More

    ಕುಸಿಯುತ್ತಿರುವ ಚಾರ್ಮಾಡಿ ಘಾಟ್

    ಪುತ್ತೂರು/ಬೆಳ್ತಂಗಡಿ: ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟ್ ಕಳೆದ ವರ್ಷದಂತೆ ಮಹಾಕುಸಿತಕ್ಕೆ ತುತ್ತಾಗುವ ಭೀತಿ ಎದುರಾಗಿದೆ. ಕೆಲದಿನಗಳಿಂದ ಘಾಟಿಯ ಕೆಲವೆಡೆ ಸಣ್ಣಪ್ರಮಾಣದಲ್ಲಿ ಕುಸಿತ ಆರಂಭಗೊಂಡಿದ್ದು, ಈಗ ಅಲೆಕಾನ್ ಪ್ರದೇಶದ ಹತ್ತಿರ ರಾಷ್ಟ್ರೀಯ ಹೆದ್ದಾರಿಯೇ ಬಿರುಕು ಬಿಟ್ಟಿದೆ.
    ಮಲಯಮಾರುತ, ನಾಲ್ಕನೇ ತಿರುವು ಹಾಗೂ ಅಣ್ಣಪ್ಪ ಬೆಟ್ಟ- ಅಲೆಕಾನ್ ನಡುವೆ ಕೆಲದಿನಗಳಿಂದ ರಸ್ತೆ ಬದಿ ಗುಡ್ಡ ಸಣ್ಣ ಪ್ರಮಾಣದಲ್ಲಿ ಕುಸಿಯಲಾರಂಭಿಸಿದೆ. ಶುಕ್ರವಾರ ಅಲೆಕಾನ್ ಸಮೀಪ ದರೆ ಕುಸಿದು ರಸ್ತೆಗೆ ಕಲ್ಲುಮಣ್ಣು ಮರ ಸಮೇತ ಬಿದ್ದಿದ್ದರಿಂದ ಆಂಬುಲೆನ್ಸ್ ಸಹಿತ ಅನೇಕ ವಾಹನಗಳು ರಸ್ತೆಯಲ್ಲೇ ಸಿಲುಕಿಕೊಂಡಿದ್ದವು. ಮಣ್ಣು ತೆರವುಗೊಳಿಸಿದ ಬಳಿಕ ಚಾರ್ಮಾಡಿ- ಚಿಕ್ಕಮಗಳೂರು ರಸ್ತೆ ಬಂದ್ ಮಾಡಲಾಯಿತು. ಕೊಟ್ಟಿಗೆಹಾರ (ಚಿಕ್ಕಮಗಳೂರು) ಮತ್ತು ಚಾರ್ಮಾಡಿ (ದಕ್ಷಿಣ ಕನ್ನಡ) ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಘಾಟಿ ರಸ್ತೆಯಲ್ಲಿ ವಾಹನಗಳು ಸಂಚರಿಸದಂತೆ ತಡೆಹಿಡಿದಿದ್ದಾರೆ.

    ಅಪಾಯ ಎದುರಿಸಲು ಸಿದ್ಧತೆ: ನಿರಂತರ ಮಳೆಗೆ ಮಣ್ಣು ಸಡಿಲಗೊಂಡಿದ್ದರಿಂದ ಚಾರ್ಮಾಡಿ ಘಾಟ್ ಪ್ರದೇಶದ ಏರಿಕಲ್ಲು, ಕೊಡೆಕಲ್ಲು, ಮಿಂಚುಕಲ್ಲು, ಬಾರೆಕಲ್ಲು ಬೆಟ್ಟಗಳ ಮೇಲೆ ಹೆಚ್ಚಿನ ಗಮನ ಇರಿಸುವಂತೆ ಅರಣ್ಯ ಇಲಾಖೆಗೂ ಜಿಲ್ಲಾಡಳಿತ ಸೂಚನೆ ಇದೆ. ಸಂಭಾವ್ಯ ಅಪಾಯ ಎದುರಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಸನ್ನದ್ಧಗೊಂಡಿದ್ದು, ಈಗಾಗಲೇ ಅಂಥ ಸ್ಥಳಗಳನ್ನು ಗುರುತಿಸಿ ತುರ್ತು ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗಿದೆ. 3 ಜೆಸಿಬಿ-ಇಟಾಚಿ, ಐವರು ಸಿಬ್ಬಂದಿ, ಅಧಿಕಾರಿಗಳ ತಂಡ ಸಿದ್ಧವಾಗಿದೆ.

    ಎಚ್ಚರಿಸಿತ್ತು ವಿಜಯವಾಣಿ: ಚಾರ್ಮಾಡಿ ಘಾಟಿ ಪ್ರದೇಶ ಮತ್ತೆ ಕುಸಿಯುವ ಸಾಧ್ಯತೆ ಬಗ್ಗೆ ವಿಜಯವಾಣಿ ಜೂನ್ 10ರಂದು ವಿಶೇಷ ವರದಿ ಮೂಲಕ ಗಮನ ಸೆಳೆದಿತ್ತು. ಕಳೆದ ವರ್ಷ ಘಾಟಿಯಲ್ಲಿ ಜಲಸ್ಫೋಟದಿಂದ ಭಾರಿ ಕುಸಿತ ಸಂಭವಿಸಿ ರಸ್ತೆಯೇ ಕೊಚ್ಚಿ ಹೋಗಿತ್ತು. ಅದನ್ನು ಅಲ್ಪಸ್ವಲ್ಪ ದುರಸ್ತಿ ಮಾಡಿ ಲಘು ವಾಹನಗಳು ಮತ್ತು ಮಿನಿ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೊಸ ಯೋಜನೆ ಕೈಗೆತ್ತಿಕೊಳ್ಳದ ಹೊರತು ಈ ರಸ್ತೆಯನ್ನು ದುರಸ್ತಿ ಮೂಲಕ ಸರಿಪಡಿಸುವುದು ಅಸಾಧ್ಯ ಎಂದು ತಜ್ಞರು ಅಭಿಪ್ರಾಯ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 12 ಕಿ.ಮೀ. ಘಾಟಿ ರಸ್ತೆಯನ್ನು ಸುಮಾರು 360 ಕೋಟಿ ರೂ. ವೆಚ್ಚದಲ್ಲಿ ಕಣಿವೆಯಿಂದ ಪಿಲ್ಲರ್ ಎಬ್ಬಿಸಿ ಹೊಸದಾಗಿ ರಸ್ತೆ ನಿರ್ಮಿಸುವ ಯೋಜನೆಯ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts