More

    ವಿದ್ಯುತ್ ಸಂಪರ್ಕದಲ್ಲಿ ಹಣ ವಸೂಲು ಆರೋಪ

    ಬೇಲೂರು: ತಾಲೂಕಿನಲ್ಲಿ ಅಕ್ರಮ ಸಕ್ರಮ ವಿದ್ಯುತ್ ಸಂಪರ್ಕದಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದ್ದರಿಂದ ಸೆಸ್ಕ್ ಅಧಿಕಾರಿಗಳು ಗಮನ ಹರಿಸಿ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಸೂಚಿಸಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯುತ್ ಸಕ್ರಮದ ಹೆಸರಿನಲ್ಲಿ ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ರೈತರಿಂದ ಹಣ ವಸೂಲು ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಮುಂದಾಗಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂಬು ಆರೋಪವಿದೆ. ಅಲ್ಲದೆ, ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಹೀಗಾದರೆ ಈಗ ಮರು ಮಂಜೂರಾಗುತ್ತಿರುವ ರೈತರ ಕಥೆ ಏನು? ಸಾಧ್ಯವಾದಷ್ಟು ಬೇಗ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಸೆಸ್ಕ್ ಅಧಿಕಾರಿಗಳು ಮುಂದಾಗಬೇಕು ಎಂದು ಆದೇಶಿಸಿದರು.

    ಜಲಧಾರೆ ಯೋಜನೆಯಲ್ಲಿ ಕಾಮಗಾರಿ ಮುಗಿದಿದೆಯೇ ಎಂಬುದನ್ನು ತಿಳಿಯದೆ ಬಿಲ್ ನೀಡಬಾರದು. ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಮೇಲಧಿಕಾರಿಗಳು ಹೇಳುತ್ತಾರೆ. ಆದರೆ, ಲೋಡ್ ಶೆಡ್ಡಿಂಗ್ ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದೀರ. ಇದು ನಿಲ್ಲಬೇಕು. ಕುಡಿಯುವ ನೀರಿಗೆ ತೊಂದರೆ ಆಗದಂತೆ ಅಧಿಕಾರಿಗಳು ಗಮನ ಹರಿಸಬೇಕು. ತಾಲೂಕಿನ ಯಾವುದೇ ಇಲಾಖೆಯಲ್ಲೂ ಭ್ರಷ್ಟಾಚಾರ ಕಂಡು ಬಂದಲ್ಲಿ ಅಲ್ಲಿನ ಮುಖ್ಯಸ್ಥರನ್ನೇ ನೇರವಾಗಿ ಹೊಣೆಗಾರರನ್ನಾಗಿಸಿ ಅವರ ತಲೆದಂಡ ಮಾಡಲಾಗುವುದು ಎಂದು ಎಚ್ಚರಿಸಿದರು.
    ಅಧಿಕಾರಿಗಳು ಗಮನ ಹರಿಸಿ: ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರು ಪಡೆಯಲು 2 ರೂ. ನಾಣ್ಯ ಹಾಕಬೇಕು ಎಂದಿದ್ದರೂ ಕೆಲವೆಡೆ 5 ರೂ. ಗೋಲ್ಡ್ ನಾಣ್ಯ ಹಾಕಿದರೆ ಮಾತ್ರ ನೀರು ಬರುವಂತೆ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಲತಾ ದಿಲೀಪ್‌ಕುಮಾರ್ ಹಾಗೂ ಲತಾ ಮಂಜೇಶ್ವರಿ ತಿಳಿಸಿದರು.

    ತಾಪಂ ಅಧ್ಯಕ್ಷೆ ಇಂದಿರಾ ರವಿಕುಮಾರ್ ಮಾತನಾಡಿ, ಕಳೆದೆರಡು ವರ್ಷಗಳಿಂದ ನಂಜಾಪುರ ಮತ್ತು ಘಟ್ಟದಹಳ್ಳಿ ಗ್ರಾಮಗಳ ಕಾಲನಿಗಳಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ನೀಡಿ ಎಂದು ಕೇಳುತಿದ್ದರೂ ಸೆಸ್ಕ್ ಅಧಿಕಾರಿಗಳು ಗಮನ ಹರಿಸಿಲ್ಲ. ಆದ್ದರಿಂದ ಜನರು ನೀರಿಗಾಗಿ ಪರಿತಪಿಸುತಿದ್ದಾರೆ ಎಂದು ಆರೋಪಿಸಿದರು.

    ಇಂಜಿನಿಯರ್‌ಗೆ ತಾಕೀತು: ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಜನರು ಜಮೀನುಗಳನ್ನು ಬಿಟ್ಟುಕೊಟ್ಟಿದ್ದಾರೆ. ಅವರಿಗೆ ಮೊದಲು ಪರಿಹಾರದ ಹಣ ಕ್ಲಿಯರ್ ಮಾಡಿಸಿಕೊಡಿ ಎಂದು ಶಾಸಕ ಕೆ.ಎಸ್.ಲಿಂಗೇಶ್ ಸಂಬಂಧಿಸಿದ ಇಂಜಿನಿಯರ್‌ಗೆ ತಾಕೀತು ಮಾಡಿದರು.

    ಎತ್ತಿನಹೊಳೆ ಯೋಜನೆಯಲ್ಲಿ ಎಲ್ಲ ರೈತರಿಗೂ ಬೆಳೆ ಪರಿಹಾರ ನೀಡುವುದಕ್ಕೆ ಅಧಿಕಾರಿಗಳು ಮುಂದಾಗಬೇಕು. ಈ ಭಾಗದ ಜನರಿಗೆ ಮೂಲಸೌಲಭ್ಯ ಕಲ್ಪಿಸದೆ ಇದ್ದಲ್ಲಿ ಕೆಲಸ ಮಾಡದಂತೆ ತಡೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಮಳೆ ಬರುವ ಸಾಧ್ಯತೆ ಹೆಚ್ಚಿರುವುದರಿಂದ ಯಗಚಿ ಜಲಾಶಯದಿಂದ ಏತನೀರಾವರಿ ಯೋಜನೆ ಮೂಲಕ ಮಾದಿಹಳ್ಳಿ-ಹಳೇಬೀಡು ಕೆರೆಗಳಿಗೆ ನೀರು ಹರಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

    ಜಿಪಂ ಸದಸ್ಯ ತೌಫಿಕ್, ಎಪಿಎಂಸಿ ಅಧ್ಯಕ್ಷ ಸಿ.ಎಚ್.ಮಹೇಶ್ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ಜಮುನಾ ಅಣ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರೆ ಸುನೀತಾ ಪ್ರಭು, ತಾಪಂ ಎಡಿ ದಯಾನಂದ್, ವಿವಿಧ ಇಲಾಖೆ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts