More

    ಪಕ್ಕದ ಮನೆಗೆ ಹೋಗಿ ಅಮ್ಮನನ್ನು ಬೈದಂತೆ! ವೀರ್​ ದಾಸ್​​ ಭಾಷಣಕ್ಕೆ ಲೇಖಕನ ಅಸಮಾಧಾನ

    ನವದೆಹಲಿ: ಅಂತರರಾಷ್ಟ್ರೀಯ ಮನ್ನಣೆ ಪಡೆದ ಭಾರತೀಯ ಲೇಖಕ ಚೇತನ್​ ಭಗತ್​ ಅವರು, ಸ್ಟಾಂಡಪ್​ ಕಮೆಡಿಯನ್ ವೀರ್​ ದಾಸ್​​ರ ದೇಶದ ಬಗೆಗಿನ ‘ಟು ಇಂಡಿಯಾಸ್​​’ ವಿಡಂಬನಾತ್ಮಕ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ನನ್ನ ದೇಶದಲ್ಲಿ ನನಗೆ ಎಷ್ಟೋ ಲೋಪಗಳು ಕಾಣಬಹುದು… ಆದರೆ ನಾನದನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಸಾರ್ವಜನಿಕವಾಗಿ ನಿಂದಿಸುವುದಿಲ್ಲ” ಎಂದಿದ್ದಾರೆ.

    ಸ್ಟಾಂಡಪ್​ ಕಮೆಡಿಯನ್ ಹಾಗೂ ನಟ ವೀರ್​ ದಾಸ್​ ಅಮೆರಿಕದ ಜಾನ್​ ಎಫ್​ ಕೆನ್ನೆಡಿ ಸೆಂಟರ್​ನಲ್ಲಿ ಭಾರತದ ಬಗ್ಗೆ ವಿಡಂಬನೆ ಮಾಡಿದ ತಮ್ಮ ಭಾಷಣದ ವಿಡಿಯೋ ತುಣುಕನ್ನು ಯೂಟ್ಯೂಬ್​ನಲ್ಲಿ ಶೇರ್​ ಮಾಡಿದಾಗಿನಿಂದ ಹಲವು ರಾಷ್ಟ್ರಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವಿಚಾರವಾಗಿ ‘ಟು ಸ್ಟೇಟ್ಸ್​​’ ಇಂಗ್ಲಿಷ್​ ಕಾದಂಬರಿಯ ಲೇಖಕರಾದ ಚೇತನ್​ ಭಗತ್​​ ತಮ್ಮ ಅಭಿಪ್ರಾಯವನ್ನು ಟ್ವೀಟ್​ ಮೂಲಕ ತಿಳಿಸಿದ್ದಾರೆ.

    “ನಾನು ನನ್ನ ತಾಯಿಯೊಂದಿಗೆ ಜಗಳವಾಡಬಹುದು, ಅವಳಲ್ಲಿ ತಪ್ಪು ಕಂಡುಹಿಡಿಯಬಹುದು.. ಆದರೆ ಪಕ್ಕದ ಮನೆಗೆ ಹೋಗಿ ಅವಳನ್ನು ನಿಂದಿಸಲು ತೊಡಗುವುದಿಲ್ಲ. ನನ್ನ ದೇಶದಲ್ಲಿ ನನಗೆ ನೂರು ತಪ್ಪುಗಳು ಕಾಣಬಹುದು.. ಆದರೆ ನಾನದನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಸಾರ್ವಜನಿಕವಾಗಿ ನಿಂದಿಸುವುದಿಲ್ಲ. ಇದು ಪ್ರಾಯಶಃ ನನ್ನ ಯೋಚನೆ ಮಾತ್ರ ಆಗಿರಬಹುದು. ಆದರೂ ಕೆಲವು ಕೆಲಸಗಳನ್ನು ಮಾಡಬಾರದು” ಎಂದು ಭಗತ್​ ಟ್ವೀಟಿಸಿದ್ದಾರೆ.

    ಚೇತನ್​ ಭಗತ್​​ರ ಈ ಟ್ವೀಟ್​ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. “ಈ ಇಂಟರ್​ನೆಟ್​ ಯುಗದಲ್ಲಿ ಎಲ್ಲವೂ ಜಗಜ್ಜಾಹೀರಾಗಿರುವಾಗ ವೀರ್​ ದಾಸ್​ ಎಲ್ಲಿ ಮಾತನಾಡಿದರು ಎಂಬುದು ಅಪ್ರಸ್ತುತ” ಎಂದೊಬ್ಬರು ಹೇಳಿದ್ದಾರೆ. ಹಲವರು, “ಪ್ರಜಾಪ್ರಭುತ್ವದಲ್ಲಿ ಕಾಮೆಂಟ್​ ಮಾಡುವುದು ಹಕ್ಕು” ಎಂದಿದ್ದಾರೆ. “ವಿಪರ್ಯಾಸವೆಂದರೆ ನಟಿ ಕಂಗನಾ ರಣಾವತ್​ ದೇಶದ ಸ್ವಾತಂತ್ರ್ಯವನ್ನು ಭಿಕ್ಷೆ ಎಂದು ಕರೆದಾಗ ಮಾತಾಡದ ಜನರು ವೀರ್​ ದಾಸ್​ ದೇಶದ ಪರಿಸ್ಥಿತಿಯ ಬಗ್ಗೆ ಮಾತಾಡಿದಾಗ ವಿರೋಧ ವ್ಯಕ್ತಪಡಿಸಿದ್ದಾರೆ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)

    VIDEO| ಭಾರತದ ಬಗ್ಗೆ ಅಮೆರಿಕದಲ್ಲಿ ‘ವಿಡಂಬನೆ’ ಮಾಡಿದ ಕಾಮೆಡಿಯನ್​​! ತರಾಟೆಗೆ ತೆಗೆದುಕೊಂಡ ನೆಟ್ಟಿಗರು

    VIDEO| ಹಳೇ ಡೈಲಾಗ್​ ನೆನಪಿಸಿ ರೈತರನ್ನು ಅಭಿನಂದಿಸಿದ ರಾಹುಲ್​ ಗಾಂಧಿ!

    ದಾಖಲೆ ಯಶಸ್ಸಿನೊಂದಿಗೆ ವಿವಾದಕ್ಕೆ ಸಿಲುಕಿದ ಜೈಭೀಮ್​! ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts