More

    ಚಿಕ್ಕಬಳ್ಳಾಪುರದಲ್ಲಿ ರಾಜ್ಯದಲ್ಲೇ ಹೆಚ್ಚು ಟಾಪರ್ಸ್ ; 30 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

    ಚಿಕ್ಕಬಳ್ಳಾಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 30 ಮಂದಿ 625 ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ. ಸರಾಸರಿ ಲೆಕ್ಕಾಚಾರದ ರಾಜ್ಯದ ಜಿಲ್ಲಾವಾರು ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಎ ಗ್ರೇಡ್ ಪಡೆದಿದೆ.

    ಒಟ್ಟಾರೆ 15,848 ಹೊಸ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ. ಪೂರ್ಣ ಅಂಕಗಳನ್ನು ಪಡೆದ ರಾಜ್ಯದ 157 ವಿದ್ಯಾರ್ಥಿಗಳ ಪೈಕಿ 30 ಮಂದಿ ಜಿಲ್ಲೆಯವರೇ ಆಗಿರುವುದು ದೊಡ್ಡ ಸಾಧನೆಯಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯರಾಮರೆಡ್ಡಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ 8,290 ಬಾಲಕರು, 7,595 ಬಾಲಕಿಯರು ಸೇರಿ 15,885, ಪುನರಾವರ್ತಿತರು 273, ಖಾಸಗಿ 872 ಮಂದಿ ಸೇರಿ 1,7030 ಮಂದಿ ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಒಬ್ಬರು ಹೊರ ಜಿಲ್ಲೆಯಲ್ಲಿ ಮತ್ತು 73 ಪರೀಕ್ಷಾರ್ಥಿಗಳು ಹೊರ ಜಿಲ್ಲೆಗಳಿಂದ ಇಲ್ಲಿಗೆ ಪರೀಕ್ಷೆ ಬಂದು ಪರೀಕ್ಷೆ ಬರೆದಿದ್ದರು. ಪರೀಕ್ಷೆಗೆ 48 ಮಂದಿ ಗೈರಾಗಿದ್ದು ಹೊಸ ವಿದ್ಯಾರ್ಥಿಗಳ ಉತ್ತೀರ್ಣತೆಯ ಲೆಕ್ಕಾಚಾರದಲ್ಲಿ ಜಿಲ್ಲೆಗೆ ಫಲಿತಾಂಶದ ಗ್ರೇಡ್ ನೀಡಲಾಗಿದೆ.

    ಉತ್ತಮ ಸಾಧನೆಗೆ ಮೆಚ್ಚುಗೆ : 2019-20ರ ಮಾದರಿಯಲ್ಲಿ ಜಿಲ್ಲೆಯು ಈ ಬಾರಿಯೂ ಉತ್ತಮ ಸಾಧನೆ ತೋರಿದ್ದು ಎ ಗ್ರೇಡ್ ಪಡೆದಿದೆ. ಆದರೆ, ಈ ಬಾರಿ ರ‌್ಯಾಂಕಿಂಗ್ ಜಿಲ್ಲಾವಾರು ಸ್ಥಾನವನ್ನು ಘೋಷಿಸಿಲ್ಲ. ಹಿಂದಿನ ವರ್ಷ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದು, ಹೊಸ ದಾಖಲೆ ಬರೆದಿತ್ತು. 2013-14ರಲ್ಲಿ ಶೇ.79.8 ಫಲಿತಾಂಶದೊಂದಿಗೆ 28 ಸ್ಥಾನ, 2014-15ರಲ್ಲಿ ಶೇ.82.58 ಫಲಿತಾಂಶದೊಂದಿಗೆ 27ನೇ ಸ್ಥಾನ, 2015-16ರಲ್ಲಿ ಶೇ.80.92 ಫಲಿತಾಂಶದೊಂದಿಗೆ 14, 2016-17ರಲ್ಲಿ ಶೇ.70.13 ಫಲಿತಾಂಶದೊಂದಿಗೆ 28, 2017-18ರಲ್ಲಿ ಶೇ.68.2 ಫಲಿತಾಂಶದೊಂದಿಗೆ 31, 2018-19ರಲ್ಲಿ ಸಾಲಿನಲ್ಲಿ 20 ನೇ ಸ್ಥಾನ ಪಡೆದಿತ್ತು.

    ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮೇಲುಗೈ: ಕರೊನಾ ಸೋಂಕಿನ ಎರಡನೇ ಅಲೆಯ ಆತಂಕದ ನಡುವೆಯೇ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಜರಾದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 625ಕ್ಕೆ 625 ಅಂಕಗಳನ್ನು ಪಡೆದ 30 ವಿದ್ಯಾರ್ಥಿಗಳ ಪೈಕಿ ಆದಿಚುಂಚನಗಿರಿ ಮಠದ ನೇತೃತ್ವದಲ್ಲಿ ನಡೆಯುತ್ತಿರುವ ಶಾಲೆಗಳ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಿಜಿಎಸ್ ಶಾಲೆಯ 13 ವಿದ್ಯಾರ್ಥಿಗಳು, ಮಂಚನಬಲೆ ಬಿಜಿಎಸ್‌ನ 4, ಗೌರಿಬಿದನೂರು ತಾಲೂಕಿನ ಬಿಜಿಎಸ್ ಪಬ್ಲಿಕ್ ಶಾಲೆಯ 2, ಶಿಡ್ಲಘಟ್ಟ ಬಿಜಿಎಸ್ ಪಬ್ಲಿಕ್ ಶಾಲೆಯ 7 ಮಂದಿ, ಕ್ರೆಸೆಂಟ್ ಶಾಲೆ 1, ಚಿಂತಾಮಣಿಯ ಕಿಶೋರ್ ವಿದ್ಯಾಭವನದ 1, ಕೈವಾರದ ಶ್ರೀ ಭೈರವೇಶ್ವರ ಶಾಲೆ 1, ಬಾಗೇಪಲ್ಲಿ ಯಂಗ್ ಇಂಡಿಯಾ ಶಾಲೆಯ ಒಬ್ಬ ವಿದ್ಯಾರ್ಥಿ ಪೂರ್ಣಾಂಕ ಪಡದಿದ್ದಾರೆ.

    ತಾಲೂಕುವಾರು ಟಾಪರ್ಸ್‌: ಶಿಡ್ಲಘಟ್ಟ-8, ಗೌರಿಬಿದನೂರು-2, ಚಿಂತಾಮಣಿ-2, ಬಾಗೇಪಲ್ಲಿ-1, ಚಿಕ್ಕಬಳ್ಳಾಪುರ-17.

    ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎರಡು ವರ್ಷಗಳಿಂದಲೂ ಉತ್ತಮ ಸಾಧನೆ ತೋರುತ್ತಿರುವುದಕ್ಕೆ ಇಲಾಖೆ ಸಿಬಂದಿ, ಶಿಕ್ಷಕರ ಪ್ರಾಮಾಣಿಕ ಪರಿಶ್ರಮವೇ ಪ್ರಮುಖ ಕಾರಣ. ಎಲ್ಲರ ಸಹಕಾರದಿಂದ ಒಳ್ಳೆಯ ಫಲಿತಾಂಶ ಸಿಕ್ಕಿದೆ.
    ಆರ್.ಲತಾ, ಜಿಲ್ಲಾಧಿಕಾರಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts