More

    ಚಾರ್ಮಾಡಿ ಘಾಟ್ ಸಂಚಾರ ಅಪಾಯ, ಅಲರ್ಟ್ ಇರುವಂತೆ ಹೆದ್ದಾರಿ ಇಲಾಖೆಗೆ ಜಿಲ್ಲಾಡಳಿತ ಸೂಚನೆ

    – ಶ್ರವಣ್ ಕುಮಾರ್ ನಾಳ

    ಪುತ್ತೂರು: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ 76 ಕಿ.ಮೀ.ನಿಂದ 86.2 ಮೀ.ಪ್ರದೇಶ (ಚಾರ್ಮಾಡಿ ಘಾಟ್) ಪ್ರಸ್ತುತ ಸಾಮಾನ್ಯ ವಾಹನ ಸಂಚಾರಕ್ಕೆ ಮುಕ್ತವಾಗಿದ್ದರೂ, ಸಂಚಾರಕ್ಕೆ ಪೂರ್ಣ ಯೋಗ್ಯವಾಗಿಲ್ಲ. ಇದಕ್ಕೆ ಕಾರಣ ಕಳೆದ 5-6 ದಿನಗಳಿಂದ ಚಾರ್ಮಾಡಿ ಘಾಟ್ ಅರಣ್ಯ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗಿ, ಮಣ್ಣು ಸಡಿಲಗೊಂಡಿರುವುದು. ಮಳೆ ಪ್ರಮಾಣ ಇನ್ನೂ ಹೆಚ್ಚಾದರೆ ಚಾರ್ಮಾಡಿ ಘಾಟ್ ಪ್ರದೇಶ ಸಂಚಾರ ಅಪಾಯಕಾರಿ.

    ಕಳೆದ ಮಳೆಗಾಲ ಸಂದರ್ಭ ಚಾರ್ಮಾಡಿ ಘಾಟ್ ಪ್ರದೇಶ ಕುಸಿದಿದ್ದರಿಂದ ದ.ಕ ಜಿಲ್ಲಾಧಿಕಾರಿ ನ.14ರವರೆಗೆ ಘಾಟ್ ರಸ್ತೆ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದರು. ನ.19ರಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಸಹಯೋಗದಲ್ಲಿ ಪ್ರಾಯೋಗಿಕ ಮಿನಿ ಬಸ್ ಓಡಾಟ ನಡೆಸಿದೆ. ಸಾರ್ವಜನಿಕರಿಂದ ಹೆಚ್ಚಿನ ಒತ್ತಡ ಬಂದಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಮಾಹಿತಿ ಪಡೆದ ದ.ಕ ಜಿಲ್ಲಾಧಿಕಾರಿ ನ.27ರಂದು ಚಾರ್ಮಾಡಿ ಘಾಟ್‌ನಲ್ಲಿ ಲಘುವಾಹನಗಳ ಸಂಚಾರ ರಾತ್ರಿ 6ರಿಂದ ಬೆಳಗ್ಗೆ 6ರ ವರಗಿದ್ದ ನಿರ್ಬಂಧ ತೆರವುಗೊಳಿಸಿದ್ದರು.

    ಈ ಬಾರಿ ಮಳೆಗಾಲದಲ್ಲಿ ತುರ್ತು ಕಾರ್ಯಾಚರಣೆಗೆ ಜೆಸಿಬಿ ವಾಹನ ಸಹಿತ ಸಿದ್ಧವಿರುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಮಳೆ ಅತಿಯಾದರೆ ಘಾಟ್ ಅಪಾಯಕಾರಿ. ಆದ್ದರಿಂದ ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟ್ ಸಂಚಾರ ಬಂದ್ ಆಗುವ ಸಾಧ್ಯತೆಯೂ ಹೆಚ್ಚಿದೆ. ಮಳೆ ಪ್ರಮಾಣ ಹೆಚ್ಚಿದಂತೆ ಚಾರ್ಮಾಡಿ ಭಾಗದ ಗುಡ್ಡ ಕುಸಿತ ಸಾಧ್ಯತೆಯೂ ಹೆಚ್ಚಿದ್ದರಿಂದ ಅಪಾಯಕಾರಿ ಸ್ಥಳ ಗುರುತಿಸಿ ತುರ್ತು ಕಾರ್ಯಾಚರಣೆ ಎನ್‌ಎಚ್ ಇಲಾಖೆಯ ತಂಡ ಸನ್ನದ್ಧ ವಾಗಿದೆ.

    ವಿಶೇಷವೆಂದರೆ ಕಳೆದ ವರ್ಷದಂತೆ ಈ ಬಾರಿ ಘಾಟಿಯ ಮೇಲ್ಭಾಗದಲ್ಲಿ ಮೂಡಿಗೆರೆ ತಾಲೂಕಿಗೆ ಸೇರಿದ ಭಾಗದಲ್ಲಿ ಭೂಕುಸಿತ ಹೆಚ್ಚಾಗಿ ಸಂಭವಿಸುವ ಸಾಧ್ಯತೆ ಇದ್ದರೂ, ಇದರ ಪರಿಣಾಮ ದ.ಕ ಜಿಲ್ಲೆ ಮೇಲಾಗುವುದು ಹೆಚ್ಚು. ಚಾರ್ಮಾಡಿ ಘಾಟ್ ಪ್ರದೇಶದ ಏರಿಕಲ್ಲು, ಕೊಡೆಕಲ್ಲು, ಮಿಂಚುಕಲ್ಲು, ಬಾರೆಕಲ್ಲು ಬೆಟ್ಟಗಳ ಮೇಲೆ ಹೆಚ್ಚಿನ ಗಮನ ಇರಿಸುವಂತೆ ಅರಣ್ಯ ಇಲಾಖೆಗೂ ಜಿಲ್ಲಾಡಳಿತ ಸೂಚನೆ ಇದೆ. ಮಳೆಗಾಲದಲ್ಲಿ ಸಾಧ್ಯವಾದಷ್ಟು ರಸ್ತೆ ಸಂಚಾರಮುಕ್ತಗೊಳಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ವಿಜಯವಾಣಿಗೆ ತಿಳಿಸಿದ್ದಾರೆ.

    ಪರಿಸ್ಥಿತಿ ಕೈಮೀರಿದರೆ ಘಾಟ್ ಸಂಚಾರ ಬಂದ್: ಚಾರ್ಮಾಡಿ ಘಾಟ್ ಪ್ರದೇಶದ ಏರಿಕಲ್ಲು, ಕೊಡೆಕಲ್ಲು, ಮಿಂಚುಕಲ್ಲು, ಬಾರೆಕಲ್ಲು ಬೆಟ್ಟಗಳು ಶೇ.70ರಷ್ಟು ಬೃಹತ್ ಪ್ರಮಾಣದ ಕಲ್ಲು ಬಂಡೆಗಳಿಂದಲೇ ಆವೃತವಾಗಿದೆ. ಘಾಟ್ ಅರಣ್ಯ ವ್ಯಾಪ್ತಿಯಲ್ಲಿ ನಿರಂತರ ಭಾರಿ ಮಳೆಯಾಗುವುದರಿಂದ ಬಂಡೆಯ ತಳಬಾಗದ ಮಣ್ಣು ತೇವಗೊಂಡು ಬಂಡೆ ಸಹಿತ ಗುಡ್ಡ ಕುಸಿತ ಸಾಧ್ಯತೆ ಹೆಚ್ಚು. ಕಳೆದ ಬಾರಿ ಬಹುತೇಕ ಕಡೆ ಮಣ್ಣು ಕುಸಿದಿದ್ದು, ಈ ಬಾರಿ ಅದೇ ಮಣ್ಣು ಇಳಿಜಾರು ಪ್ರದೇಶಕ್ಕೆ ಕುಸಿಯುವ ಸಾಧ್ಯತೆ ಅಧಿಕ. ಕಳೆದ ಬಾರಿ ದ.ಕ ಜಿಲ್ಲೆ ಗಡಿ ಪ್ರದೇಶಕ್ಕೆ ಹೋಲಿಸಿದರೆ ಚಿಕ್ಕಮಗಳೂರು ವ್ಯಾಪ್ತಿಯಲ್ಲೇ ಹೆಚ್ಚಿನ ಪ್ರಮಾಣದ ಗುಡ್ಡ ಕುಸಿತವಾಗಿತ್ತು. ಈ ಬಾರಿಯೂ ಆ ಭಾಗಗಳಲ್ಲಿ ಅಪಾಯ ಹೆಚ್ಚಿದೆ. ಈ ಬಗ್ಗೆ ದ.ಕ, ಚಿಕ್ಕಮಗಳೂರು ಜಿಲ್ಲಾಡಳಿತ ಈಗಾಗಲೇ ಚರ್ಚಿಸಿದೆ. ಪರಿಸ್ಥಿತಿ ಕೈಮೀರಿದರೆ ಘಾಟ್ ಸಂಚಾರ ಬಂದ್ ಅನಿವಾರ್ಯ.

    ತುರ್ತು ಕಾರ್ಯಾಚರಣೆಗೆ ಚಾರ್ಮಾಡಿ ಘಾಟ್ ಭಾಗದಲ್ಲಿ ಜೆಸಿಬಿ ವಾಹನ ಸಹಿತ ಕಾರ್ಯಾಚರಣೆಗೆ ಸಿಬ್ಬಂದಿ ನಿಯೋಜಿಸುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೂಚನೆ ನೀಡಲಾಗಿದೆ. ಅನಿವಾರ್ಯವಾದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಮಾಹಿತಿ ಪಡೆದು ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟ್ ಸಂಚಾರ ಬಂದ್ ಮಾಡಲಾಗುವುದು.
    – ಸಿಂಧೂ ಬಿ.ರೂಪೇಶ್, ದ.ಕ.ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts