More

    ಮಂಗಳೂರು ಏರ್‌ಪೋರ್ಟ್‌ ರನ್‌ವೇ ಮೇಲೆ ಚಿರತೆ ಓಡಾಟ

    ಶ್ರವಣ್‌ಕುಮಾರ್ ನಾಳ ಪುತ್ತೂರು
    ಆನೆ, ಚಿರತೆ, ಹಂದಿ, ಜಿಂಕೆ, ಕಡವೆ ಮತ್ತಿತರ ಕಾಡುಪ್ರಾಣಿಗಳು ನಾಡಿಗೆ ಲಗ್ಗೆಯಿಡುವುದು ಸಾಮಾನ್ಯ. ಆದರೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿರತೆ ಕಾಟ ಶುರುವಾಗಿದೆ. ರಾತ್ರಿ ವೇಳೆ ರನ್‌ವೇ ಮೇಲೆಯೇ 3-4 ಚಿರತೆಗಳು ಕಂಡುಬರುತ್ತಿದ್ದು, ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
    ಅರಣ್ಯ ಇಲಾಖೆಯ ಪ್ರಾಣಿ ಸರ್ವೇ ವರದಿ ಪ್ರಕಾರ ಐದು ವರ್ಷಗಳ ಹಿಂದೆ ಮಂಗಳೂರು ರೇಂಜ್ ವ್ಯಾಪ್ತಿಯಲ್ಲಿ 2-3 ಚಿರತೆಗಳಿದ್ದು, ಪ್ರಸ್ತುತ 9ಕ್ಕೆ ಏರಿಕೆಯಾಗಿದೆ. ಸಾರ್ವಜನಿಕರು ಹೇಳುವಂತೆ ಕಟೀಲು, ಬಜ್ಪೆ, ಮಂಗಳೂರು ಅರಣ್ಯ ವ್ಯಾಪ್ತಿಯಲ್ಲಿ 15ಕ್ಕೂ ಅಧಿಕ ಚಿರತೆಗಳಿವೆ. ತಿಂಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮರೋಳಿಯಲ್ಲೂ ಚಿರತೆ ಓಡಾಡಿತ್ತು. ಬಳಿಕ ಕಂಕನಾಡಿ ಬಳ್ಳಾಲ್‌ಗುಡ್ಡೆಯಲ್ಲೂ ಹೆಜ್ಜೆ ಗುರುತು ಪತ್ತೆಯಾಗಿತ್ತು. ಬಜ್ಪೆ ಭಾಗದಿಂದ ಬಂದ ಚಿರತೆಯೇ ನಗರ ಪ್ರದೇಶದಲ್ಲಿ ಕಾಣಿಸಿಕೊಂಡಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

    ಚುರುಕಾದ ಅಧಿಕಾರಿಗಳು: ಬಜ್ಪೆಯ ಕೆಂಜಾರಿನಲ್ಲಿ ಗುಡ್ಡದ ಮೇಲಿರುವ ವಿಮಾನ ನಿಲ್ದಾಣದ ಸುತ್ತಮುತ್ತ ಕಾಡುಗಳಲ್ಲಿರುವ ಚಿರತೆಗಳ ಓಡಾಟ ಸಾಮಾನ್ಯವಾಗಿತ್ತು. ಆದರೆ ಆರೇಳು ತಿಂಗಳುಗಳಿಂದ ರಾತ್ರಿ ಹೊತ್ತು ವಿಮಾನ ನಿಲ್ದಾಣ ಪ್ರವೇಶಿಸುತ್ತಿವೆ. ಆರಂಭದಲ್ಲಿ ಒಂದು ಚಿರತೆ ರನ್‌ವೇ ಮೇಲೆ, ರನ್‌ವೇ ಸುತ್ತ ಕಾಣಿಸಿಕೊಳ್ಳುತ್ತಿತ್ತು. ಆಹಾರ ಅರಸಿ ಆಕಸ್ಮಿಕವಾಗಿ ಬಂದಿರಬಹುದು ಎಂದು ಆಗ ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, 2-3 ತಿಂಗಳುಗಳಿಂದ ಚಿರತೆಗಳ ಸಂಖ್ಯೆ ಮೂರ್ನಾಲ್ಕಕ್ಕೆ ಏರಿಕೆಯಾಗಿದೆ. ವಿಮಾನ ಲ್ಯಾಂಡಿಂಗ್ ಅಥವಾ ಟೇಕ್‌ಆಫ್ ಸಂದರ್ಭ ರನ್‌ವೇ ಆಸುಪಾಸು ಪ್ರಾಣಿಗಳ ಓಡಾಟ ತೀರಾ ಅಪಾಯಕಾರಿಯಾದ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

    ಚೀತಾ ಸಂಖ್ಯೆ ಏರಿಕೆ: ಶಿರಾಡಿ, ಚಾರ್ಮಾಡಿ ವ್ಯಾಪ್ತಿಗಿಂತ ಮಂಗಳೂರು ಅರಣ್ಯ ಭಾಗದಲ್ಲಿ ಚಿರತೆ ಪ್ರಮಾಣ ಏರಿಕೆಯಾಗಿದೆ. ಚಿರತೆಗಳ ಪ್ರಮುಖ ಆಹಾರ ಮಂಗಗಳು. ಮಂಗಳೂರು ಅರಣ್ಯ ವ್ಯಾಪ್ತಿಯಲ್ಲಿ ಮಂಗಗಳ ಪ್ರಮಾಣ ಕಡಿಮೆ ಇದ್ದು, ಚಿರತೆಗಳು ಪರ್ಯಾಯ ಆಹಾರವಾಗಿ ಬೀದಿನಾಯಿಗಳನ್ನು ಬೇಟೆಯಾಡುತ್ತಿವೆ. ದನ, ಕರುಗಳ ಮೇಲೆಯೂ ದಾಳಿ ಮಾಡುತ್ತಿವೆ. ಸಾಮಾನ್ಯ ಕಾಡುಪೊದೆಗಳಲ್ಲಿ ಹಗಲು ಕಳೆಯುವ ಚಿರತೆಗಳು ರಾತ್ರಿಯಾಗುತ್ತಿದ್ದಂತೆ ಆಹಾರ ಅರಸಿ ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಬಜ್ಪೆ, ಕಟೀಲು ಭಾಗದಲ್ಲಿ ಏಳೆಂಟು ವರ್ಷಗಳಿಂದ ಖಾಸಗಿ ಅರಣ್ಯವೂ ಹೆಚ್ಚಿದ್ದು, ಇದು ಚಿರತೆಗಳ ಸಂಖ್ಯೆ ಹೆಚ್ಚಳಕ್ಕೆ ಪೂರಕವಾಗಿದೆ ಎನ್ನುತ್ತಿದೆ ಇಲಾಖೆ.

    ಸೆರೆ ಹಿಡಿದ ಚಿರತೆ ಎಲ್ಲಿಗೆ?: ವಿಮಾನ ನಿಲ್ದಾಣದ ಸುತ್ತಮುತ್ತ ಸೆರೆಯಾಗುವ ಚಿರತೆಯನ್ನು ಎಲ್ಲಿಗೆ ಸ್ಥಳಾಂತರಿಸುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ. ಚಾರ್ಮಾಡಿ ಘಾಟ್ ಅಥವಾ ಪುತ್ತೂರು ಗ್ರಾಮಾಂತರ ಭಾಗದ ಅರಣ್ಯಕ್ಕೆ ಬಿಡುವ ಯೋಚನೆ ಇಲಾಖೆಯಲ್ಲಿದೆ. ದ.ಕ, ಉಡುಪಿ ಜಿಲ್ಲೆಗಳ ಜನವಸತಿ ಪ್ರದೇಶಗಳಲ್ಲಿ ಪತ್ತೆಯಾಗುತ್ತಿರುವ ಚಿರತೆಗಳನ್ನು ಇಲಾಖೆ ಹತ್ತಿರದಲ್ಲಿಯೇ ಬಿಡುತ್ತಿರುವುದರಿಂದ ಮತ್ತೆ ಅದು ನಾಡಿಗೆ ಬಂದು ತೊಂದರೆ ಕೊಡುತ್ತಿರುವ ಉದಾಹರಣೆಗಳಿವೆ. ಹಾಗಾಗಿ ಅರಣ್ಯ ಪ್ರದೇಶಕ್ಕೇ ಬಿಡುವುದು ಉತ್ತಮ ಎಂಬ ಅಭಿಪ್ರಾಯವನ್ನೂ ಇಲಾಖೆ ಪರಿಶೀಲಿಸುತ್ತಿದೆ.

    ಮೂರು ಬೋನು ಅಳವಡಿಕೆ: ಚಿರತೆಗಳಿಂದ ಭಯಗೊಂಡಿರುವ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು, ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯೂ ಚುರುಕಾಗಿದ್ದು, ಚಿರತೆ ಪತ್ತೆ ಕಾರ್ಯಾಚರಣೆ ಆರಂಭಿಸಿದೆ. ಚಿರತೆ ಸೆರೆ ಹಿಡಿಯಲು ವಿಮಾನ ನಿಲ್ದಾಣದ ಒಳಗೆ 3 ಬೋನುಗಳನ್ನು ಇಡಲಾಗಿದೆ. ಸುತ್ತಲಿನ ಅರಣ್ಯ ಪ್ರದೇಶದಲ್ಲೂ 2 ಬೋನು ಇಡಲಾಗಿದೆ. ಒಟ್ಟು 5 ಬೋನುಗಳನ್ನು ಅಳವಡಿಸಲಾಗಿದ್ದು, ಇದುವರೆಗೆ ಚಿರತೆ ಪತ್ತೆಯಾಗಿಲ್ಲ.

    ಹೇಗೆ ಪ್ರವೇಶ?: ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸದಂತೆ ಭದ್ರ ತಡೆಗೋಡೆಗಳಿವೆ. ಆದರೆ ಅದನ್ನೂ ಭೇದಿಸಿ ಚಿರತೆಗಳು ಒಳನುಗ್ಗುತ್ತಿವೆ. ಐದಾರು ಅಡಿ ಎತ್ತರದ ತಡೆಗೋಡೆಗಳನ್ನು ಚಿರತೆಗಳು ಸುಲಭವಾಗಿ ಹಾರಬಲ್ಲವು. ಏರ್‌ಪೋರ್ಟ್ ಒಳಗಿನಿಂದ ಮಳೆ ನೀರು ಹೋಗಲು ಅಳವಡಿಸಿರುವ ಚರಂಡಿಯ ಮೂಲಕವೂ ಪ್ರವೇಶಿಸಬಹುದು. ಅಲ್ಲದೆ, ಕೆಲವು ಕಡೆ ಕಬ್ಬಿಣದ ಗ್ರಿಲ್‌ಗಳು ಶಿಥಿಲಗೊಂಡಿದ್ದು, ಆ ಮೂಲಕವೂ ಚಿರತೆಗಳು ವಿಮಾನ ನಿಲ್ದಾಣಕ್ಕೆ ನುಗ್ಗಲು ಅವಕಾಶಗಳಿವೆ ಎಂದು ಹೇಳುತ್ತಾರೆ ಅಧಿಕಾರಿಗಳು.

    ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ಮತ್ತು ಸುತ್ತಮುತ್ತ ಚಿರತೆಗಳು ಓಡಾಡುತ್ತಿರುವ ಬಗ್ಗೆ ಏರ್‌ಪೋರ್ಟ್ ಅಧಿಕಾರಿಗಳಿಂದ ಬಂದ ಮನವಿಯ ಮೇರೆಗೆ ಚಿರತೆ ಸೆರೆ ಹಿಡಿಯಲು ಬೋನುಗಳನ್ನು ಅಳವಡಿಸಲಾಗಿದೆ. ಈ ಭಾಗದಲ್ಲಿ 5 ವರ್ಷದ ಹಿಂದೆ 2-3 ಇದ್ದ ಚಿರತೆ ಪ್ರಮಾಣ ಇತ್ತೀಚೆಗೆ 9ಕ್ಕೆ ಏರಿಕೆಯಾಗಿದೆ. ಸಾರ್ವಜನಿಕರಲ್ಲಿ ಭಯ ಬೇಡ, ಚಿರತೆಯಂತಹ ಪ್ರಾಣಿಗಳು ಕಂಡುಬಂದರೆ ಇಲಾಖೆಗೆ ಮಾಹಿತಿ ನೀಡಿ.
    -ಪ್ರಶಾಂತ್ ಪೈ, ಆರ್‌ಎಫ್‌ಒ, ಮಂಗಳೂರು ಅರಣ್ಯ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts