More

    ಬಾಲರಾಜುಗೆ ಅವಕಾಶ ಸಿಕ್ಕಿದ್ದೇಗೆ?

    ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಳ್ಳೇಗಾಲ ಕ್ಷೇತ್ರದ ಮಾಜಿ ಶಾಸಕ ಎಸ್.ಬಾಲರಾಜುಗೆ ಸಿಕ್ಕಿದ್ದೇಗೆ..?

    ಟಿಕೆಟ್ ಹಂಚಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲುಗೈ ಸಾಧಿಸಿರುವುದೇ ಇದಕ್ಕೆ ಉತ್ತರ. ಕಾಂಗ್ರೆಸ್‌ನಲ್ಲಿದ್ದ ಎಸ್.ಬಾಲರಾಜುಗೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಟಿಕೆಟ್ ಸಿಗಲಿಲ್ಲ. ಇದರಿಂದ ಅಸಮಾಧಾನಗೊಂಡು ಬಿಜೆಪಿ ಸೇರಿದರು.
    ಎನ್.ಮಹೇಶ್ ಅದಾಗಲೇ ಬಿ.ಎಸ್.ಯಡಿಯೂರಪ್ಪ ಸರ್ಕಾರ ರಚನೆಗೆ ಪರೋಕ್ಷವಾಗಿ ಸಹಕರಿಸಿ ಬಿಎಸ್ಪಿಯಿಂದ ಉಚ್ಛಾಟನೆಗೊಂಡು ಬಿಜೆಪಿ ಸೇರಿ ಅಭ್ಯರ್ಥಿಯಾಗಿದ್ದರು. ಎಲೆಕ್ಷನ್‌ನಲ್ಲಿ ಇವರ ವಿರೋಧಿಗಳೆಲ್ಲಾ ಒಗ್ಗೂಡುತ್ತಿದ್ದಾಗ ಈ ಪಾಳಯದಿಂದ ಎನ್.ಮಹೇಶ್ ಕಡೆಗೆ ಬಂದವರು ಎಸ್.ಬಾಲರಾಜು ಮಾತ್ರ.

    ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡ ಎಸ್.ಬಾಲರಾಜು ಈ ಹಂತದಲ್ಲಿ ತನ್ನ ಮುಂದಿನ ಭವಿಷ್ಯದ ಬಗ್ಗೆ ಇಟ್ಟಿದ್ದ ವಿಶ್ವಾಸವನ್ನು ಬಲಪಡಿಸಿಕೊಂಡಿದ್ದರು.

    ಕೆಜೆಪಿ ನಂಟು: ಮಾಜಿ ಶಾಸಕ ಎಸ್.ಬಾಲರಾಜು ಅವರ ರಾಜಕೀಯ ಜೀವನ ಪಕ್ಷ ಜಿಗಿತ, ಏರಿಳಿತಗಳಿಂದ ಕೂಡಿದೆ. ಇವರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳನ್ನೆಲ್ಲಾ ಕಂಡಿದ್ದಾರೆ. ಪಕ್ಷೇತರರಾಗಿಯೂ ಕಣಕ್ಕಿಳಿದಿದ್ದರು. ಈ ನಡುವೆ ಇವರು ಕೆಜೆಪಿ ಸೇರಿ ಅಂದು ಬಿ.ಎಸ್.ಯಡಿಯೂರಪ್ಪ ವಿಶ್ವಾಸ ಗಳಿಸಿದರು. 2013ರಲ್ಲಿ ಕೆಜಿಪಿ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದರು. ಬಿಎಸ್‌ವೈ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ ಸಂದರ್ಭದಲ್ಲಿ ಜತೆಯಾದವರನ್ನು ಮರೆತಿಲ್ಲ. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಲ್ಲಿಕಾರ್ಜುನಪ್ಪ ಮೇಲೆ ಇಂದಿಗೂ ಇರುವ ವಿಶ್ವಾಸ ಇದಕ್ಕೆ ಸಾಕ್ಷಿ. ರಾಜ್ಯಸಭಾ ಸದಸ್ಯರಾಗಿದ್ದ ರಾಜಶೇಖರಮೂರ್ತಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ್ ಅವರ ಶಿಷ್ಯರಾಗಿದ್ದ ಎಸ್.ಬಾಲರಾಜು ಬಿಎಸ್‌ವೈ ಗರಡಿಯೊಳಗೆ ಕಾಲಿಟ್ಟರೂ ಮರಳಿ ಕಾಂಗ್ರೆಸ್ ಸೇರಿದ್ದರು. ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಗೊಂಡು ಮರಳಿ ಬಿಎಸ್‌ವೈ ಬಳಗಕ್ಕೆ ಸೇರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಡಾ.ಮೋಹನ್‌ಗೆ ಟಿಕೆಟ್ ಕೈತಪ್ಪಿತಲ್ಲ..
    ಸಂಸದ ವಿ.ಶ್ರೀನಿವಾಸಪ್ರಸಾದ್ ಅಳಿಯ ಡಾ.ಮೋಹನ್‌ಕುಮಾರ್‌ಗೆ ಬಿಜೆಪಿ ಟಿಕೆಟ್ ಖಚಿತ ಎನ್ನುವಂತೆ ಬಿಂಬಿತವಾಗಿತ್ತು. 14 ಚುನಾವಣೆಗಳನ್ನು ಕಂಡಿರುವ ಹಿರಿಯ ರಾಜಕಾರಣಿ ವಿ.ಶ್ರೀನಿವಾಸಪ್ರಸಾದ್ ಚಾಮರಾಜನಗರ ಲೋಕಸಭಾ ಕ್ಷೇತ್ರ ಮಾತ್ರವಲ್ಲದೇ ರಾಜ್ಯಾದ್ಯಂತ ಚಿರಪರಿಚಿತರು. ಮಾ.17ರಂದು ರಾಜಕೀಯ ನಿವೃತ್ತಿ ಹೊಂದುತ್ತಿರುವ ಇವರ ನಂತರ ಈ ಸ್ಥಾನ ತುಂಬುವವರ‌್ಯಾರು ಎನ್ನುವ ಪ್ರಶ್ನೆ ಎದ್ದಿತ್ತು. ಅಳಿಯ ಡಾ.ಮೋಹನ್‌ಕುಮಾರ್ ಸರ್ಕಾರಿ ವೈದ್ಯ ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದರು. ಹೀಗಾಗಿ ಇವರಿಗೆ ಅವಕಾಶ ಸಿಗುವುದು ಖಚಿತ ಎಂದು ಎಲ್ಲರೂ ಭಾವಿಸಿದ್ದರು. ವರಿಷ್ಠರ ಬಳಿ ಲಾಬಿ ಮಾಡಿ ವಿ.ಶ್ರೀನಿವಾಸಪ್ರಸಾದ್ ತನ್ನ ಅಳಿಯನಿಗೆ ಟಿಕೆಟ್ ಕೊಡಿಸೇ ಕೊಡಿಸುತ್ತಾರೆ ಎಂದು ಎಲ್ಲರೂ ತಿಳಿದಿರುವಾಗ ಮಾಜಿ ಶಾಸಕ ಎಸ್.ಬಾಲರಾಜುಗೆ ಅವಕಾಶ ದೊರೆಯಿತು. ಸಂಘ ಪರಿವಾರದೊಂದಿಗೆ ಉತ್ತಮ ಒಡನಾಟ ಹೊಂದಿರುವ ಡಾ.ಮೋಹನ್‌ಕುಮಾರ್ ಟಿಕೆಟ್‌ಗಾಗಿ ಪ್ರಯತ್ನಿಸಿದ ಮಾರ್ಗ ಬದಲಾವಣೆ ಮಾಡಬೇಕಿತ್ತು ಎನ್ನಲಾಗುತ್ತಿದೆ.

    ಯಾರಾಗ್ತಾರೆ ಕಾಂಗ್ರೆಸ್ ಅಭ್ಯರ್ಥಿ?
    ಬಿಜೆಪಿ ಅಭ್ಯರ್ಥಿ ೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಹುರಿಯಾಳು ಯಾರಾಗ್ತಾರೆ ಎನ್ನುವ ಚರ್ಚೆ ನಡೆದಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ, ನಂಜನಗೂಡು ಶಾಸಕ ದರ್ಶನ್ ಹೆಸರು ಮುಂಚೂಣಿಯಲ್ಲಿದ್ದರೂ ಇವರು ಸ್ಪರ್ಧೆಗೆ ಒಲ್ಲೆ ಎನ್ನುತ್ತಿದ್ದಾರೆ. ಇನ್ನು ಡಾ.ಎಚ್.ಸಿ.ಮಹದೇವಪ್ಪ ತನ್ನ ಮಗ ಸುನೀಲ್ ಬೋಸ್‌ಗೆ ಅವಕಾಶ ಕೊಡಬೇಕೆಂದು ಕೇಳಿಕೊಂಡಿದ್ದಾರೆ. ಎಸ್.ಬಾಲರಾಜುಗೆ ಬಿಜೆಪಿ ಟಿಕೆಟ್ ಕೊಟ್ಟ ನಂತರ ಕೊಳ್ಳೇಗಾಲ ಕ್ಷೇತ್ರದ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಹೆಸರು ಚರ್ಚೆಗೆ ಬಂದಿದೆ. ಉಳಿದಂಗೆ ಪುಷ್ಪಾ ಅಮರ್‌ನಾಥ್, ಬಿ.ಸೋಮಶೇಖರ್, ಕಾಗಲವಾಡಿ ಶಿವಣ್ಣ ಮತ್ತು ಇನ್ನಿತರರು ಆಕಾಂಕ್ಷಿಗಳಾಗಿದ್ದಾರೆ.

    ಅವಕಾಶ ವಂಚಿತರು ಏನಂತಾರೆ..?
    ಬಿಜೆಪಿ ಟಿಕೆಟ್ ವಂಚಿತರು ಎಸ್.ಬಾಲರಾಜು ಅವರ ಆಯ್ಕೆಯನ್ನು ಅರಗಿಸಕೊಳ್ಳುತ್ತಿದ್ದಾರೆ. ಡಾ.ಮೋಹನ್‌ಕುಮಾರ್ ಮುಗುಮ್ಮಾಗಿ ಇದ್ದಾರೆ. ಆದರೆ ಮತ್ತೋರ್ವ ಆಕಾಂಕ್ಷಿಯಾಗಿದ್ದ ವೆಂಕಟರಮಣಸ್ವಾಮಿ(ಪಾಪು) ಹೊರಗಿನವರನ್ನು ಬಿಟ್ಟು ಸ್ಥಳೀಯರಿಗೆ ಟಿಕೆಟ್ ಸಿಕ್ಕಿದೆ ಎಂದಿದ್ದಾರೆ. ಕಾಂಗ್ರೆಸ್ ಕೂಡ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ದಲಿತ ಮುಖಂಡನಾಗಿ ಒತ್ತಾಯ ಮಾಡುತ್ತೇನೆ ಎಂದಿದ್ದಾರೆ. ಇನ್ನು ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಮಾತನಾಡಿ, ನಾನು ಪ್ರಾಮಾಣಿಕವಾಗಿ ಪಕ್ಷಕ್ಕಾಗಿ 20 ವರ್ಷ ದುಡಿದಿದ್ದೇನೆ. ನನಗೆ ಎರಡು ಮೂರು ಸಲ ಅನ್ಯಾಯವಾಗಿದೆ. ಈ ಸಲ ಪ್ರಬಲವಾಗಿ ಟಿಕೆಟ್ ಕೇಳಿದ್ದೆ. ಅಂತಿಮವಾಗಿ ಏನೇನು ಕಾರಣಗಳಿಂದ ಟಿಕೆಟ್ ಸಿಕ್ಕಿಲ್ಲವೋ ಗೊತ್ತಿಲ್ಲ. ನನ್ನ ಸ್ನೇಹಿತರಿಗೆ ಅವಕಾಶ ಸಿಕ್ಕಿದೆ. ನಾವು ಇನ್ನೇನು ಮಾಡಲು ಸಾಧ್ಯ. ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದವರಿಗೆ ಬೆಲೆ ಇಲ್ಲ. ಪಕ್ಷ ಸಂಘಟನೆ ಮಾಡಿದವರಿಗೆ ಪ್ರೋತ್ಸಾಹವಿಲ್ಲ. ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ. ಹಾಗಾಗಿ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಏನು ಮಾಡಲು ಸಾಧ್ಯ ನಾವೆಲ್ಲರೂ ಹೈಕಮಾಂಡ್ ಆದೇಶವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts