More

    ರಸ್ತೆಯಲ್ಲಿ ಒಕ್ಕಣೆಯಿಂದಾಗುವ ಅನಾಹುತಗಳಿಗೆ ಗ್ರಾಪಂ ಹೊಣೆ

    ಚಾಮರಾಜನಗರ: ರಸ್ತೆಗಳಲ್ಲಿ ಧಾನ್ಯ ಒಕ್ಕಣೆ ಮಾಡುವಂತಿಲ್ಲ. ಒಂದು ವೇಳೆ ಒಕ್ಕಣೆ ಮಾಡಿ ಅಪಘಾತ, ಜೀವಹಾನಿ ಸಂಭವಿಸಿದರೆ ಆ ಭಾಗದ ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರೇ ನೇರ ಹೊಣೆಗಾರರಾಗುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್ ತಿಳಿಸಿದರು.


    ತಾಲೂಕಿನ ಲಿಂಗನಪುರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ತೆರಕಣಾಂಬಿ ಹಾಗೂ ಪ್ರಗತಿ- ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅರಕಲವಾಡಿ ವತಿಯಿಂದ ಸೋಮವಾರ ಆಯೋಜಿಸಿದ್ದ ಅರಕಲವಾಡಿ ವಲಯದ ಒಕ್ಕೂಟ ಪದಗ್ರಹಣ ಹಾಗೂ ಸಾಧನಾ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕರು, ವಾಹನ ಸಂಚರಿಸುವ ರಸ್ತೆಯಲ್ಲಿ ಒಕ್ಕಣೆ ಮಾಡುವಂತಿಲ್ಲ. ಇದರಿಂದ ವಾಹನ ಸವಾರರಿಗೆ ಹಾಗೂ ವಾಹನಕ್ಕೆ ಹೆಚ್ಚು ಅಪಾಯ. ಹುರುಳಿ ಅಥವಾ ಹುಲ್ಲು ವಾಹನದಡಿ ಸಿಲುಕಿ ಬೆಂಕಿ ಹೊತ್ತಿಕೊಂಡರೆ ತೊಂದರೆ ಅನುಭವಿಸುವವರು ಸವಾರರು. ಸವಾರರ ಜೀವಕ್ಕೂ ಕುತ್ತು ಎದುರಾಗುತ್ತದೆ ಎಂದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾನೂನುಬದ್ಧ ವ್ಯವಹಾರ ನಡೆಸುತ್ತಿರುವುದರಿಂದ ಯಶಸ್ಸಿಗೆ ಕಾರಣವಾಗಿದೆ. ಈ ಯೋಜನೆಯ ಪ್ರತಿ ಸದಸ್ಯರು ಕಾನೂನಿನ ಚೌಕಟ್ಟಿನಡಿ ಕಾರ್ಯನಿರ್ವಹಿಸುವ ಜತೆಗೆ ನಂಬಿಕೆ, ಪ್ರೀತಿ, ಪ್ರಾಮಾಣಿಕತೆ ಅಳವಡಿಸಿಕೊಂಡು ವ್ಯವಹಾರ ನಡೆಸುತ್ತಿರುವುದು ಶ್ಲಾಘನೀಯ ಎಂದರು.


    ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗಶ್ರೀಪ್ರತಾಪ್ ಮಾತನಾಡಿ, ಜವಾಬ್ದಾರಿ ಎನ್ನುವುದು ಮುಳ್ಳಿನ ಹಾದಿ ಇದ್ದಂತೆ. ಸ್ವಸಹಾಯ ಸಂಘದ ಸದಸ್ಯರು ವೈಯಕ್ತಿಕ ನೆಲೆಗಟ್ಟನ್ನು ಬದಿಗಿಟ್ಟು ಕರ್ತವ್ಯ ನಿರ್ವಹಿಸಬೇಕು. ಕಾನೂನು ಚೌಕಟ್ಟಿನೊಳಗೆ ಸಂಘವನ್ನು ಮುನ್ನಡೆಸಿದರೆ ಗಳಿಸಿದ ಹೆಸರು ಉಳಿಯುತ್ತದೆ ಎಂದು ಸಲಹೆ ನೀಡಿದರು. ವಿವಿಧ ವಲಯಗಳ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಸಲಾಯಿತು. ಸಿದ್ದಮಲ್ಲೇಶ್ವರ ಪಟ್ಟದ ಮಠದ ಶ್ರೀ ಚಿಕ್ಕಬುದ್ದಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಮಹದೇವಸ್ವಾಮಿ, ಯೋಜನೆ ಜಿಲ್ಲಾ ನಿರ್ದೇಶಕಿ ಲತಾ ಬಂಗೇರ, ಎಪಿಎಂಸಿ ನಿರ್ದೇಶಕ ರವಿಕುಮಾರ್, ಮುಖಂಡರಾದ ಎ.ಎಸ್.ಗುರುಸ್ವಾಮಿ, ಯೋಜನೆಯ ಶರತ್, ದಿನೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts