸಲು ಚಿಕ್ಕಮಾವಳ್ಳಿ ಗ್ರಾಮಸ್ಥರ ನಿರ್ಧಾರ

    ಯಲ್ಲಾಪುರ: ಮೂಲಸೌಕರ್ಯ ಕೊರತೆಯಿಂದ ಬೇಸತ್ತ ತಾಲೂಕಿನ ಕಣ್ಣಿಗೇರಿ ಗ್ರಾಪಂ ವ್ಯಾಪ್ತಿಯ ಚಿಕ್ಕಮಾವಳ್ಳಿ ಮತಗಟ್ಟೆಯ ಮತದಾರರು ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಸಹಾಯಕ ಚುನಾವಣಾ ಅಧಿಕಾರಿಗಳು, ತಹಸೀಲ್ದಾರರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರಿಗೆ ಪತ್ರದ ಮೂಲಕ ಗ್ರಾಮಸ್ಥರು ಎಚ್ಚರಿಸಿದ್ದಾರೆ.

    ಚಿಕ್ಕಮಾವಳ್ಳಿ ಶಾಲೆಯಲ್ಲಿ 35-40 ವರ್ಷಗಳಿಂದ ಮತಗಟ್ಟೆ ಇದ್ದು, ರಾಷ್ಟ್ರೀಯ ಹೆದ್ದಾರಿಯಿಂದ ಕೇವಲ 2 ಕಿ.ಮೀ ಅಂತರದಲ್ಲಿದೆ. ಶಾಲೆಗೆ, ಊರಿಗೆ ಈವರೆಗೂ ಸರ್ವ ಋತು ರಸ್ತೆ ಇಲ್ಲ. ಚುನಾವಣೆ ಸಮಯದಲ್ಲಿ ಅಧಿಕಾರಿಗಳು, ರಾಜಕೀಯ ಪಕ್ಷದವರ ವಾಹನಗಳ ಅತಿಯಾದ ಓಡಾಟದಿಂದಾಗಿ ಸ್ಥಳೀಯರು ನಡೆದುಕೊಂಡು ಓಡಾಡುವುದೂ ಕಷ್ಟವಾಗುತ್ತದೆ.

    ರಸ್ತೆ ಅವ್ಯವಸ್ಥೆಯಿಂದಾಗಿ ಶಾಲೆ ಮತ್ತು ಅಂಗನವಾಡಿಗಳಿಗೆ ಆಹಾರ, ಸಿಲಿಂಡರ್ ಪೂರೈಕೆಗೂ ಸಮಸ್ಯೆಯಾಗುತ್ತಿದೆ. ಮತಗಟ್ಟೆ ಇರುವ ಪ್ರದೇಶದ ಸುತ್ತಮುತ್ತ ಯಾವುದೇ ನೆಟ್​ವರ್ಕ್ ವ್ಯವಸ್ಥೆಯಿಲ್ಲ. ಚುನಾವಣೆಯ ದಿನ ಮತಗಟ್ಟೆ ಸಿಬ್ಬಂದಿ ಸಮೀಪದ ಮನೆಗಳಿಗೆ ಹೋಗಿ ಲ್ಯಾಂಡ್​ಲೈನ್ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ. ಚುನಾವಣೆ ವೇಳೆ ಸಿಬ್ಬಂದಿಗೆ ವಿದ್ಯುತ್ ದೀಪದ ವ್ಯವಸ್ಥೆಯನ್ನು ಗ್ರಾಮಸ್ಥರೇ ಮಾಡುತ್ತ ಬಂದಿದ್ದಾರೆ.

    ಸದ್ಯಕ್ಕೇನೋ ಮತದಾರರ ಸಹಕಾರದಿಂದ ಚುನಾವಣೆಯ ದಿನ ಮತಗಟ್ಟೆಗೆ ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಮುಂದೊಂದು ದಿನ ಮೂಲಸೌಕರ್ಯದ ಕೊರತೆ, ಮತದಾರರ ಅಸಹಕಾರದ ಕಾರಣಕ್ಕೆ ಮತಗಟ್ಟೆ ಸ್ಥಳಾಂತರ ಮಾಡಬೇಕಾದ ಪರಿಸ್ಥಿತಿ ಬರಬಹುದು. ರಾಜಕೀಯ ಪಕ್ಷದವರು, ಜನಪ್ರತಿನಿಧಿಗಳು, ಅಧಿಕಾರಿಗಳು ಚುನಾವಣೆಯ ಸಮಯದಲ್ಲಿ ಮಾತ್ರ ಬಂದು ಆಶ್ವಾಸನೆ ನೀಡಿ ಹೋಗುವುದನ್ನು ಬಿಟ್ಟರೆ, ನಂತರದ ಸಮಯದಲ್ಲಿ ಇತ್ತ ಸುಳಿಯುವುದೂ ಇಲ್ಲ.

    ರಸ್ತೆ ಹಾಗೂ ನೆಟ್​ವರ್ಕ್ ಸಮಸ್ಯೆ ಪರಿಹಾರವಾಗದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದು ಖಚಿತ ಎಂದು ಗ್ರಾಮಸ್ಥರಾದ ಗುರುಪಾದಯ್ಯ ನಂದೊಳ್ಳಿ, ಸಿದ್ಧಾರ್ಥ ನಂದೊಳ್ಳಿ, ಬುದ್ದಾ ಮರಾಠಿ, ಕೇಶವ ಮರಾಠಿ, ಮಧುಕರ ಹೆಗಡೆ, ಶೇಷಗಿರಿ ಹೆಗಡೆ ಸೇರಿದಂತೆ 75 ಕ್ಕೂ ಹೆಚ್ಚು ಮತದಾರರು ಪತ್ರದ ಮೂಲಕ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts