More

    ಬಸ್ರೂರು ಬಂಧಮುಕ್ತಗೊಳಿಸಿದ್ದ ಛತ್ರಪತಿ ಶಿವಾಜಿ

    ಕುಂದಾಪುರ: ಆಳುಪ, ವಿಜಯನಗರ, ಕೆಳದಿ ರಾಜರು ಆಳ್ವಿಕೆ ನಡೆಸಿದ ಬಸ್ರೂರು ಪೋರ್ಚುಗೀಸರ, ಡಚ್ಚರ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು ಎಂದು ಇತಿಹಾಸ ಹೇಳುತ್ತದೆ. ಆದರೆ ಅದೇ ಪೋರ್ಚುಗೀಸರನ್ನು ಛತ್ರಪತಿ ಶಿವಾಜಿ ಮಹಾರಾಜ್ ಹಿಮ್ಮೆಟ್ಟಿಸಿ ಬಸ್ರೂರನ್ನು ಬಂಧಮುಕ್ತಗೊಳಿಸಿರುವುದು ಹೆಚ್ಚಿನವರಿಗೆ ತಿಳಿದಿಲ್ಲ.
    ಹೌದು, 355 ವರ್ಷಗಳ ಹಿಂದೆ ಶಿವಾಜಿ ಮೊದಲ ಬಾರಿಗೆ ನೌಕಾ ದಾಳಿ ನಡೆಸಿ, ಎರಡೇ ದಿನದಲ್ಲಿ ಪೋರ್ಚುಗೀಸರನ್ನು ಸೋಲಿಸಿ ಬಸ್ರೂರು ಬಂದರು ಪ್ರದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟಿದ್ದರು.
    ಶಿವಾಜಿ ಆಗಮನ: ಕ್ರಿ.ಶ. 1525ರಲ್ಲಿ ಪೋರ್ಚುಗೀಸರು ಬಸ್ರೂರಿಗೆ ಕಾಲಿಟ್ಟಿದ್ದರು. ಸ್ಥಳೀಯ ವರ್ತಕರೊಂದಿಗೆ ವ್ಯವಹಾರ ಪ್ರಾರಂಭಿಸಿ ಬಂದರು ನೋಡಿಕೊಳ್ಳುವ ಹಂತಕ್ಕೆ ತಲುಪಿ, ಬಸ್ರೂರು ಪ್ರದೇಶ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡರು.
    ಕ್ರಿ.ಶ 1583ರಲ್ಲಿ ಕೊಂಡೇಶ್ವರ(ಕುಂದೇಶ್ವರ) ದೇವಾಲಯಕ್ಕೆ ಬೆಂಕಿ ಇಟ್ಟಿದ್ದು ಪೊರ್ಚುಗೀಸರ ಕರಾಳ ಮುಖಕ್ಕೊಂದು ಸಾಕ್ಷಿ. ದೇವಸ್ಥಾನಕ್ಕೆ ಬೆಂಕಿ ಇಟ್ಟಿದ್ದರಿಂದ ಸಿಟ್ಟಿಗೆದ್ದ ಸ್ಥಳೀಯರು ಹೋರಾಟಕ್ಕೆ ಮುಂದಾದರೂ ಪೋರ್ಚುಗೀಸರು ಬೆಣ್ಣೆ ಮೇಲೆ ಕೂದಲು ತೆಗೆದಂತೆ ಎಲ್ಲ ಸಮಸ್ಯೆ ಬಗೆಹರಿಸಿಕೊಂಡರು.
    ಬಸ್ರೂರಲ್ಲಿ ಕೆಳದಿ ಅರಸರ ಆಳ್ವಿಕೆ ಕಾಲ ಉತ್ತಮವಾಗಿತ್ತು. ಆದರೆ ಪೋರ್ಚುಗೀಸರು ಉಪಟಳ ನೀಡುತ್ತಿದ್ದು, ಅವರನ್ನು ಯುದ್ಧದಲ್ಲಿ ಅನೇಕ ಬಾರಿ ಸೋಲಿಸಿದರೂ ತೊಂದರೆ ನಿಂತಿರಲಿಲ್ಲ. ಪೋರ್ಚುಗೀಸರಲ್ಲದೆ ಡಚ್ಚರು ಕೂಡ ವ್ಯಾಪಾರಕ್ಕಾಗಿ ಬಸ್ರೂರಿಗೆ ಬಂದು ಬಂಡಶಾಲೆ ಪ್ರಾರಂಭಿಸಿದ್ದರು. ಈ ನಡುವೆ ಮಂಗಳೂರು ಬಂದರು ಪ್ರದೇಶವನ್ನು ವಶಕ್ಕೆ ಪಡೆಯುವ ಪೋರ್ಚುಗೀಸರ ಹುಣ್ಣಾರವೂ ವಿಫಲಗೊಂಡಿತು. ಈ ಹಿನ್ನೆಲೆಯಲ್ಲಿ ಪೊರ್ಚುಗೀಸರು ಜನರ ಮೇಲೆ ವಿಪರೀತ ತೆರಿಗೆ ಹೇರಲಾರಂಭಿಸಿದರು. ಬಸ್ರೂರಿನ ವ್ಯಾಪಾರವನ್ನು ಸಂಪೂರ್ಣವಾಗಿ ಸ್ವಾಧೀನಕ್ಕೆ ತೆಗೆದುಕೊಂಡ ಪೊರ್ಚುಗೀಸರು ಜನರನ್ನು ತಮ್ಮ ಬಂಧನದಲ್ಲಿ ಇರುವಂತೆ ಮಾಡಿದ್ದರು.
    ಅದೇ ಸಮಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಬಸ್ರೂರು ಕಡೆ ಆಗಮಿಸುತ್ತಾರೆ. ಅಷ್ಟರಲ್ಲೇ ಶಿವಾಜಿ ಅವರ ಸಿಂಧೂ ದುರ್ಗಾ ಕೋಟೆ, ಸುರ್ಣದುರ್ಗಾ ಕೋಟೆ ಸ್ಥಾಪನೆಯಾಗಿತ್ತು. ಶಿವಾಜಿಗೂ ಪೋರ್ಚುಗೀಸರು, ಡಚ್ಚರೆಂದರೆ ಆಗಿಬರುತ್ತಿರಲಿಲ್ಲ. ಅವರಿದ್ದ ಸ್ಥಳಕ್ಕೆ ಹೋಗಿ ಶಿವಾಜಿ ದಾಳಿ ನಡೆಸುತ್ತಿದ್ದರು.
    1665ರ ಫೆ.13ರಂದು ಭಾರಿ ನೌಕಾ ಪಡೆಯೊಂದಿಗೆ ಬಂದ ಶಿವಾಜಿ, ಪೋರ್ಚುಗೀಸರಿಂದ ಬಸ್ರೂರು ಬಂಧ ಮುಕ್ತಗೊಳಿಸಿ ಸ್ವಾತಂತ್ರ್ಯ ನೀಡುತ್ತಾರೆ. ಅದೇ ನೆನಪಲ್ಲಿ ಬಸ್ರೂರು ಇಂದಿಗೂ ಫೆ.13ರಂದು ಸ್ವಾತಂತ್ರ್ಯದ ದಿನ ಆಚರಿಸುತ್ತಿದೆ.

    21ರಂದು ‘ಕನ್ನಡದ ನೆಲದಲ್ಲಿ ಶಿವಾಜಿ’: ಶಿವಾಜಿ ಮಹಾರಾಜ್ ಬಸ್ರೂರನ್ನು ಬಂಧ ಮುಕ್ತಿಗೊಳಿಸಿದ ಹಿನ್ನೆಲೆಯಲ್ಲಿ ಫೆ.21ರಂದು ಸಾಯಂಕಾಲ 4ಕ್ಕೆ ಬಸ್ರೂರು ಶ್ರೀ ಶಾರದಾ ಕಾಲೇಜು ಮೈದಾನದಲ್ಲಿ ‘ಕನ್ನಡದ ನೆಲದಲ್ಲಿ ಶಿವಾಜಿ’ ಎನ್ನುವ ಕಾರ್ಯಕ್ರಮ ಯುವಾ ಬ್ರಿಗೇಡ್ ವತಿಯಿಂದ ನಡೆಯಲಿದೆ. ದೇಶದ ವಿವಿಧ ಕಡೆಯಿಂದ ತರುಣರು ಬೈಕ್ ರ‌್ಯಾಲಿ ಮೂಲಕ ಬಸ್ರೂರು ಸೇರಲಿದ್ದು, ಪ್ರಮುಖ ಬೀದಿಯಲ್ಲಿ ಶೋಭಾಯಾತ್ರೆ ನಡೆಯಲಿದೆ. ಪೇಜಾವರ ಮಠ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ.
    12 ಅಡಿ ಎತ್ತರದ ಪ್ರತಿಮೆ: ಉಡುಪಿ: ಬಸ್ರೂರಿನ ಮುಖ್ಯವೃತ್ತದಲ್ಲಿ ಫೆ.21ರಂದು ಸಾಯಂಕಾಲ 4 ಗಂಟೆಗೆ 12 ಅಡಿ ಎತ್ತರದ ಶಿವಾಜಿ ಪ್ರತಿಮೆ ಅನಾವರಣ ಮಾಡಲಾಗುವುದು ಎಂದು ಯುವಾ ಬ್ರಿಗೇಡ್ ದಕ್ಷಿಣ ಕನ್ನಡ ವಿಭಾಗ ಸಂಚಾಲಕ ನಿರಂಜನ ತಲ್ಲೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಬಸ್ರೂರಿನ ಬಂದರನ್ನು ಪೋರ್ಚುಗೀಸರಿಂದ ಬಿಡುಗಡೆ ಮಾಡಿದ್ದನ್ನು ಸ್ಮರಿಸುವ ಸಲುವಾಗಿ ಯುವಾ ಬ್ರಿಗೇಡ್ ತಂಡ ಉತ್ತರ ಕರ್ನಾಟಕದಿಂದ ಗದಗ ಶಿವಾಜಿ ಮಹಾರಾಜರ ಮೂಲಸ್ಥಾನಕ್ಕೆ ಭೇಟಿ ನೀಡಲಿದೆ. ಇನ್ನೊಂದು ತಂಡ ಬೆಂಗಳೂರು-ಕೋಲಾರದಿಂದ ಹೊರಟು ಶಿವಾಜಿ ಮಹಾರಾಜರ ಸಮಾಧಿ, ಕೆಳದಿಯ ಚೆನ್ನಮ್ಮನ ನೆಲೆ ಸಂದರ್ಶಿಸಿ ಮೈಸೂರಿನಿಂದ ಮಂಗಳೂರು ಮಾರ್ಗವಾಗಿ ಬಸ್ರೂರು ಸೇರಲಿದೆ ಎಂದರು.
    ವಿಶ್ವದಾಖಲೆಯ ಭಿತ್ತಿ ಚಿತ್ರ
    ಪಡುಬಿದ್ರಿ: ಪಲಿಮಾರಿನ ಚಿತ್ರಾಲಯ ಆರ್ಟ್ ಗ್ಯಾಲರಿಯಲ್ಲಿ ಟರಕೋಟ ಕಲಾವಿದ ವೆಂಕಿ ಪಲಿಮಾರ್ ಮಾರ್ಗದರ್ಶನದಲ್ಲಿ 30 ಅಡಿ ಎತ್ತರ ಹಾಗೂ 21 ಅಡಿ ಅಗಲದ ಛತ್ರಪತಿ ಶಿವಾಜಿ ಮಹಾರಾಜರ ಭಿತ್ತಿ ಚಿತ್ರ ರಚಿಸಲಾಗಿದ್ದು, ಬಸ್ರೂರಿನಲ್ಲಿ ಫೆ.21ರಂದು ಅನಾವರಣಗೊಳ್ಳಲಿದೆ.
    ಕಲಾವಿದರಾದ ವರ್ಣಿತಾ ಕಾಮತ್, ರಾಧಿಕಾ ಭಟ್, ಪದ್ಮಾವತಿ ಕಾಮತ್. ಶಕುಂತಳಾ ಶೆಣೈ, ಜ್ಯೋತಿ ಶೇಟ್, ಲಾರೆನ್ ಪಿಂಟೋ, ಉಷಾ ದೇವಿ ಅವರ ಸಹಕಾರದಲ್ಲಿ 12 ದಿನಗಳಲ್ಲಿ ಇದನ್ನು ನಿರ್ಮಿಸಲಾಗಿದೆ. 4 ಕ್ವಿಂಟಾಲ್ ಇಂಗ್ಲಿಷ್ ಮ್ಯಾಗಝಿನ್, 7 ಕೆ.ಜಿ. ಫೆವಿಕಾಲ್, 300 ಡ್ರಾಯಿಂಗ್ ಶೀಟ್ ಬಳಸಿರುವ ಕೊಲಾಜ್ ಚಿತ್ರ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಮೂಲಕ ವಿಶ್ವದಾಖಲೆ ನಿರ್ಮಾಣಕ್ಕೂ ಪ್ರಯತ್ನ ನಡೆದಿದೆ. ಈ ಮೊದಲು ವೆಂಕಿ ಪಲಿಮಾರು ಮಾರ್ಗದರ್ಶನದಲ್ಲಿ 23 ಅಡಿಯ ಸ್ವಾಮಿ ವಿವೇಕಾನಂದರ ಚಿತ್ರ ರಚಿಸಿದ್ದು, ಅದು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ವಿಶ್ವದಾಖಲೆಗೆ ಪಾತ್ರವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts