More

    ಚೆಕ್‌ಬೌನ್ಸ್ ನನ್ನ ವ್ಯವಹಾರಕ್ಕೆ ಸಂಬಂಧಿಸಿದ್ದು, ಭ್ರಷ್ಟಾಚಾರವಲ್ಲ: ಸಚಿವ ಮಧು ತಿರುಗೇಟು

    ಶಿವಮೊಗ್ಗ: ಚೆಕ್‌ಬೌನ್ಸ್ ಪ್ರಕರಣ ನನ್ನ ವ್ಯವಹಾರಕ್ಕೆ ಸಂಬಂಧಿಸಿದ್ದು. ಅದು ಭ್ರಷ್ಟಾಚಾರ ಪ್ರಕರಣವಲ್ಲ. ನನ್ನ ಪ್ರಕರಣದ ಬಗ್ಗೆ ಟೀಕೆ ಮಾಡುವ ಬಿಜೆಪಿ ನಾಯಕರು ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.

    12 ವರ್ಷದ ಹಿಂದಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಚೆಕ್‌ಬೌನ್ಸ್ ಆಗಿರುವುದು ನಿಜ. ನನ್ನ ಬಳಿ ಹಣ ಇಲ್ಲವೆಂದಲ್ಲ. ಆದರೆ ಅದನ್ನು ವ್ಯಾವಹಾರಿಕ ರೀತಿಯಲ್ಲೇ ಬಗೆಹರಿಸಿಕೊಳ್ಳುತ್ತೇನೆ. ಆದರೆ ಬಿಜೆಪಿ ನಾಯಕರ ಭ್ರಷ್ಟಾಚಾರದ ಬಗ್ಗೆ ಆ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಚೆಕ್‌ಬೌನ್ಸ್ ಪ್ರಕರಣದಲ್ಲಿ ನನ್ನ ರಾಜೀನಾಮೆ ಕೇಳುತ್ತಿರುವ ಬಿಜೆಪಿ ನಾಯಕರಿಗೆ ನೈತಿಕತೆಯೇ ಇಲ್ಲ. ಇಂದು ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿರುವವರು ಕರೊನಾ ಸಂದರ್ಭದಲ್ಲೂ ಅಕ್ರಮವಾಗಿ ಹಣ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಅವರೆಲ್ಲರೂ ಅವರ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
    ನನ್ನ ಖಾಸಗಿ ವಿಚಾರಗಳ ಬಗ್ಗೆ ಮಾತನಾಡುವ ಮುನ್ನ ಬಿಜೆಪಿ ನಾಯಕರು ಅವರ ಹಿನ್ನೆಲೆಯನ್ನು ಗಮನಿಸಲಿ. ಅವರ ಭ್ರಷ್ಟಾಚಾರಗಳನ್ನು ಬಯಲು ಮಾಡುವುದು ನನಗೆ ದೊಡ್ಡ ವಿಚಾರವೇನಲ್ಲ. ನನ್ನ ತಂದೆ ಬಂಗಾರಪ್ಪ 2004ರಲ್ಲಿ ಬಿಜೆಪಿಗೆ ಹೋಗದಿದ್ದರೆ ಇಂದು ಆ ಪಕ್ಷ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದರು.
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಪ್ರಮುಖರಾದ ಎಸ್.ಪಿ.ದಿನೇಶ್, ಎನ್.ರಮೇಶ್, ವೈ.ಎಚ್. ನಾಗರಾಜ್, ಎಸ್.ಕೆ.ಮರಿಯಪ್ಪ, ವಿಜಯಕುಮಾರ್ ಇತರರಿದ್ದರು.
    ಎರಡೂ ಪ್ರಕರಣ ಬೇರೆ ಬೇರೆ: ನನ್ನ ಚೆಕ್‌ಬೌನ್ಸ್ ಪ್ರಕರಣವನ್ನು ಮರೆಮಾಚಲು ಸಂಸದ ಪ್ರತಾಪ್ ಸಿಂಹ ಅವರ ಸಹೋದರನ ಮೇಲೆ ಮರಗಳ್ಳತನದ ಆರೋಪ ಹೊರಿಸಲಾಗಿದೆ ಎಂಬುದು ಬಾಲಿಶ ಹೇಳಿಕೆ. ನನ್ನ ವಿಷಯಕ್ಕೂ ಮರಗಳ್ಳತನದ ಪ್ರಕರಣಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಹಾಗಾದರೆ ಮರಗಳ್ಳತನ ಮಾಡಿದವರು ದೊಡ್ಡ ಮನುಷ್ಯರಾ ಎಂದು ಮಧು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts