More

    ಭೂ ಒತ್ತುವರಿ ಪ್ರಕರಣ 15 ದಿನದಲ್ಲೇ ಪರಿಶೀಲಿಸಿ

    ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸುವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೊಸ ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯಲ್ಲಿ ಬಾಕಿ ಇರುವ ಒತ್ತುವರಿ ಪ್ರಕರಣಗಳನ್ನು 15 ದಿನದಲ್ಲಿ ಸಂಪೂರ್ಣವಾಗಿ ಪರಿಶೀಲಿಸುವುದು ಸೇರಿ ಹೊಸ 10 ಸೂಚನೆಗಳನ್ನು ಉಲ್ಲೇಖಿಸಿದೆ.

    ಸೂಚನೆಗಳೇನು?: ಒತ್ತುವರಿ ತೆರವು ಬಾಕಿ ಪ್ರಕರಣಗಳು ಮತ್ತು ಈವರೆಗೆ ಸ್ವೀಕೃತವಾಗಿರುವ ದೂರುಗಳನ್ನು 15 ದಿನದಲ್ಲಿ ಪರಿಶೀಲಿಸಬೇಕು ಜಿಲ್ಲಾಧಿಕಾರಿಗಳು ನಿಗದಿಪಡಿಸಿದ ಗುರಿ ಮತ್ತು ಕಾಲಮಿತಿಯಲ್ಲಿ ಕ್ರಮ ಜರುಗಿಸುವುದೇ ಇರುವುದು, ನಿರ್ಲಕ್ಷ್ಯ, ವಿಳಂಬ ಮತ್ತು ತೆರವುಗೊಳಿಸಲು ವಿಫಲರಾದ ಅಧಿಕಾರಿಗಳ ಶಿಸ್ತು ಕ್ರಮ ಕೈಗೊಳ್ಳಬೇಕು. ನಕಲಿ ದಾಖಲೆಗಳ ಆಧಾರದ ಮೇಲೆ ಭೂ ಕಬಳಿಕೆಯಾಗಿದೆಯೆಂದು ಸಲ್ಲಿಕೆಯಾಗಿರುವ ದೂರು ಅಥವಾ ಸ್ವತಃ ಗಮನಿಸಿರುವ ಪ್ರಕರಣಗಳನ್ನು ತೀರ್ವನಿಸಲು ಕಾಲಮಿತಿ ನಿಗದಿಗೊಳಿಸಿ ಪ್ರತ್ಯೇಕವಾಗಿ ಪರಿಶೀಲಿಸಬೇಕು. ನಕಲಿ ದಾಖಲೆ ಸೃಷ್ಟಿಸುವಲ್ಲಿ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಶಾಮೀಲಾಗಿರುವುದು ಕಂಡುಬಂದರೆ ಕೂಡಲೆ ಅಂಥವರನ್ನು ಅಮಾನತು ಮಾಡಬೇಕು. ನಕಲಿ ದಾಖಲೆ ಸೃಷ್ಟಿಸಿಕೊಟ್ಟಿರುವುದು ಸಾಬೀತಾದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ನ್ಯಾಯಾಲಯದ ತಡೆಯಾಜ್ಞೆ ಇದ್ದಲ್ಲಿ ಅದನ್ನು ತೆರವು ಮಾಡಿಸಲು ತಕ್ಷಣ ಕ್ರಮಕೈಗೊಳ್ಳಬೇಕು. ಸರ್ಕಾರಿ ಸ್ವತ್ತುಗಳಿಗೆ ಸಂಬಂಧಿಸಿ ದಾಖಲಾಗಿರುವ ನ್ಯಾಯಾಲಯ ಪ್ರಕರಣಗಳನ್ನು ಪರಿಣಾಮಕಾರಿ ಕ್ಷೇತ್ರ ಮಟ್ಟದ ಅಧಿಕಾರಿಗಳು ನಿರ್ವಹಿಸುವುದನ್ನು ಖಚಿತಪಡಿಸಬೇಕು. ಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿ ತೀರ್ಪು ಬಂದರೆ ವಿಳಂಬ ಮಾಡದೆ ಕಾನೂನು ಸಲಹೆ ಪಡೆದು ಮೇಲ್ಮನವಿ ಸಲ್ಲಿಸಬೇಕು. ಗುತ್ತಿಗೆ ನೀಡಿರುವ ಸರ್ಕಾರಿ ಜಮೀನುಗಳನ್ನು ಪ್ರಕಣವಾರು ಪರಿಶೀಲಿಸಿ. ಗುತ್ತಿಗೆ ಷರತ್ತು ಪಾಲನೆ, ಹಣ ಪಾವತಿ, ಗುತ್ತಿಗೆ ಮುಗಿದಿರುವ ಪ್ರಕರಣಗಳ ಹಿಂಪಡೆಯುವ ಬಗ್ಗೆ ಪರಿಶೀಲಿಸಬೇಕು. ಭೂ ಸುಧಾರಣೆ ಕಾಯ್ದೆ ಉಲ್ಲಂಘನೆಯಾಗಿರುವ ಪ್ರಕರಣಗಳನ್ನು ಗುರುತಿಸಿ ಕಾನೂನು ಕ್ರಮ ಜರುಗಿಸಬೇಕು. ಒತ್ತುವರಿಯಾಗಿರುವ ಜಮೀನುಗಳನ್ನು ವಶಪಡಿಸಿಕೊಂಡು ಮತ್ತೆ ಒತ್ತುವರಿಯಾಗದಂತೆ ತಂತಿ ಬೇಲಿ ಅಥವಾ ನಾಮಫಲಕ ಹಾಕಿಸಬೇಕು.

    ಸರ್ಕಾರಿ ಜಮೀನು ಒತ್ತುವರಿ ತೆರವು ಹಾಗೂ ಮೇಲ್ಕಂಡ ಅಂಶಗಳ ಬಗ್ಗೆ ತಿಂಗಳಿಗೊಮ್ಮೆ ಪರಿಶೀಲಿಸಬೇಕು.

    ಕೊಳ್ಳೆ ಹೊಡೆದ ಮೇಲೆ ಕ್ರಮ: ಕೇಂದ್ರ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ಸರ್ಕಾರಿ ಭೂಮಿ ಮಂಜೂರಾತಿ, ಗುತ್ತಿಗೆ, ಒತ್ತುವರಿಗಳ ತೆರವುಗೊಳಿಸುವಿಕೆ ಹಾಗೂ ಅಕ್ರಮ ಹಿಡುವಳಿಗಳನ್ನು ಸಕ್ರಮಗೊಳಿಸುವಿಕೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದರಲ್ಲಿ ಕಬಳಿಕೆಯಾಗಿರುವ ಸರ್ಕಾರಿ ಜಮೀನುಗಳನ್ನು ಹಿಂಪಡೆಯುವ ಪ್ರಕ್ರಿಯೆ ಕುಂಟುತ್ತಾ ಸಾಗುತ್ತಿರುವುದು, ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಭೂ ಕಬಳಿಕೆ ಮಾಡಿರುವವರು ಹಾಗೂ ಅಕ್ರಮ ದಾಖಲೆ ಸೃಷ್ಟಿಸಿಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದು ಸೇರಿ ಮತ್ತಿತರರ ಅಂಶಗಳನ್ನು ಕಂಡುಬಂದಿದೆ. ಅಲ್ಲದೆ, ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿ ಕೈತಪ್ಪಿ ಹೋಗುತ್ತಿದೆ. ಹೀಗಾಗಿ, ಕಂದಾಯ ಇಲಾಖೆಯು ಈ ಸುತ್ತೋಲೆ ಹೊರಡಿಸಿದೆ.

    3 ವರ್ಷದವರೆಗೆ ಜೈಲು ಶಿಕ್ಷೆ

    ಭೂ ಕಂದಾಯ ಅಧಿನಿಯಮ 1964ರ ಕಲಂ 192-ಎ, 192- ಬಿ ಹಾಗೂ 192-ಸಿ ಅಡಿಯಲ್ಲಿ ಸರ್ಕಾರಿ ಭೂಮಿ ಅತಿಕ್ರಮಣ, ಕಬಳಿಕೆ ಮಾಡುವ ಉದ್ದೇಶದಿಂದ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸುವುದು, ಒತ್ತುವರಿ ತೆರವು ಕಾರ್ಯ ವಿಳಂಬ, ಭೂ ಕಬಳಿಕೆಗೆ ಪ್ರೇರಣೆ ನೀಡುವುದು ಸೇರಿ ಮತ್ತಿತರರ ಅಪರಾಧಿಗಳಿಗೆ 3 ವರ್ಷವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts