More

    ನಗಿಸುತ್ತಲೇ ಅಳಿಸುವ ಚಾರ್ಲಿ: ಸಿನಿಮಾ ವಿಮರ್ಶೆ

    • ಚಿತ್ರ: 777 ಚಾರ್ಲಿ
    • ನಿರ್ದೇಶನ: ಕಿರಣ್ ರಾಜ್
    • ನಿರ್ಮಾಣ: ರಕ್ಷಿತ್ ಶೆಟ್ಟಿ
    • ತಾರಾಗಣ: ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ಬೇಬಿ ಶಾರ್ವರಿ, ರಾಜ್ ಬಿ. ಶೆಟ್ಟಿ. ಬಾಬ್ಬಿ ಸಿಂಹ, ದಾನಿಶ್ ಸೇಠ್

    | ಚೇತನ್ ನಾಡಿಗೇರ್ ಬೆಂಗಳೂರು

    ಮನೆ, ಫ್ಯಾಕ್ಟರಿ, ಗಲಾಟೆ, ಇಡ್ಲಿ, ಸಿಗರೇಟ್, ಬೀರ್… ಇಷ್ಟೇ ಧರ್ಮನ ಪ್ರಪಂಚ. ಯಾರ ಜತೆಗೂ ಅವನು ಸರಿಯಾಗಿ ಮಾತನಾಡಲಾರ. ಅವನು ನಗುವುದನ್ನಂತೂ ಯಾರೂ ನೋಡಿದ್ದೇ ಇಲ್ಲ. ಹೀಗೆ ತನ್ನದೇ ಪ್ರಪಂಚದಲ್ಲಿ ಬಂಧಿಯಾಗಿರುವ ಧರ್ಮನಿಗೆ, ರಸ್ತೆಯಲ್ಲಿ ನಾಯಿಯೊಂದು ಸಿಗುತ್ತದೆ. ಸಿಗುತ್ತದೆ ಎನ್ನುವುದಕ್ಕಿಂತ ಅಪಘಾತವಾಗಿ ಬಿದ್ದಿರುತ್ತದೆ. ಅದು ಸರಿಯಾಗುವವರೆಗೂ ಅದರ ಜವಾಬ್ದಾರಿ ಅವನದ್ದಾಗುತ್ತದೆ. ಇಷ್ಟವಿಲ್ಲದಿದ್ದರೂ ಅದನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ಈ ಹಂತದಲ್ಲಿ ಅದರಿಂದಾಗಿ ಸಾಕಷ್ಟು ಸಂಕಟಗಳನ್ನೂ ಎದುರಿಸಬೇಕಾಗುತ್ತದೆ. ಯಾವುದನ್ನು ಟಾರ್ಚರ್ ಎಂದು ಅವನು ಭಾವಿಸಿರುತ್ತಾನೋ, ಅದೇ ಒಂದು ಹಂತದಲ್ಲಿ ಅವನ ಸಂಗಾತಿಯಾಗುತ್ತದೆ. ಅದಕ್ಕಾಗಿ ಸಾವಿರಾರು ಕಿಲೋಮೀಟರ್​ಗಳ ಪ್ರಯಾಣ ಮಾಡಿ, ನೂರೆಂಟು ಕಷ್ಟಗಳನ್ನು ಅನುಭವಿಸಿ, ಹಿಮಪರ್ವತಗಳನ್ನೂ ಅವನು ಹತ್ತಬೇಕಾಗುತ್ತದೆ.

    ಯಾಕೆ? ಇದನ್ನು ಕೇಳಲೂ ಬಾರದು. ಹೇಳಲೂ ಬಾರದು. ‘777 ಚಾರ್ಲಿ’ ಸ್ವಾರಸ್ಯ ಇರುವುದೇ ಅಲ್ಲಿ. ಇದುವರೆಗೂ ಮನುಷ್ಯ ಮತ್ತು ಪ್ರಾಣಿಯ ಸಂಬಂಧ ಮತ್ತು ಬಾಂಧವ್ಯದ ಕುರಿತಾಗಿ ಎಲ್ಲ ಭಾಷೆಗಳಲ್ಲೂ ಹಲವು ಸಿನಿಮಾಗಳು ಬಂದಿವೆ. ಆದರೆ, ಚಾರ್ಲಿಯಂತಹ ಸಿನಿಮಾ ಬಂದಿರಲಿಲ್ಲ ಎಂದರೆ ಸ್ವಲ್ಪ ಅತಿಶಯೋಕ್ತಿ ಎನಿಸಬಹುದು. ಆದರೂ ಇದು ನಿಜ. ‘777 ಚಾರ್ಲಿ’ ಕನ್ನಡಕ್ಕಷ್ಟೇ ಅಲ್ಲ, ಎಲ್ಲ ಭಾಷೆಗಳಿಗೂ ವಿಶೇಷವೆನಿಸುವಂತಹ ಸಿನಿಮಾ ಆಗಬಹುದು. ಕಾರಣ, ಚಿತ್ರದ ಪರಿಕಲ್ಪನೆ. ತಾನು ಪ್ರೀತಿಸುವವರಿಗಾಗಿ, ಇಷ್ಟಪಟ್ಟವರಿಗಾಗಿ ಒಬ್ಬ ಮನುಷ್ಯ ಎಷ್ಟು ದೂರ ಹೋಗುತ್ತಾನೆ ಎನ್ನುವುದನ್ನು ಹಲವು ಚಿತ್ರಗಳಲ್ಲಿ ತೋರಿಸಲಾಗಿದೆ. ಆದರೆ, ಒಂದು ಪ್ರಾಣಿಗಾಗಿ ಒಬ್ಬ ಮನುಷ್ಯ ಏನೆಲ್ಲಾ ಮಾಡುತ್ತಾನೆ ಎನ್ನುವುದು ‘777 ಚಾರ್ಲಿ’ಯ ವಿಶೇಷ.

    ಇದೊಂದು ಪಕ್ಕಾ ಚಾರ್ಲಿ ಚಾಪ್ಲಿನ್ ಶೈಲಿಯ ಚಿತ್ರ. ಅದಕ್ಕೆ ಸರಿಯಾಗಿ, ಚಾಪ್ಲಿನ್ ಸಹ ಅಲ್ಲಲ್ಲಿ ಒಂದು ಪಾತ್ರವಾಗಿ ಕಾಣಿಸಿಕೊಳ್ಳುತ್ತಾರೆ. ಆ ಚಿತ್ರಗಳಂತೆ ಇಲ್ಲೂ ನೋವು, ನಲಿವು, ಕೀಟಲೆ, ತರಲೆ, ಹತಾಶೆ, ಸಂದೇಶ ಎಲ್ಲವೂ ಇದೆ.

    ಚಿತ್ರದ ಮೊದಲಾರ್ಧ ತಮಾಷೆಯಾಗಿದೆ. ಇಂಟರ್​ವೆಲ್ ನಂತರ ಕ್ರಮೇಣ ಚಿತ್ರ ಗಂಭೀರವಾಗುತ್ತಾ ಹೋಗುತ್ತದೆ. ಕ್ಲೈಮ್ಯಾಕ್ಸ್​ನಲ್ಲಿ ಭಾವೋದ್ವೇಗ ತುದಿಗೇರುತ್ತದೆ. ಈ ಒಂದು ತಾಸಿನಲ್ಲಿ ಅಳು ಬಿಗಿ ಹಿಡಿಯುವುದು ಬಹಳ ಕಷ್ಟ. ಮೂರ್ನಾಲ್ಕು ದೃಶ್ಯಗಳಲ್ಲಾದರೂ ಪ್ರೇಕ್ಷಕರ ಕಣ್ಣು ಒದ್ದೆ ಮಾಡುವಲ್ಲಿ ಮತ್ತು ಗಂಟಲು ಉಬ್ಬಿಸುವಲ್ಲಿ ನಿರ್ದೇಶಕ ಕಿರಣ್ ರಾಜ್ ಯಶಸ್ವಿಯಾಗಿದ್ದಾರೆ. ಒಂದೇ ಚಿತ್ರದಲ್ಲಿ ಪ್ರೇಕ್ಷಕರನ್ನು ಮೊದಲು ನಗಿಸಿ, ನಂತರ ಕಣ್ಣೀರು ಹಾಕಿಸಿ, ಆ ನಂತರ ಸಂತೋಷದಿಂದ ಹೊರಗೆ ಕಳಿಸುವುದು ಸುಲಭದ ಮಾತಲ್ಲ. ಆ ನಿಟ್ಟಿನಲ್ಲಿ ಮೊದಲ ಪ್ರಯತ್ನದಲ್ಲೇ ಇಂಥದ್ದೊಂದು ಚಿತ್ರ ಕೊಟ್ಟ ಕಿರಣ್ ಬೆನ್ನು ತಟ್ಟಬೇಕು. ಚಿತ್ರ ಸ್ವಲ್ಪ ಉದ್ದವಾಯಿತು, ದ್ವಿತೀಯಾರ್ಧ ನಿಧಾನವಾಯಿತು ಎಂಬ ಅಂಶಗಳನ್ನು ಬಿಟ್ಟರೆ, ಚಿತ್ರದಲ್ಲಿ ತಪು್ಪಗಳನ್ನು ಹುಡುಕುವುದು ಕಷ್ಟ.

    ಇಡೀ ಚಿತ್ರ ಖುಷಿಯಾಗುವುದು ರಕ್ಷಿತ್ ಮತ್ತು ಚಾರ್ಲಿಯಿಂದಾಗಿ. ಪ್ರಾಣಿಗಳಿಂದ ಅಭಿನಯ ತೆಗೆಸುವುದು ಸುಲಭದ ಮಾತಲ್ಲ. ಈ ನಿಟ್ಟಿನಲ್ಲಿ ಚಾರ್ಲಿ ಪಾತ್ರವನ್ನು ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿಸುವುದಕ್ಕೆ ಹಲವರ ಶ್ರಮವಿದೆ. ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ ಹೀಗೆ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿದ್ದರಿಂದಲೇ, ಚಿತ್ರಮಂದಿರದಿಂದ ಹೊರಬಂದರೂ ‘ಚಾರ್ಲಿ’ಯ ಗುಂಗಿನಿಂದ ಹೊರಬರುವುದಕ್ಕೆ ಸಾಧ್ಯವಾಗುವುದಿಲ್ಲ. ಇನ್ನು, ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಇದುವರೆಗಿನ ಚಿತ್ರಗಳ ಪೈಕಿ, ಈ ಚಿತ್ರದ ಅಭಿನಯ ಮೊದಲ ಸ್ಥಾನ ಪಡೆಯುತ್ತದೆ. ಇಡೀ ಚಿತ್ರದಲ್ಲಿ ಅವರು ನೋವು, ಸಂಕಟ, ಹತಾಶೆ, ಸಿಟ್ಟನ್ನು ಬಹಳ ಚೆನ್ನಾಗಿ ಅಭಿವ್ಯಕ್ತಗೊಳಿಸಿದ್ದಾರೆ. ಸಂಗೀತಾ ಶೃಂಗೇರಿ, ಬೇಬಿ ಶಾರ್ವರಿ, ರಾಜ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಬಾಬ್ಬಿ ಸಿಂಹ, ದಿವಂಗತ ಭಾರ್ಗವಿ ನಾರಾಯಣ್, ಎಚ್.ಜಿ ಸೋಮಶೇಖರ ರಾವ್ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts