More

    ಸಾಧಕ-ಬಾಧಕ ಪರಿಶೀಲಿಸಿ ತೀರ್ಮಾನ



    ಕಾರವಾರ: ರಾಜ್ಯದಲ್ಲಿ ಪ್ರಬಲವಾಗಿರುವ ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿಗೆ ಸೇರಿಸಬೇಕು ಎಂಬ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ವರದಿ ಸಲ್ಲಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಸಾಧಕ-ಬಾಧಕ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

    ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ ಬೇಡಿಕೆಯ ಬಗ್ಗೆ ಸದನದಲ್ಲಿ, ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಆದರೆ, ಜಾರಿಗೆ ಕೆಲವು ಕಾನೂನಾತ್ಮಕ, ಸಂವಿಧಾನಬದ್ಧ ತೊಂದರೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳು ಇಲಾಖೆ ಕಾರ್ಯದರ್ಶಿಗಳಿಂದ ವರದಿ ಕೇಳಿದ್ದಾರೆ. ನಾನು 26 ಜಿಲ್ಲೆಗಳಿಂದ ವರದಿ ನೀಡುವಂತೆ ಸೂಚಿಸಿದ್ದೇನೆ. ಎಲ್ಲ ವರದಿ ಬಂದ ನಂತರ ಕಾನೂನು ತಜ್ಞರ ಅಭಿಪ್ರಾಯ ಪಡೆದು, ಸಾಧಕ-ಬಾಧಕದ ಬಗ್ಗೆ ಯೋಚಿಸಿ ಮುಖ್ಯಮಂತ್ರಿಯವರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

    ಮೀಸಲಾತಿ ಸಂಬಂಧ ವಿವಿಧ ಸಮುದಾಯಗಳು ಬೇಡಿಕೆ ಇಟ್ಟಿವೆ. ಈ ಬಗ್ಗೆ ಸಾಕಷ್ಟು, ಪರ-ವಿರೋಧ ಚರ್ಚೆಗಳು ನಡೆದಿವೆ. ಮೀಸಲಾತಿ ಸಂಬಂಧ ಕುಲಶಾಸ್ತ್ರೀಯ ಅಧ್ಯಯನ ಆಗಲೇ ನಡೆದಿದೆ. ಆದರೆ, ಜನಸಂಖ್ಯೆ ಆಧಾರದ ಮೇಲೆ ಎಸ್​ಟಿ ಮೀಸಲಾತಿ ನೀಡುವಂತೆ ಕುರುಬ ಸಮುದಾಯ ಕೇಳುತ್ತಿದೆ. ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ಶೇ. 15ರಿಂದ 17ಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆ ಕೂಡ ಇದೆ. ನ್ಯಾ. ನಾಗಮೋಹನದಾಸ ಅವರ ವರದಿ ಸಹ ಸರ್ಕಾರದ ಮುಂದಿದೆ ಎಲ್ಲವನ್ನೂ ರ್ಚಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.

    ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಬೇಡ

    ರಾಮ ಮಂದಿರ ಎಲ್ಲ ಹಿಂದುಗಳ ದೇವಾಲಯ. ಆ ವಿಚಾರದಲ್ಲಿ ರಾಜಕೀಯ ಬೇಡ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು. ರಾಮ ಮಂದಿರಕ್ಕೆ ಹಣ ನೀಡದವರ ಹೆಸರನ್ನು ಪಟ್ಟಿ ಮಾಡಲಾಗುತ್ತಿದೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಅವರು ಹಾಗೂ ಅವರ ಪಕ್ಷದ ಹಲವು ಶಾಸಕರು ರಾಮ ಮಂದಿರ ನಿರ್ವಣಕ್ಕೆ ಹಣ ನೀಡಿದ್ದಾರೆ. ಆದರೆ, ಅವರು ರಾಜಕೀಯಕ್ಕಾಗಿ ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದರು.

    ಮಾನದಂಡ ಬದಲಾಗಲ್ಲ…

    ಶಾಸಕ ಬಸವರಾಜ ಪಾಟೀಲ ಯತ್ನಾಳ ಅವರ ಹೇಳಿಕೆಗಳು ವೈಯಕ್ತಿಕ. ಅವರ ಹೇಳಿಕೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅವರಿಗೆ ಈಗಾಗಲೇ ಪಕ್ಷದ ವರಿಷ್ಠರು ಶೋಕಾಸ್ ನೋಟಿಸ್ ನೀಡಿದ್ದಾರೆ. ನಾನು ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಶ್ರೀರಾಮುಲು ಪ್ರತಿಕ್ರಿಯಿಸಿದರು. ಬಿಪಿಎಲ್ ಪಡಿತರ ಚೀಟಿಯ ಮಾನದಂಡ ಬದಲಾಗುವುದಿಲ್ಲ. ಜನರಲ್ಲಿ ಗೊಂದಲ, ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts