More

    ಮತಯಂತ್ರ ಸೇರಿದ 101 ಅಭ್ಯರ್ಥಿಗಳ ಭವಿಷ್ಯ

    ಚಿಕ್ಕಬಳ್ಳಾಪುರ: ನಗರಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಅಭ್ಯರ್ಥಿಗಳ ಕೊನೇ ಕಸರತ್ತಿನ ನಡುವೆ ಭಾನುವಾರ ಶಾಂತಿಯುತವಾಗಿ ನಡೆಯಿತು. ಶೇ.78.36 ಮತದಾನವಾಗಿದೆ.

    ಮತದಾನಕ್ಕೆ ನಗರದಲ್ಲಿ ಸ್ಥಾಪಿಸಲಾಗಿದ್ದ್ದ 54 ಮತಗಟ್ಟೆಗಳಲ್ಲಿ ಮತದಾರರು ಹಕ್ಕು ಚಲಾಯಿಸಿದ್ದು 31 ವಾರ್ಡುಗಳಿಂದ ಸ್ಪರ್ಧಿಸಿರುವ 101 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿತು. ಮತಯಂತ್ರ ಕೈ ಕೊಟ್ಟ ಬಗ್ಗೆ ಎಲ್ಲೂ ದೂರು ಕೇಳಿ ಬರಲಿಲ್ಲ. ಆದರೆ, ಕೆಲ ಮತಗಟ್ಟೆಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ಅಂಗವಿಕಲರು ಪರದಾಡಿದರು. ಕೆಲವೆಡೆ ಅಭ್ಯರ್ಥಿಗಳ ಬೆಂಬಲಿಗರೇ ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಬರುವ ಕೆಲಸ ಮಾಡಿದರು.

    ಅಧಿಕಾರಿಗಳ ಮತ ಚಲಾವಣೆಯ ಅಣಕು ಪ್ರದರ್ಶನದೊಂದಿಗೆ ಬೆಳಗ್ಗೆ 7ಕ್ಕೆ ಪ್ರಕ್ರಿಯೆ ಪ್ರಾರಂಭವಾಯಿತು. ಮತದಾರರು ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು. ಮಧ್ಯಾಹ್ನದ ಬಿಸಿಲಿನ ಝಳಕ್ಕೆ ಮತದಾರರು ಮನೆಬಿಟ್ಟು ಹೊರಬಾರದ್ದರಿಂದ ಮತ ಪ್ರಮಾಣ ಕಡಿಮೆಯಿತ್ತು, ಸಂಜೆಯಾಗುತ್ತಿದ್ದ ಬಿರುಸುಗೊಂಡಿತು.

    ಸಂಜೆ 5 ಗಂಟೆಯಾಗುತ್ತಿದ್ದಂತೆ ಮತಗಟ್ಟೆ ಹೊರ ಆವರಣದ ಬಾಗಿಲು ಮುಚ್ಚಲಾಯಿತು. ನಿಗದಿತ ಅವಧಿಯೊಳಗೆ ಮತಗಟ್ಟೆಯಲ್ಲಿದ್ದ ಮತದಾರರಿಗೆ ಮಾತ್ರ ಹಕ್ಕ ಚಲಾಯಿಸಲು ಅವಕಾಶ ನೀಡಲಾಯಿತು. ಬಿಗಿ ಭದ್ರತೆಗಾಗಿ ಪ್ರತಿ ಮತಗಟ್ಟೆ ಬಳಿ ನಾಲ್ವರು ಪೊಲೀಸ್ ಪೇದೆ, ಇಬ್ಬರು ಗೃಹರಕ್ಷಕ ಸಿಬ್ಬಂದಿ ನಿಯೋಜಿಸಲಾಗಿತ್ತು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆಗೆ ಪ್ರಭಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿ, ಸಿಬ್ಬಂದಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

    ಶೇ.78.36 ಮತದಾನ: ನಗರಸಭಾ ಉಪ ಚುನಾವಣೆಯಲ್ಲಿ ಶೇ.78.36 ಮತದಾನವಾಗಿದೆ. 24,573 ಪುರುಷ ಮತದಾರರ ಪೈಕಿ 19,383, 25,950 ಮಹಿಳೆಯರ ಪೈಕಿ 20,214, ಇತರ 15 ಪೈಕಿ 5 ಮತಗಳು ಚಲಾವಣೆಯಾಗಿದ್ದು, ಒಟ್ಟು 50,538 ಮತದಾರರಲ್ಲಿ 39,602 ಮತದಾರರ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ನರಸಿಂಹಮೂರ್ತಿ ಮಾಹಿತಿ ನೀಡಿದ್ದಾರೆ.
    ಕ್ಷೇತ್ರದಲ್ಲಿ 56 ಮತಗಟ್ಟೆ ಸ್ಥಾಪಿಸಿದ್ದು ಬಹುತೇಕ ಕಡೆ ಹೆಚ್ಚಿನ ಸಾಲಿನಲ್ಲಿ ಜನ ನಿಂತ ದೃಶ್ಯಗಳು ಕಂಡು ಬರಲಿಲ್ಲ. ಬಂದವರು ಬಂದಂತೆ ಮತ ಚಲಾಯಿಸಿ ಹೊರಟರು. ಆದರೆ, ಬಿಸಿಲಿನ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆ ಮಾತ್ರ ಕಡಿಮೆ ಜನರಿದ್ದು ಬೆಳಗ್ಗೆ ಮತ್ತು ಸಂಜೆ ಹೆಚ್ಚಿನ ಮತದಾನವಾಗಿದೆ.

    ಸ್ಟ್ರಾಂಗ್ ರೂಮ್ ಸೇರಿದ ಮತಯಂತ್ರಗಳು: ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ ಅಭ್ಯರ್ಥಿಗಳ ಭವಿಷ್ಯ ಅಡಗಿರುವ ಮತಯಂತ್ರಗಳನ್ನು ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿನ (ಸರ್ಕಾರಿ ಪದವಿ ಪೂರ್ವ ಕಾಲೇಜು) ಸ್ಟ್ರಾಂಗ್ ರೂಮ್‌ನಲ್ಲಿರಿಸಿದ್ದು ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಮತಗಟ್ಟೆ ಸಿಬ್ಬಂದಿ ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್ ಬಾಕ್ಸ್ ಅನ್ನು ಪೆಟ್ಟಿಗೆಯಲ್ಲಿಟ್ಟು ಭದ್ರಪಡಿಸಿಕೊಂಡರು. ಬಳಿಕ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಸ್ಟ್ರಾಂಗ್ ರೂಮಿಗೆ ಬಂದು ಮತಪೆಟ್ಟಿಗೆ, ದಾಖಲೆಗಳನ್ನು ಹಿರಿಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಕೊಠಡಿಯ ಕಿಟಕಿಗಳನ್ನು ಮತ್ತು ಬಾಗಿಲುಗಳನ್ನು ಕಬ್ಬಿಣದ ತಗಡಿನಿಂದ, ಒಳ ಭಾಗದಲ್ಲಿ ಫ್ಲೈವುಡ್ ಶೀಟ್‌ನಿಂದ ಮುಚ್ಚಲಾಗಿದೆ. ಬಾಗಿಲಿಗೆ ಬೀಗ ಜಡಿದು, ಸೀಲ್ ಮಾಡಲಾಗಿದೆ. ಇನ್ನು, ಡಿ ಮಸ್ಟರಿಂಗ್ ಕೊಠಡಿ ಬಳಿ ಯಾರೂ ಸುಳಿಯಲು ಬಿಡುತ್ತಿಲ್ಲ. ಫೆ.11 ರಂದು ಮತ ಎಣಿಕೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts