More

    ಸನ್‌ರೈಸರ್ಸ್‌ ಎದುರು ಶೈನ್ ಆಗುವುದೇ ಚೆನ್ನೈ ಸೂಪರ್‌ಕಿಂಗ್ಸ್

    ದುಬೈ: ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇಆ್ ಹಂತ ಕೈತಪ್ಪುವ ಭಯದಲ್ಲಿರುವ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಮಂಗಳವಾರ ನಡೆಯಲಿರುವ ಐಪಿಎಲ್-13ರ ತನ್ನ 8ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಹಿಂದಿನ ಆವೃತ್ತಿಗಳಲ್ಲಿ ಅಂಕಪಟ್ಟಿಯಲ್ಲಿ ಅಗ್ರ 3ರೊಳಗೆ ಸ್ಥಾನ ಪಡೆಯುತ್ತಿದ್ದ ಸಿಎಸ್‌ಕೆ, ಈ ಬಾರಿ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಜಯ ದಾಖಲಿಸಿ 4 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಅನುಭವಿ ಆಟಗಾರರನ್ನೇ ಹೊಂದಿದ್ದರೂ ತಂಡ ಸಂಯೋಜನೆಯೇ ಧೋನಿಗೆ ಹಿನ್ನಡೆಯಾಗಿದೆ. ಮತ್ತೊಂದೆಡೆ, ಲೀಗ್‌ನಲ್ಲಿ ಇದುವರೆಗೆ ಗೆಲುವಿಗಿಂತ ಸೋಲನ್ನೇ ಹೆಚ್ಚಾಗಿ ಕಂಡಿರುವ ಸನ್‌ರೈಸರ್ಸ್‌ ಗೆಲುವಿನ ಹಳಿ ಮರಳುವ ವಿಶ್ವಾಸದಲ್ಲಿದೆ. ಟೂರ್ನಿಯಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಸನ್‌ರೈಸರ್ಸ್‌ 7 ರನ್‌ಗಳಿಂದ ರೋಚಕ ಜಯ ದಾಖಲಿಸಿತ್ತು.

    * ಒತ್ತಡದಲ್ಲಿ ಸನ್‌ರೈಸರ್ಸ್‌
    ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಕಡೇ ಕ್ಷಣದಲ್ಲಿ ಸೋಲಿನ ರುಚಿ ಕಂಡ ಡೇವಿಡ್ ವಾರ್ನರ್ ಬಳಗ ಗೆಲುವಿನ ಹಳಿಗೇರುವ ತವಕದಲ್ಲಿದೆ. ಸದ್ಯ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌, ಮುಂದಿನ ಪಂದ್ಯಗಳನ್ನು ಒತ್ತಡ ರಹಿತವಾಗಿ ಆಡುವ ದೃಷ್ಟಿಯಿಂದ ಗೆಲುವು ಅನಿವಾರ್ಯವಾಗಿದೆ. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಅನನುಭವಿಗಳನ್ನೇ ಹೆಚ್ಚಾಗಿ ನಂಬಿಕೊಂಡಿದೆ. ಜತೆಗೆ ಭುವನೇಶ್ವರ್ ಕುಮಾರ್ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಇತರ ವಿಭಾಗದಿಂದ ಬೆಂಬಲದ ಅಗತ್ಯವಿದೆ. ಕಳೆದ ರಾಜಸ್ಥಾನ ತಂಡವನ್ನು 78 ರನ್‌ಗಳಿಗೆ 5 ವಿಕೆಟ್ ಕಬಳಿಸಿದರೂ ಡೆತ್ ಓವರ್‌ಗಳಲ್ಲಿ ಬೌಲರ್‌ಗಳು ವಿಫಲರಾಗಿದ್ದರು.

    *ಸಿಎಸ್‌ಕೆಗೆ ಗೆದ್ದರಷ್ಟೇ ಉಳಿಗಾಲ
    ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ 7ನೇ ಸ್ಥಾನಕ್ಕೆ ಕುಸಿದಿರುವ ಧೋನಿ ಬಳಗಕ್ಕೆ ಗೆಲುವೊಂದೇ ಮಾರ್ಗವಾಗಿದೆ. ಈ ಪಂದ್ಯದಲ್ಲೂ ಸೋತರೆ ಧೋನಿ ಬಳಗದ ಮುಂದಿನ ಹಾದಿ ಬಹುತೇಕ ಕಮರಲಿದೆ. ಹೀಗಾಗಿ ಸಿಎಸ್‌ಕೆಗೆ ಈ ಪಂದ್ಯ ಅಗ್ನಿಪರೀಕ್ಷೆಯಾಗಿದೆ. ಮುಂದಿನ 7 ಪಂದ್ಯಗಳಲ್ಲಿ ಕನಿಷ್ಠ 6ರಲ್ಲಿ ಜಯಿಸಬೇಕಾದ ಒತ್ತಡದಲ್ಲಿರುವ ಸಿಎಸ್‌ಕೆ ಪಾಲಿಗೆ ಪ್ರತಿ ಪಂದ್ಯವೂ ಪ್ರಮುಖವಾಗಿದೆ. ವಿಶ್ವ ಶ್ರೇಷ್ಠ ಆರಂಭಿಕರನ್ನು ಹೊಂದಿದ್ದರೂ ಮಧ್ಯಮ ಕ್ರಮಾಂಕವೇ ಧೋನಿ ಪಾಲಿಗೆ ದೊಡ್ಡ ತಲೆನೋವಾಗಿದೆ. ವಿಶ್ವದ ಬೆಸ್ಟ್ ಫಿನಿಷರ್ ಎಂದು ಧೋನಿ ಹೆಸರಾಗಿದ್ದರೂ ಈ ಬಾರಿ ಅವರ ಮ್ಯಾಜಿಕ್ ನಡೆಯುತ್ತಿಲ್ಲ. ಆಲ್ರೌಂಡರ್‌ಗಳಾದ ಸ್ಯಾಮ್ ಕರ‌್ರನ್, ರವೀಂದ್ರ ಜಡೇಜಾ, ಡ್ವೇನ್ ಬ್ರಾವೊ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದರೂ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಆಟ ಬರುತ್ತಿಲ್ಲ. ಬ್ಯಾಟಿಂಗ್ ವಿಭಾಗವೇ ದೊಡ್ಡ ಸಮಸ್ಯೆ ಎಂದು ಧೋನಿ ಹಲವು ಬಾರಿ ಹೇಳಿಕೊಂಡಿದ್ದು ಉಂಟು.

    * ಟೀಮ್ ನ್ಯೂಸ್
    ಸನ್‌ರೈಸರ್ಸ್‌: ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತ ಪೇರಿಸಲು ವಿಲವಾಗುತ್ತಿರುವ ಕೇನ್ ವಿಲಿಯಮ್ಸನ್ ಬದಲಿಗೆ ಮೊಹಮದ್ ನಬಿ ವಾಪಸಾಗಬಹುದು. ಕಳೆದ ಪಂದ್ಯದಲ್ಲಿ ಡೆತ್ ಓವರ್‌ಗಳಲ್ಲಿ ಸಮಸ್ಯೆ ಕಾಡಿದ ಹಿನ್ನೆಲೆಯಲ್ಲಿ ನಬಿ ಆಯ್ಕೆಯನ್ನು ಪರಿಗಣಿಸಬಹುದು. ಸಂದೀಪ್ ಶರ್ಮ ಬದಲಿಗೆ ಸಿದ್ಧಾರ್ಥ್ ಕೌಲ್‌ಗೆ ಅವಕಾಶ ನೀಡಬಹುದು.
    ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ಎದುರು 5 ವಿಕೆಟ್ ಸೋಲು.

    * ಸಂಭಾವ್ಯ ತಂಡ: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್ ಸ್ಟೋ (ವಿಕೀ), ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್/ಮೊಹಮದ್ ನಬಿ, ವಿಜಯ್ ಶಂಕರ್, ಪ್ರಿಯಂ ಗಾರ್ಗ್, ಅಭಿಷೇಕ್ ಶರ್ಮ, ರಶೀದ್ ಖಾನ್, ಸಂದೀಪ್ ಶರ್ಮ/ಸಿದ್ದಾರ್ಥ್ ಕೌಲ್, ಖಲೀಲ್ ಅಹದಮ್, ಟಿ.ನಟರಾಜನ್.

    ಚೆನ್ನೈ ಸೂಪರ್‌ಕಿಂಗ್ಸ್: ಆರ್‌ಸಿಬಿ ವಿರುದ್ಧದ ವೈಲ್ಯದ ನಡುವೆಯೂ ಎನ್. ಜಗದೀಶನ್ ಕೊಂಚಮಟ್ಟಿಗೆ ಬ್ಯಾಟ್ ಬೀಸಿದ್ದರು. ಇದರಿಂದಾಗಿ ಮತ್ತೊಂದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಸೋಲಿನ ಹೊರತಾಗಿಯೂ ಧೋನಿ ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳುವ ಸಾಧ್ಯತೆಗಳಿವೆ.
    ಕಳೆದ ಪಂದ್ಯ: ಆರ್‌ಸಿಬಿ ಎದುರು 37 ರನ್ ಸೋಲು.

    * ಸಂಭಾವ್ಯ ತಂಡ:
    ಶೇನ್ ವ್ಯಾಟ್ಸನ್, ಅಂಬಟಿ ರಾಯುಡು, ಪ್ಲೆಸಿಸ್, ಎಂಎಸ್ ಧೋನಿ (ವಿಕೀ, ನಾಯಕ), ಸ್ಯಾಮ್ ಕರ‌್ರನ್, ಎನ್.ಜಗದೀಶನ್, ಡ್ವೇನ್ ಬ್ರಾವೊ, ರವೀಂದ್ರ ಜಡೇಜಾ, ಕರ್ಣ್ ಶರ್ಮ, ಶಾರ್ದೂಲ್ ಠಾಕೂರ್, ದೀಪಕ್ ಚಹರ್.

    ಪಂದ್ಯ ಆರಂಭ: ರಾತ್ರಿ 7.30ಕ್ಕೆ
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

    ಮುಖಾಮುಖಿ: 13, ಸನ್‌ರೈಸರ್ಸ್‌: 4, ಸಿಎಸ್‌ಕೆ: 9
    ಕಳೆದ ಮುಖಾಮುಖಿ: ಸನ್‌ರೈಸರ್ಸ್‌ಗೆ 7 ರನ್ ಜಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts