More

    ರಂಗೇರಿದ ನಗರಸಭೆ ಚುನಾವಣಾ ಪ್ರಚಾರ ; ಪ್ರಮುಖ ನಾಯಕರಿಂದಲೇ ಕೋವಿಡ್ ನಿಯಮ ಉಲ್ಲಂಘಣೆ

    ಚನ್ನಪಟ್ಟಣ : ಕರೊನಾ ಎರಡನೇ ಅಲೆಯ ಅಬ್ಬರದ ನಡುವೆಯೂ ಚನ್ನಪಟ್ಟಣ ನಗರಸಭೆ ಚುನಾವಣಾ ಪ್ರಚಾರ ರಂಗೇರಿದ್ದು, ಶುಕ್ರವಾರ ಆಡಳಿತ ಮತ್ತು ವಿರೋಧಪಕ್ಷಗಳ ಪ್ರಮುಖ ನಾಯಕರಿಂದಲೇ ಕೋವಿಡ್ ನಿಯಮ ಮುರಿದ ಪ್ರಸಂಗಗಳು ಜರುಗಿದವು.

    ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಸಂಸದ ಡಿ.ಕೆ.ಸುರೇಶ್ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದರು. ನೂರಾರು ಕಾರ್ಯಕರ್ತರ ಜತೆಗೂಡಿದ ಈ ಇಬ್ಬರು ನಾಯಕರು ನಗರದ ಹಲವು ವಾರ್ಡ್‌ಗಳಲ್ಲಿ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಈ ಮೂಲಕ ಕೋವಿಡ್ ಮಾರ್ಗಸೂಚಿ ಹಾಗೂ 144ನೇ ವಿಧಿಯನ್ವಯ ನಿಷೇಧಾಜ್ಞೆಯನ್ನು ಇಬ್ಬರು ನಾಯಕರು ಮುರಿದದ್ದು ಸ್ಪಷ್ಟವಾಗಿ ಕಂಡುಬಂದಿತು. ಈ ವೇಳೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಎನ್ನುವುದು ಮರೀಚಿಕೆಯಾಗಿತ್ತು.

    ನಗರದ 15ನೇ ವಾರ್ಡ್‌ನಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಸಿಪಿವೈಗೆ ನೂರಾರು ಕಾರ್ಯಕರ್ತರು ಸಾಥ್ ನೀಡಿದರು. ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ನಾನು ಸುಮ್ಮನೆ ಬಂದಿದ್ದೇನೆ ಅಷ್ಟೇ, ಮಾತನಾಡಲ್ಲ ಎಂದರು.
    ಇನ್ನು ಸಂಸದ ಡಿ.ಕೆ.ಸುರೇಶ್ ಕೂಡ ನಗರಸಭಾ ಚುನಾವಣೆಯ ಆಖಾಡಕ್ಕೆ ದುಮುಕಿ, ನಗರದ ಹಲವು ವಾರ್ಡ್‌ಗಳಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರ ತೆಗೂಡಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಿದರು. ಸಂಸದರನ್ನು ಪಟಾಕಿ ಸಿಡಿಸಿ, ಸ್ವಾಗತಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಪ್ರತಿವಾರ್ಡ್‌ನಲ್ಲೂ ಪ್ರಚಾರಕ್ಕೆ ಹೋದ ಸಂಸದರು ಮತದ ಜತೆಗೆ ಕೋವಿಡ್ ಜಾಗೃತಿ ಮೂಡಿಸುತ್ತಿದ್ದು ವಿಶೇಷವಾಗಿತ್ತು.

    ಕಳಾಹೀನವಾದ ಜೆಡಿಎಸ್ ಪಾಳಯ : ಮಾಜಿ ಸಿಎಂ ಎಚ್‌ಡಿಕೆ ಗೈರಿನಿಂದಾಗಿ ಜೆಡಿಎಸ್ ಪಾಳಯದಲ್ಲಿ ಪ್ರಚಾರ ಕೊಂಚ ಕಳಾಹೀನವಾದಂತೆ ಕಂಡಿತು. ತಮ್ಮ ನಾಯಕ ಕೊವಿಡ್ ಸೋಂಕಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಥಳೀಯ ನಾಯಕರೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ಇವರು ಸಹ ಹೆಚ್ಚು ಹೆಚ್ಚಾಗಿ ಗುಂಪುಗೂಡಿ, ಕೋವಿಡ್ ನಿಯಮಾವಳಿಗಳು ಹಾಗೂ ನಿಷೇದ್ಞಾಜೆಯನ್ನು ಉಲ್ಲಂಘಿಸಿದ್ದು ಕಂಡುಬಂದಿತು.

    ಹರಿಯಲಿದೆಯೇ ಉಡುಗೊರೆಗಳ ಹೊಳೆ? : ನಗರಸಭೆ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಈ ಕಾರಣಕ್ಕಾಗಿಯೇ ಕರೊನಾ ನಿಯಮಾವಳಿ ಪ್ರಚಾರದಲ್ಲಿ ತಲ್ಲೀನವಾಗಿವೆ. ಇನ್ನು ಚುನಾವಣೆಯಲ್ಲಿ ಹಣ ಹಾಗೂ ಉಡುಗೊರೆಗಳ ಆಮಿಷಗಳು ಹರಿಯಲಿವೆ ಎಂಬ ಸಂಶಯಗಳು ಮೂಡಿವೆ. ಶುಕ್ರವಾರ ಚುನಾವಣಾ ಮಾಹಿತಿ ಪತ್ತೆದಳದ ತಂಡಗಳು ಎರಡು ಕಡೆ ದಾಳಿ ನಡೆಸಿ, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ನಗರದ ಮಹೇಶ್ವರ ಕನ್‌ವೆಕ್ಷನ್ ಹಾಲ್ ಮೇಲೆ ದಾಳಿ ಮಾಡಿದ ತಹಸೀಲ್ದಾರ್ ಎಲ್. ನಾಗೇಶ್ ಮತ್ತು ಡಿವೈಎಸ್‌ಪಿ ಕೆ.ಎನ್ ರಮೇಶ್ ನೇತೃತ್ವದ ತಂಡ, ಇಲ್ಲಿ ದಾಸ್ತಾನಾಗಿದ್ದ ಸೀಲಿಂಗ್ ್ಯಾನ್, ಟೇಬಲ್ ಪ್ಯಾನ್, ಮಿಕ್ಸಿ, ಕುಕ್ಕರ್ ಸೇರಿದಂತೆ 141 ವಸ್ತುಗಳನ್ನು ವಶಪಡಿಸಿಕೊಂಡಿದೆ. ಈ ವಸ್ತುಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಕಾರಣಕ್ಕೆ ಕಲ್ಯಾಣಮಂಟಪದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನೊಂದೆಡೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಿಟ್ಟಮಾರನಹಳ್ಳಿ ರಾಮಮ್ಮ ಕೆರೆ ಹತ್ತಿರದ ಫಾರ್ಮ್ ಮೇಲೆ ದಾಳಿ ಮಾಡಿರುವ ಎಂಸಿಸಿ ತಂಡ 42 ಮಿಕ್ಸಿಗಳನ್ನು ವಶಪಡಿಸಿಕೊಂಡಿದೆ. ಇದು 11ನೇ ವಾರ್ಡ್‌ನ ಜೆಡಿಎಸ್ ಅಭ್ಯರ್ಥಿಗೆ ಸೇರಿದ್ದ ಫಾರ್ಮ್ ಆಗಿದ್ದು, ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಸಾಮಗ್ರಿ ಇಲ್ಲಿ ಶೇಖರಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಜೆಡಿಎಸ್ ಅಭ್ಯರ್ಥಿ ನಾಗೇಶ್ ಎಂಬುವವರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಒಟ್ಟಾರೆ ನಗರಸಭೆ ಚುನಾವಣೆಯ ಆಖಾಡ ರಂಗು ಪಡೆದಿದ್ದು, ಪಕ್ಷಗಳ ಪ್ರಮುಖ ನಾಯಕರು ತಮ್ಮ ಅಭ್ಯರ್ಥಿಗಳ ಪರ ನಿಯಾಮವಳಿಗಳನ್ನು ಗಾಳಿಗೆ ತೂರಿ ಪ್ರಚಾರ ನಡೆಸುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಮಹತ್ತರವಾದ ಹೊಣೆ ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts