More

    ವಡ್ನಾಳ್ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಅನಾರೋಗ್ಯ

    ಟಿ.ಎನ್.ಜಗದೀಶ್ ಚನ್ನಗಿರಿ: ತಾಲೂಕಿನ ವಡ್ನಾಳ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮೂರು ವರ್ಷಗಳಾದರೂ ಉದ್ಘಾಟನೆಯಾಗದೇ ಅನೈರ್ಮಲ್ಯ, ಕುಡುಕರು, ಜೂಜುಕೋರರ ಪಾಲಿನ ಅಡ್ಡೆಯಾಗಿದೆ.

    2017-18ನೇ ಸಾಲಿನಲ್ಲಿ ಶಾಸಕ ವಡ್ನಾಳ್ ರಾಜಣ್ಣ ಅವರ ಅವಧಿಯಲ್ಲಿ ಆರೋಗ್ಯಇಲಾಖೆಯ ಒಂದೂವರೆ ಕೋಟಿ ರೂ. ಅನುದಾನದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಿಸಿದೆ.

    ಈ ಆರೋಗ್ಯ ಕೇಂದ್ರ ಚನ್ನಗಿರಿಯಿಂದ 15 ಕಿ.ಮೀ. ದೂರವಿದ್ದು, ಪ್ರಾರಂಭವಾದರೆ ವಡ್ನಾಳ್ ಸೇರಿದಂತೆ ಪಕ್ಕದ ಕುಮಾರನಹಳ್ಳಿ, ವಡ್ನಾಳ್, ಬನ್ನಿಹಟ್ಟಿ ಇತರ ಗ್ರಾಮಗಳ ನಾಲ್ಕು ಸಾವಿರಕ್ಕೂ ಅಧಿಕ ಜನರಿಗೆ ಅನುಕೂಲವಾಗಲಿದೆ. ರಾತ್ರಿ ಸಾರಿಗೆ ಸೌಲಭ್ಯವಿಲ್ಲದೇ ತುರ್ತು ಸೌಲಭ್ಯ ಸಿಗದೇ ಹಲವು ಜನ ಪ್ರಾಣ ಕಳೆದುಕೊಂಡಿದ್ದಾರೆ.

    ಆದರೆ ಕಟ್ಟಡ ಪಾಳು ಬಿದ್ದಿದ್ದು, ಗಿಡ-ಗಂಟೆ ಬೆಳೆದು ಅರ್ಧ ಕಟ್ಟಡ ಕಾಣದಂತಾಗಿದೆ. ದಾರಿ ಹೋಕರಿಗೆ ವಾಸಸ್ಥಳವಾಗಿದೆ. ಹಗಲಲ್ಲಿ ದನಕಾಯುವವರು, ಸಂಜೆಯಾಗುತ್ತಿದ್ದಂತೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಕಟ್ಟಡದ ಗುಣಮಟ್ಟದ್ದಾಗಿದ್ದು, ನಿರ್ವಹಣೆ ಇಲ್ಲದಾಗಿದೆ.

    ಹೊಸದಾಗಿ ನಿರ್ಮಾಣಗೊಂಡ ಆರೋಗ್ಯಕೇಂದ್ರದ ಕಟ್ಟಡವನ್ನು ಈ ತನಕ ಆರೋಗ್ಯ ಇಲಾಖೆಗೆ ಹಸ್ತಾಂತರಿಸಿಲ್ಲ. ಆಡಳಿತ್ಮಾಕ ಅನುಮೋದನೆ ಹಾಗೂ ಸಿಬ್ಬಂದಿ ನೀಡಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕಟ್ಟಡವನ್ನು ನಮ್ಮ ಸ್ವಾಧೀನಕ್ಕೆವಹಿಸಿಲ್ಲ.
    > ಡಾ.ಬಿ.ಎಂ.ಪ್ರಭು ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ

    ನಾನು ಹುಟ್ಟಿ ಬೆಳೆದ ವಡ್ನಾಳ್ ಮತ್ತು ಸುತ್ತಲಿನ ಗ್ರಾಮಗಳ ಜನರ ಅನುಕೂಲಕ್ಕೆಂದು ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಿದೆ. ನನ್ನ ಅಧಿಕಾರವಧಿಯಲ್ಲೇ ಉದ್ಘಾಟಿಸುವ ಇಚ್ಛೆಯಿತ್ತು. ಆದರೆ ಅಷ್ಟರಲ್ಲಿ ಚುನಾವಣೆ ನೀತಿ ಸಂಹಿತೆ ಬಂದಿದ್ದರಿಂದ ಉದ್ಘಾಟನೆ ಸಾಧ್ಯವಾಗಲಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ ಸಾವಿರಾರು ಜನರಿಗೆ ಆರೋಗ್ಯ ಸೇವೆ ಲಭ್ಯವಾಗುತ್ತಿತ್ತು. ಕಟ್ಟಡ ಹಾಳಾಗದಂತೆ ನೋಡಿಕೊಳ್ಳಬೇಕು.
    > ವಡ್ನಾಳ್ ರಾಜಣ್ಣ ಮಾಜಿ ಶಾಸಕ

    ಅನಾರೋಗ್ಯ, ಅವಘಡಗಳ ಸಂದರ್ಭದಲ್ಲಿ ದೂರದ ಚನ್ನಗಿರಿಗೆ ಹೋಗಬೇಕಿದೆ. ಕಟ್ಟಡದ ಸುತ್ತಲು ಮದ್ಯದ ಬಾಟಲು, ಗುಟ್ಕಾ ಪಾಕೆಟ್ ಬಿದ್ದಿವೆ. ಇದರ ವಾರಸುದಾರರು ಇದ್ದರೆ ಹುಡುಕಿಕೊಡಿ ಮತ್ತು ಜನರಿಗೆ ಆಸ್ಪತ್ರೆಯ ಸೇವೆ ಲಭ್ಯವಾಗುವಂತೆ ಮಾಡಿ.
    > ಚಿದಾನಂದಗೌಡ ವಡ್ನಾಳ್ ಗ್ರಾಮದ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts