More

    ಹಳೆಯ ಕಾಲದ ಹೊಸ ಕಥೆ; ಕಾಲೆಳೆಯೋ ಚಿತ್ರದಲ್ಲಿ ಚಂದನ್ ಶೆಟ್ಟಿ

    ಬೆಂಗಳೂರು: ಚಂದನ್ ಶೆಟ್ಟಿ ಹೀರೋ ಆಗಬೇಕು ಎಂದು ಕನಸು ಕಂಡಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರಿಗೆ ಅಂಥದ್ದೊಂದು ಅವಕಾಶವಂತೂ ಸಿಕ್ಕಿದೆ. ‘ಎಲ್ರ ಕಾಲೆಳಿಯುತ್ತೆ ಕಾಲ’ ಎಂಬ ಚಿತ್ರದಲ್ಲಿ ಚಂದನ್ ನಾಯಕನಾಗಿ ನಟಿಸುತ್ತಿದ್ದು, ಇತ್ತೀಚೆಗೆ ಚಿತ್ರದ ಮುಹೂರ್ತ ನಡೆದಿದೆ. ಮೈಸೂರಿನ ಅರ್ಜುನ ಅವಧೂತರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ‘ಎಲ್ರ ಕಾಲೆಳಿಯುತ್ತೆ ಕಾಲ’ ಚಿತ್ರವನ್ನು ನಿರ್ದೇಶಿಸುತ್ತಿರುವವರು ನಟ ಸುಜಯ್ ಶಾಸ್ತ್ರಿ. ಚಿತ್ರ ನಿರ್ವಿುಸುತ್ತಿರುವವರು ‘ಕಾರ್ನಿ’ ಮತ್ತು ‘ಕೃಷ್ಣ ಟಾಕೀಸ್’ ನಿರ್ವಿುಸಿದ್ದ ಗೋವಿಂದರಾಜು. ರಾಜ್​ಗುರು ಹೊಸಕೋಟೆ ಜತೆಗೆ ಕಥೆ ಮಾಡಿಕೊಂಡ ಸುಜಯ್, ನಿರ್ವಪಕರಿಗೆ ಕಥೆ ಹೇಳಿದರಂತೆ. ಕರೊನಾ ಕಡಿಮೆಯಾದ ಮೇಲೆ ನೋಡೋಣ ಎಂಬ ಆಶ್ವಾಸನೆ ಅವರಿಂದ ಬಂದಿದೆ. ಕರೊನಾ ಕಡಿಮೆಯಾಗುತ್ತಿದ್ದಂತೆಯೇ ಪಟ್ಟು ಬಿಡದೆ, ಚಿತ್ರ ಪ್ರಾರಂಭಿಸಿದ್ದಾರೆ ಸುಜಯ್.

    ‘1980ರಿಂದ 90ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದು. ಕಥೆಯ ಬಗ್ಗೆ ಜಾಸ್ತಿ ಹೇಳುವುದಿಲ್ಲ’ ಎಂದು ಮೈಕನ್ನು ಚಿತ್ರಕಥೆ-ಸಂಭಾಷಣೆ ಬರೆದಿರುವ ರಾಜ್​ಗುರುಗೆ ಕೊಟ್ಟರು. ಚಿತ್ರಕಥೆಯನ್ನು ಕೇವಲ 15 ದಿನಗಳಲ್ಲಿ ಬರೆದು ಮುಗಿಸಿದ್ದಾಗಿ ರಾಜ್​ಗುರು ಹೇಳಿಕೊಂಡರು.

    ಚಂದನ್ ಹೆಚ್ಚು ಮಾತನಾಡಲಿಲ್ಲ. ‘ಇಷ್ಟು ದಿನ ನನ್ನ ಹಾಡು ಮತ್ತು ಸಂಗೀತಕ್ಕೆ ಎಲ್ಲರ ಬೆಂಬಲ ಸಿಕ್ಕಿದೆ. ಈಗ ಹೀರೋ ಎಂಟ್ರಿ ಕೊಡುತ್ತಿದ್ದೇನೆ. ಎಲ್ಲರ ಬೆಂಬಲ ಮುಂದುವರಿಯಲಿ. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ವಿಜಯ್’ ಎಂದು ಚಂದನ್ ಹೇಳಿದರೆ, ‘ನನ್ನ ಪಾತ್ರದ ಹೆಸರು ವಸಂತ’ ಎಂದು ನಾಯಕಿ ಅರ್ಚನಾ ಕೊಟ್ಟಿಗೆ ಬಹಳ ಬೇಗ ಮಾತು ಮುಗಿಸಿದರು. ಚಿತ್ರದಲ್ಲಿ ತಾರಾ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರಂತೆ. ‘ನನಗೆ ಸುಜಯ್, ರಿಯಾಲಿಟಿ ಶೋ ಮೂಲಕ ಪರಿಚಯವಾದರು. ನನ್ನ ಚಿತ್ರವೊಂದರಲ್ಲಿ ನೀವು ಅಭಿನಯಿಸಬೇಕು ಎಂದು ಕಥೆ ಹೇಳಿದರು. ಬಹಳ ಚೆನ್ನಾಗಿತ್ತು. ಅದನ್ನು ಪಕ್ಕಕ್ಕಿಟ್ಟು, ಈಗ ಈ ಚಿತ್ರ ಶುರು ಮಾಡಿದ್ದಾರೆ. ಅದು ಸಹ ಸದ್ಯದಲ್ಲೇ ಶುರುವಾಗಲಿದೆ’ ಎಂದರು. ‘ಎಲ್ರ ಕಾಲೆಳಿಯುತ್ತೆ ಕಾಲ’ ಚಿತ್ರಕ್ಕೆ ಪ್ರವೀಣ್ ಮತ್ತು ಪ್ರದೀಪ್ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣವಿದೆ.

    ಕೋವಿಡ್ ವೇಳೆ ಕರ್ತವ್ಯ ನಿಭಾಯಿಸಿದ ಬಗ್ಗೆ ತೃಪ್ತಿ ಇದೆ ಎಂದ ಬಿಎಸ್‌ವೈ; ಶಿವಾನಂದ ತಗಡೂರು ಅವರ ‘ಕೋವಿಡ್ ಕತೆಗಳು’ ಪುಸ್ತಕ ಲೋಕಾರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts