More

    ನಗರದಲ್ಲಿ ಮೇಳೈಸಿದ ರೈತ ದಸರಾ

    ಚಾಮರಾಜನಗರ: ವಿವಿಧ ಜಾನಪದ ಕಲಾತಂಡಗಳು, ಸ್ಥಬ್ದ ಚಿತ್ರಗಳ ಜತೆಗೆ ಎತ್ತಿನಗಾಡಿ ಮೆರವಣಿಗೆ. ಸಿರಿಧಾನ್ಯಕ್ಕೆ ಭಕ್ತಿಯಿಂದ ಪೂಜೆ ಸಲ್ಲಿಸಿದ ಅಧಿಕಾರಿಗಳು. ಕೃಷಿಯಲ್ಲಿ ಸಾಧನೆ ತೋರಿದ ಹಲವು ಸಾವಯವ ಕೃಷಿಕರಿಗೆ ಸನ್ಮಾನ. ರೈತ ದಸರಾ ಯಶಸ್ಸಿಗೆ ಎಲ್ಲವೂ ಸಾಕ್ಷಿಯಾದವು.

    ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ದಸರಾ ಮಹೋತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ರೈತದಸರಾ ಕಾರ್ಯಕ್ರಮದ ಮೆರವಣಿಗೆಗೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಚಾಲನೆ ನೀಡಿದರು. ಬಳಿಕ ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ, ಜಿಲ್ಲಾಡಳಿತ ಭವನದ ಮುಖ್ಯದ್ವಾರದಿಂದ ಮತ್ತೆ ಶ್ರೀ ಭುವನೇಶ್ವರಿ ವೃತ್ತ, ಡಿವಿಯೇಷನ್ ರೋಡ್, ಸುಲ್ತಾನ್ ಷರ್ೀ ವೃತ್ತ ಹಾಗೂ ಪ್ರವಾಸಿ ಮಂದಿರದ ಮಾರ್ಗವಾಗಿ ಸಾಗಿದ ಮೆರವಣಿಗೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂತ್ಯವಾಯಿತು.

    ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದಾ ಸಿರಿಧಾನ್ಯ ಪೂಜೆ ನಡೆಸಿ, ಹೊಂಬಳೆ ಬಿಡಿಸಿ ಮತ್ತು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.

    ಇಡೀ ವಿಶ್ವದಲ್ಲೇ ಮೈಸೂರು ದಸರಾ ಮಹೋತ್ಸವ ಗುರುತಿಸಿಕೊಂಡಿದೆ. ಚಾ.ನಗರ ವಿಭಜಿತ ಜಿಲ್ಲೆಯಾದರೂ ಮೈಸೂರಿನೊಂದಿಗೆ ಸಾಂಸ್ಕೃತಿಕ ಬಾಂಧವ್ಯವನ್ನು ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ 2013 ರಿಂದ ದಸರಾ ಮಹೋತ್ಸವ ಚಾ.ನಗರಕ್ಕೂ ವಿಸ್ತರಣೆಯಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿಯ ದಸರಾ ಮಹೋತ್ಸವದಲ್ಲಿ ಬಹುಜನರ ಬೇಡಿಕೆಯಂತೆ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

    ರೈತ ದೇಶದ ಬೆನ್ನೆಲುಬು ಇದ್ದಂತೆ, ಆದರೆ ಪ್ರಸ್ತುತ ಸಂದರ್ಭದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ, ಬೆಲೆ ಏರಿಕೆ ಹಾಗೂ ಇನ್ನಿತರೆ ಕಾರಣಗಳಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾನೆ. ರೈತ ದಸರಾ ಆಚರಣೆ ಮಾಡುವ ಮೂಲಕ ತಾಂತ್ರಿಕ ತಜ್ಞರನ್ನು ಕರೆಸಿ, ರೈತರ ಸಮಸ್ಯೆಗಳಿಗೆ ಪರಿಹಾರ, ವೈಜ್ಞಾನಿಕ ಮತ್ತು ಸಾವಯವ ಕೃಷಿ, ಸರ್ಕಾರಿ ಯೋಜನೆಗಳ ಮಹತ್ವವನ್ನು ರೈತರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತದೆ ಎಂದರು.

    ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಬೀಬ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಿವಪ್ರಸಾದ್, ರೇಷ್ಮೆ ಇಲಾಖೆಯ ಉಪನಿರ್ದೇಶಕ ಗಿರೀಶ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಮಂಜೇಶ್, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಹನುಮೇಗೌಡ, ಮೈಸೂರು-ಚಾಮರಾಜನಗರ ಕೃಷಿ ಪರಿಕರ ಮಾರಾಟ ಸಂಘದ ಉಪಾಧ್ಯಕ್ಷ ಯೋಗರಾಜ್, ತಾಲೂಕು ಕೃಷಿಕ ಸಮಾಝದ ಉಪಾಧ್ಯಕ್ಷ ಎ.ವಿ.ನಾಗರಾಜ್, ಪಶು ವೈದ್ಯಾಧಿಕಾರಿ ಡಾ.ಸಿಂಧು ಹಾಗೂ ಇತರರು ಭಾಗವಹಿಸಿದ್ದರು.

    ಎತ್ತಿನಗಾಡಿ ಏರಿದ ಡಿಸಿ, ಎಡಿಸಿ:
    ರೈತ ದಸರಾ ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಎತ್ತಿನಗಾಡಿ ಏರುವ ಮೂಲಕ ಗಮನಸೆಳೆದರು. ಶ್ರೀಚಾಮರಾಜೇಶ್ವರ ದೇವಸ್ಥಾನದಿಂದ ಭುವನೇಶ್ವರಿ ವೃತ್ತದವರೆಗೆ ಎತ್ತಿನಗಾಡಿಯಲ್ಲೇ ಸಾಗಿದರು. ಮೆರವಣಿಗೆ ಜಿಲ್ಲಾಡಳಿತ ಭವನದ ಮುಂಭಾಗ ಬರುತ್ತಿದ್ದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದಾ ಎತ್ತಿನಗಾಡಿಯನ್ನು ಏರಿ, ಅಗ್ಗವನ್ನು ಹಿಡಿದು ಮೆರವಣಿಗೆಗೆ ಕಳೆತಂದರು. ಹಸಿರು ಸೀರೆಯಲ್ಲಿ ಮಿಂಚಿದ ಎಡಿಸಿ, ಡಾ.ಬಿ.ಆರ್.ಅಂಬೇಡ್ಕರ್ ಭವನದ ವರೆಗೂ ಎತ್ತಿನಗಾಡಿಯಲ್ಲೇ ಬಂದರು.

    ಎತ್ತಿನಗಾಡಿ, ಜಾನಪದ ಕಲಾತಂಡಗಳ ಮೆರುಗು:
    ಜಿಲ್ಲಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ರೈತ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎತ್ತಿನಗಾಡಿಗಳು ಹಾಗೂ ಜಾನಪದ ಕಲಾತಂಡಗಳು ಮೆರುಗು ನೀಡಿತು. ರಾಮಸಮುದ್ರ ಬಡಾವಣೆಯ ರೈತ ನಂಜುಂಡಯ್ಯ, ರಾಜು, ಗೋವಿಂದ, ಕುಂಭಯ್ಯ ಹಾಗೂ ಸೂರಿ ಎತ್ತಿನಗಾಡಿಯಲ್ಲಿ ಸಾಗಿದರು. ಡೊಳ್ಳುಕುಣಿತ, ಗೊರವರ ಕುಣಿತ, ವೀರಗಾಸೆ, ಕಂಸಾಳೆ, ನಗಾರಿ, ಬ್ಯಾಂಡ್‌ಸೆಟ್ ಹಾಗೂ ಶಿವನ ವೇಷಧಾರಿಗಳು ರೈತ ದಸರಾ ಸಂಭ್ರಮ ಹೆಚ್ಚಿಸಿದರು. ಮೆರವಣಿಗೆಯಲ್ಲಿ ಕೃಷಿ ಇಲಾಖೆ, ರೇಷ್ಮೆ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮೀನುಗಾರಿಕೆ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಯೋಜನೆಗಳನ್ನು ಪರಿಚಯಿಸುವ ಸ್ಥಬ್ದಚಿತ್ರಗಳು ಗಮನ ಸೆಳೆಯಿತು. ಮಧ್ಯಮ ವೆಚ್ಚದ ರೇಷ್ಮೆ ಹುಳು ಸಾಕಾಣಿಕೆ ಮನೆ, ತೆಪ್ಪ, ಹಸು, ಕುರಿ ಸ್ಥಬ್ದಚಿತ್ರಗಳು ಯೋಜನೆಗಳ ಮಹತ್ವವನ್ನು ಸಾರಿದವು.

    ಬರಗಾಲಕ್ಕೆ ರೈತರು ಎದೆಗುಂದದಿರಿ:
    ಈ ಬಾರಿ ರಾಜ್ಯದಲ್ಲಿ ಸರಿಯಾಗಿ ಮಳೆಯಾಗದ ಪರಿಣಾಮವಾಗಿ ಸಾಕಷ್ಟು ರೈತರು ಸಂಕಷ್ಟವನ್ನು ಎದುರಿಸುವಂತಾಗಿದೆ. ಎಂತಹ ಪರಿಸ್ಥಿತಿ ಎದುರಾದರೂ ರೈತರು ಎದೆಗುಂದದೆ ವ್ಯವಸಾಯವನ್ನು ಮುಂದುವರಿಸಬೇಕು ಎಂದು ರೈತಮುಖಂಡ ಹೊನ್ನೂರು ಪ್ರಕಾಶ್ ರೈತರಲ್ಲಿ ಆತ್ಮವಿಶ್ವಾಸ ತುಂಬಿದರು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ 3 ವರ್ಷಗಳ ಕಾಲ ಬರದಲ್ಲಿ, ಅನೇಕ ರೈತರು ಸಾವಿಗೆ ಶರಣಾಗಿದ್ದರು. ಈಗಲೂ ಅದೇ ಪರಿಸ್ಥಿತಿ ತಲೆದೋರಿದ್ದು, ಹಲವು ಸಮಸ್ಯೆಗಳ ನಡುವೆ ರೈತರು ಸಲನ್ನು ಬೆಳೆಯಲು ಮುಂದಾಗಿದ್ದಾರೆ. ಆದರೆ ಹೆಚ್ಚುವರಿ ಸಲನ್ನು ತೆಗೆಯುವ ಆಸೆಯಿಂದ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸಿ ಕೃಷಿ ಭೂಮಿ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts