More

    ಚಿಕ್ಕಕೊಳಚಿ – ಈಶಾಪುರ ರಸ್ತೆ ಅಭಿವೃದ್ಧಿ ಯಾವಾಗ?

    ಮಧುಸೂದನ ಕೆ. ಹೂವಿನಹಡಗಲಿ

    ತಾಲೂಕಿನ ಗ್ರಾಮಗಳಿಂದ ಹರಪನಹಳ್ಳಿ ತಾಲೂಕಿನ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಚಿಕ್ಕಕೊಳಚಿ-ಈಶಾಪುರ ರಸ್ತೆ ಅಭಿವೃದ್ಧಿ ಕಾಣದೆ ಸಂಚಾರ ದುಸ್ಥರವಾಗಿದೆ.

    ಇದನ್ನೂ ಓದಿ: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

    ತಾಲೂಕಿನ ಚಿಕ್ಕಕೊಳಚಿ ಮತ್ತು ಹಿರೇಕೊಳಚಿ ಗ್ರಾಮದ ಜನತೆಗೆ ಸಾರಿಗೆ, ಆರೋಗ್ಯ, ಶಿಕ್ಷಣ ಇತರ ಮೂಲ ಸೌಲಭ್ಯಗಳು ದೊರಕುತ್ತಿರುವುದು ಅಷ್ಟಕಷ್ಟೇ. ಅಲ್ಲದೆ ಅವಳಿ ಗ್ರಾಮಗಳ ನೂರಾರು ಎಕರೆ ಜಮೀನುಗಳು ಈಶಾಪುರದ ವರೆಗೂ ಇರುವುದರಿಂದ ಮಳೆಗಾಲದಲ್ಲಿ ಹೊಲಗಳಿಗೆ ತೆರಳಲು ಹರಸಾಹಸ ಪಡುವಂತಾಗಿದೆ.

    ಎಲ್ಲೆಲ್ಲಿಗೆ ಹೋಗಬಹುದು

    ಹರಪನಹಳ್ಳಿ ಮತ್ತು ಹೂವಿನಹಡಗಲಿ ತಾಲೂಕಿನ ಹಿರೇಕೊಳಚಿ, ಚಿಕ್ಕಕೊಳಚಿ, ಹ್ಯಾರಡಾ, ಹುಲಿಕಟ್ಟಿ, ಹಾರಕನಾಳ, ಕುರುವತ್ತಿ ಇತರ ಗ್ರಾಮಗಳಿಗೆ ತೆರಳಲು ಸಮೀಪ ಎಂಬ ಕಾರಣ ಈ ರಸ್ತೆಯನ್ನೇ ಬಳಸಲಾಗುತ್ತಿದೆ. ಮುಖ್ಯವಾಗಿ ಕುರುವತ್ತಿ ಬಸವೇಶ್ವರ ರಥೋತ್ಸವ ಸಂದರ್ಭ ಹರಕೆಹೊತ್ತ ಭಕ್ತರು ಈ ಮಾರ್ಗದಿಂದಲೇ ಕಾಲುನಡಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ತೆರಳುತ್ತಾರೆ.

    ಜಮೀನಿನಲ್ಲೇ ಓಡಾಟ

    ಮಳೆಗಾಲದಲ್ಲಿ ಚಿಕ್ಕಕೊಳಚಿಯಿಂದ ಈಶಾಪುರ ಸಂಪರ್ಕಿಸುವ ರಸ್ತೆ ಸಂಪೂರ್ಣ ಕೆಸರುಮಯವಾಗಿರುತ್ತದೆ. ರಸ್ತೆಯ ಆಳುದ್ದದ ತಗ್ಗು-ಗುಂಡಿಗಳಲ್ಲಿ ನೀರುತುಂಬಿಕೊಳ್ಳುವುದರಿಂದ ದಾರಿಯ ಸ್ಥಿತಿ ಏನೆಂಬುದು ತಿಳಿಯದಾಗುತ್ತದೆ. ಈ ಸಂದರ್ಭದಲ್ಲಿ ರಸ್ತೆ ಪಕ್ಕದ ಜಮೀನುಗಳಲ್ಲಿ ಓಡಾಡುವ ಜನರು, ಹೊಲಗಳ ಬಿತ್ತನೆ ಬಳಿಕ ಮತ್ತದೇ ಹದಗೆಟ್ಟ ರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ. ಬೈಕ್ ಇನ್ನಿತರ ವಾಹನಗಳನ್ನು ಜೀವದ ಹಂಗು ತೊರೆದು ಚಲಿಸುವಷ್ಟು ರೋಡ್ ಕೆಟ್ಟಿದೆ.

    ಫಸಲು ತರಲು ತೊಂದರೆ

    ಹೊಗಳಿಂದ ಮನೆಗೆ ಫಸಲು ಕೊಂಡೊಯ್ಯುವಾಗಂತೂ ಜೀವ ಕೈಗೆ ಬಂದಿರುತ್ತದೆ. ಶೇಂಗಾ ಹೊಟ್ಟು, ಜೋಳದ ಸೊಪ್ಪೆ ಇನ್ನಿತರ ಕೃಷಿ ಉತ್ಪನ್ನಗಳನ್ನು ಟ್ರಾೃಕ್ಟರ್-ಎತ್ತಿನ ಬಂಡಿಯಲ್ಲಿ ತೆಗೆದುಕೊಂಡು ಹೋಗುವಾಗ ರಸ್ತೆ ಬದಿಯ ಜಾಲಿಗಿಡಗಳಲ್ಲಿಯೇ ಅರ್ಧ ಮೇವು ಉಳಿದುಕೊಳ್ಳುತ್ತಿದ್ದು, ಇನ್ನರ್ಧ ಮಾತ್ರ ರೈತರ ಕೈಸೇರುವಂತಾಗಿದೆ. ಹೀಗಾಗಿ ಅನೇಕ ಕೃಷಿಕರು, ಅಕ್ಕಪಕ್ಕದ ಜಮೀನುಗಳ ಮಾಲೀಕರ ಪರವಾನಗಿ ಪಡೆದು ಹೊಲಗಳ ಮೂಲಕ ಕೊಳಚಿತಾಂಡಾ ಮತ್ತು ಹಿರೇಹಡಗಲಿ ಮಾರ್ಗದಿಂದ ಕೃಷಿ ಉತ್ಪನ್ನಗಳನ್ನು ಮನೆ ಅಥವಾ ಮಾರುಕಟ್ಟೆಗೆ ಸಾಗಿಸುವ ದುಸ್ಥಿತಿ ನಿರ್ಮಾಣವಾಗಿದೆ.

    ಮೊರೆ ಆಲಿಸದ ಅಧಿಕಾರಿಗಳು

    ರಸ್ತೆ ಅಭಿವೃದ್ಧಿ ಪಡಿಸಿಕೊಡುವಂತೆ ಕಳೆದ 20 ವರ್ಷಗಳಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ . ಈ ಬಗ್ಗೆ ಗ್ರಾಪಂ ಸದಸ್ಯರು ಅಧಿಕಾರಿಗಳಿಗೆ ಮನವರಿಕೆ ಮಾಡುವಲ್ಲಿ ವಿಫಲರಾಗಿರುವುದೇ ರಸ್ತೆ ರಿಪೇರಿ ಆಗದಿರಲು ಕಾರಣವೆಂದು ಬೇಸರ ವ್ಯಕ್ತಪಡಿಸುವ ಗ್ರಾಮಸ್ಥರು, ಶೀಘ್ರವೇ ರಸ್ತೆ ಅಭಿವೃದ್ಧಿಪಡಿಸಿ ಹೊಲಗಳು ಮತ್ತು ಅಕ್ಕಪಕ್ಕದ ಊರುಗಳಿಗೆ ತೆರಳುವವರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.

    20 ವರ್ಷಗಳಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ರಸ್ತೆ ಅಭಿವೃದ್ಧಿ ಮಾಡಿಕೊಡುವಂತೆ ಮನವಿ ಮಾಡುತ್ತಲೇ ಬರುತ್ತಿದ್ದೇವೆ. ಎಲ್ಲರೂ ಹುಸಿ ಭರವಸೆ ನೀಡುತ್ತಿದ್ದಾರೆಯೇ ಹೊರತು ಯಾರೊಬ್ಬರೂ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ.
    | ಹರಿಪುರದ ಅಜ್ಜಪ್ಪ, ಚಿಕ್ಕಕೊಳಚಿ ಗ್ರಾಮದ ರೈತ.

    ನರೇಗಾ ಯೋಜನೆಯಡಿ ಚಿಕ್ಕಕೊಳಚಿ ಮತ್ತು ಈಶಾಪುರ ನಡುವಿನ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದ್ದು ಕೆಲವೇ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯ ಪ್ರಾರಂಭಿಸಲಾಗುವುದು.
    | ಶಶಿಕಲಾ ಎಂ. ಕೊಪ್ಪದ, ಪಿಡಿಒ, ಹಗರನೂರು ಗ್ರಾಮ ಪಂಚಾಯಿತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts