More

    ಅಡಕೆನಾಡಿಗೆ ಕೃಷಿಹೊಂಡ ವರದಾನ

    ಚನ್ನಗಿರಿ: ಅಡಕೆ ನಾಡು ಖ್ಯಾತಿಯ ತಾಲೂಕಿನ ರೈತರು ಬೇಸಿಗೆಯಲ್ಲಿ ತೋಟ ಉಳಿಸಿಕೊಳ್ಳಲು ನೀರಿನಿಂದ ಹೊರತೆಗೆದ ಮೀನಿನಂತೆ ಒದ್ದಾಡುತ್ತಿರುತ್ತಾರೆ. ಬಹಳಷ್ಟು ಜನ ಲಕ್ಷಾಂತರ ರೂ. ವ್ಯಯಿಸಿ ಹೈರಾಣಾಗಿದ್ದಾರೆ. ಸಮುದಾಯ ಕೃಷಿ ಹೊಂಡಗಳು ಇಂಥವರ ಪಾಲಿಗೆ ವರದಾನವಾಗಿವೆ.

    ತೋಟ ಉಳಿಸಿಕೊಳ್ಳಲು ಟ್ಯಾಂಕರ್ ಖರೀದಿ, ದೂರದ ಕೆರೆ, ಕಾಲುವೆಗಳಿಂದ ನೀರು ತರಲು ಸಾಲ ಮಾಡುತ್ತಿದ್ದ ರೈತರು ಇದೀಗ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ. ತೋಟಗಾರಿಕೆ ಇಲಾಖೆ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅಡಕೆ ಬೆಳೆಗಾರರಿಗೆ ಸಹಾಯಧನ ನೀಡುತ್ತಿದೆ.

    ತಾಲೂಕಿನಲ್ಲಿ 8 ಕೃಷಿ ಸಮುದಾಯ ಹೊಂಡಗಳನ್ನು ಇದುವರೆಗೆ ಇಲಾಖೆಯಿಂದ ನೀಡಲಾಗಿದೆ. 2019 ರಲ್ಲಿ 5, 2020ರಲ್ಲಿ 3 ನಿರ್ಮಿಸಲಾಗಿದೆ. ಇಲಾಖೆಯಿಂದ ಒಂದು ಹೊಂಡಕ್ಕೆ ನಾಲ್ಕು ಲಕ್ಷ ರೂ. ಸಹಾಯಧನ ನೀಡುತ್ತದೆ. ಉಳಿದ ಹಣವನ್ನು ಫಲಾನುಭವಿಗಳು ಹಾಕಿಕೊಂಡು ನಿರ್ಮಿಸಿಕೊಳ್ಳಬೇಕು. ಕೃಷಿ ಹೊಂಡ ನಿರ್ಮಿಸಿಕೊಂಡು ನೀರು ಸಂಗ್ರಹಿಸಿದರೆ ಮುಂಗಾರು ಮಳೆ ಬರುವವರೆಗೆ ತೋಟಕ್ಕೆ ನೀರು ಹಾಯಿಸಿಕೊಳ್ಳಬಹುದಾಗಿದೆ.

    ಅಡಕೆ ಸಸಿ ನೆಟ್ಟು ಫಸಲು ಪಡೆಯಲು ಆರು ವರ್ಷ ಬೇಕು. ಅಲ್ಲಿಯವರೆಗೆ ತೋಟಕ್ಕೆ ಅವಶ್ಯ ಸೌಲಭ್ಯ ಒದಗಿಸಬೇಕು. ಕೊಳವೆಬಾವಿ ಹಾಳಾದರೆ ಮತ್ತೆ ಕೊರೆಸಬೇಕು. ಬೇಸಿಗೆಯಲ್ಲಿ ಅಂತರ್ಜಲ ಕುಸಿದರೆ ಹೊರಗಡೆಯಿಂದ ಟ್ಯಾಂಕರ್, ಲಾರಿಗಳಲ್ಲಿ ನೀರು ತಂದು ಹರಿಸಬೇಕು. ಇಲ್ಲದಿದ್ದರೆ ತೋಟ ಒಣಗಿ ಹೋಗುತ್ತದೆ.

    ರಾಜ್ಯದಲ್ಲಿ 2004-05 ರಲ್ಲಿ ಸಮುದಾಯ ಕೃಷಿ ಹೊಂಡ ಯೋಜನೆ ಪ್ರಾರಂಭವಾಗಿದ್ದು, ಚನ್ನಗಿರಿ ತಾಲೂಕಿನಲ್ಲಿ 2018-19ರಲ್ಲಿ ಪ್ರಥಮ ಬಾರಿಗೆ ಯೋಜನೆ ಜಾರಿಗೆ ಬಂದಿದ್ದು, ಅಗರಬನ್ನಿಹಟ್ಟಿ, ಹೆಬ್ಬಳಗೆರೆ, ಮಾದಾಪುರ, ಬೆಂಕಿಕೆರೆ, ಯರಗಟ್ಟಿಹಳ್ಳಿಯಲ್ಲಿ ನಾಲ್ಕು ಹೊಂಡ ನಿರ್ಮಿಸಿದೆ.

    3 ಮೀಟರ್ ಆಳ, 45X42 ಮೀಟರ್ ಅಳತೆಯ ಕೃಷಿ ಹೊಂಡದಲ್ಲಿ 5 ಲಕ್ಷ ಲೀಟರ್ ನೀರು ಸಂಗ್ರಹ ಮಾಡಬಹುದಾಗಿದೆ. ಇದಕ್ಕೆ ಅಂದಾಜು 8 ರಿಂದ 9 ಲಕ್ಷ ರೂ. ಖರ್ಚು ಭರಿಸಬೇಕಾಗುತ್ತದೆ. ಆದರೆ ಬೇಸಿಗೆಯಲ್ಲಿ ತೋಟಕ್ಕೆ ರೈತರು 5 ಲಕ್ಷ ಲೀಟರ್ ನೀರು ತರಲು 600 ಲಾರಿ ಟ್ಯಾಂಕರ್‌ನ 3 ಸಾವಿರ ಲೋಡ್‌ಗೆ 15 ಲಕ್ಷ ರೂ. ವೆಚ್ಚ ತಗುಲುತ್ತದೆ. ಇದರ ಬದಲು ಕೃಷಿ ಹೊಂಡ ನಿರ್ಮಿಸಿಕೊಂಡರೆ ಜನವರಿಯಿಂದ ಜೂನ್‌ವರೆಗೆ 15 ಎಕರೆ ತೋಟ ಉಳಿಸಿಕೊಳ್ಳಬಹುದು.

    ತೋಟ ಉಳಿಸಿಕೊಳ್ಳಲು ಸಾಲ ಮಾಡಿ ಬೇಸಿಗೆಯಲ್ಲಿ ಹಗಲು ರಾತ್ರಿ ಎನ್ನದೇ ಟ್ಯಾಂಕರ್ ನೀರು ಹರಿಸುತ್ತಿದ್ದೆ. ಇಲಾಖೆ ಸಹಾಯದಿಂದ ಇದೀಗ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದು, ಎರಡು ವರ್ಷಗಳಿಂದ ನೆಮ್ಮದಿಯಾಗಿದ್ದೇನೆ. ನಮ್ಮ ತೋಟ ಉಳಿಸಿಕೊಳ್ಳುವ ಜತೆಗೆ ಅಕ್ಕ-ಪಕ್ಕದ ತೋಟದ ಮಾಲೀಕರಿಗೂ ನೀರು ನೀಡಬಹುದಾಗಿದೆ ಎನ್ನುತ್ತಾರೆ ಯರಗಟ್ಟಿಹಳ್ಳಿ ತೋಟದ ಮಾಲೀಕ ಕೆ.ಎಸ್.ಅಶೋಕ್.

    ಮಹಾರಾಷ್ಟ್ರದಲ್ಲಿ ಈ ಯೋಜನೆ ಮೊದಲು ಜಾರಿಗೆ ಬಂದಿದೆ. ಕೃಷಿ ಹೊಂಡ ನಿರ್ಮಿಸುವ ಮೂಲಕ ಮಾವು, ದ್ರಾಕ್ಷಿ ಬೆಳೆದು ರೈತರು ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ತಾಲೂಕಲ್ಲಿ ಇದುವರೆಗೆ 8 ಫಲಾನುಭವಿಗಳನ್ನು ಆಯ್ಕೆ ಮಾಡಿ ಸಹಾಯಧನ ನೀಡಿದೆ. ಪಡೆದ ಎಲ್ಲ ರೈತರಿಗೆ ಅನುಕೂಲವಾಗಿದೆ ಎನ್ನುತ್ತಾರೆ ತೋಟಗಾರಿಕೆ ಸಹಾಯಕ ನಿರ್ದೇಶಕ ಎಂ.ಜಿ.ರೋಹಿತ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts