More

    ಪ್ರತಿಭೆ ಅನಾವರಣಕ್ಕೆ ಒಟ್ಟುಗೂಡಿದ ಆತ್ಮೀಯ

    ಚಾಮರಾಜನಗರ: ಸಮಾನ ಅಭಿರುಚಿ ಹಾಗೂ ಕಾಳಜಿಯುಳ್ಳ ಆತ್ಮೀಯರು ಒಟ್ಟುಗೂಡಿ ಕಟ್ಟಿಕೊಂಡಿರುವ ಆತ್ಮೀಯ ರಂಗಪ್ರಯೋಗಾಲಯ ಟ್ರಸ್ಟ್ ನಿರಂತರ ರಂಗಚಟುವಟಿಕೆಗಳನ್ನು ಆಯೋಜನೆ ಮಾಡುವ ಮೂಲಕ ಪ್ರಚಲಿತದಲ್ಲಿ ಸಾಕಷ್ಟು ಚರ್ಚೆಯಲ್ಲಿದೆ.

    ಜಿಲ್ಲೆಯಲ್ಲಿ ರಂಗಭೂಮಿ, ಸಾಹಿತ್ಯ, ಸಂಗೀತ, ಜನಪದ, ಶಿಕ್ಷಣ, ಪರಿಸರ, ಧಾರ್ಮಿಕ ಹಾಗೂ ಸಮಾಜ ಸೇವಾ ಉದ್ದೇಶಗಳನ್ನು ಒಳಗೊಂಡಿರುವ ಆತ್ಮೀಯ ರಂಗಪ್ರಯೋಗಾಲಯ ಸಾಂಸ್ಕೃತಿಕ ಸಂಸ್ಥೆಯು 2019ರ ಮೇ 29ರಂದು ರಂಗಕರ್ಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್ ಅವರಿಂದ ಸಿದ್ದಯ್ಯನಪುರ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಆಡು ಬಾ ನನ್ನ ಕಂದ ಮಕ್ಕಳ ಬೇಸಿಗೆ ಶಿಬಿರದೊಂದಿಗೆ ಉದ್ಘಾಟನೆಗೊಂಡಿತು.

    ಅಂದಿನಿಂದ ಇಂದಿನವರೆಗೆ ಅನೇಕ ಸೃಜನಶೀಲ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಾ ಬಂದಿದ್ದು, ಅನೇಕ ಸಾಹಿತಿಗಳ ಕಥೆಗಳನ್ನು ರಂಗರೂಪಕ್ಕೆ ತರುವಲ್ಲಿ ಮಹತ್ತರವಾದ ಕೆಲಸವನ್ನು ಮಾಡುತ್ತಾ ಬಂದಿದೆ. ಅದಲ್ಲದೇ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾವಿರಾರು ಬೀದಿನಾಟಕಗಳ ಪ್ರದರ್ಶನ ಮಾಡಲಾಗಿದೆ. ಪ್ರತಿವರ್ಷವೂ ಬೇಸಿಗೆ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ನುರಿತ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಹಲವಾರು ಬಗೆಯ ಕಲಾ ಪ್ರಕಾರಗಳನ್ನು ತರಬೇತಿ ನೀಡಿ ತರಬೇತಿ ಪಡೆದ ಮಕ್ಕಳಿಂದ ಸಮಾರೋಪ ಸಮಾರಂಭದಲ್ಲಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ನಟನ ತಯಾರಿ ಹಾಗೂ ನಟನ ರಂಗಪ್ರಯೋಗ ತರಬೇತಿಯನ್ನು ನೀಡಿ ಬಾಷಮಹಾಕವಿಯ ಮಧ್ಯಮ ವ್ಯಾಯೋಗ ಎಂಬ ನಾಟಕವನ್ನು ಚಾಮರಾಜನಗರ, ಮೈಸೂರು ಹಾಗೂ ದಸರಾ ಕಾರ್ಯಕ್ರಮಗಳಲ್ಲಿ ಪ್ರದರ್ಶನ ಮಾಡಲಾಗಿದೆ.

    ವಾರಾಂತ್ಯ ರಂಗಶಾಲೆಯಲ್ಲಿ ಮಕ್ಕಳಿಗೆ ಅಭಿನಯ, ಸಂಗೀತ, ನಾಟಕ ತರಬೇತಿ ನೀಡಿ ಕುಣಿ ಕುಣಿ ನವಿಲೆ ಎಂಬ ನಾಟಕ ಪ್ರದರ್ಶನ ಮಾಡಲಾಗಿದೆ. ಆತ್ಮೀಯ ರಂಗ ಉತ್ಸವ ಹಾಗೂ ಆತ್ಮೀಯ ಸಂಸ್ಕೃತಿ ಪ್ರಜ್ಞಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಂಗಭೂಮಿ ದಿನಾಚರಣೆ ಅಂಗವಾಗಿ ರಂಗಸಂಗೀತ ಗಾಯನ ತರಬೇತಿ ಕಾರ್ಯಕ್ರಮವನ್ನು ನೀಡಿ ಶಿಬಿರಾರ್ಥಿಗಳಿಂದ ಮಲೆಯೂರು ಗುರುಸ್ವಾಮಿ ಸ್ಮರಣಾರ್ಥ ಆಚಾರ ನಾಟಕವನ್ನು ಪ್ರಸ್ತುತ ಪಡಿಸಲಾಗಿದೆ. ಅದಲ್ಲದೇ ಇನ್ನಿತರೆ ನಿರಂತರ ರಂಗಚಟುವಟಿಕೆಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿರುವ ಆತ್ಮೀಯ ರಂಗಪ್ರಯೋಗಾಲಯ ಟ್ರಸ್ಟ್ ಪ್ರಸ್ತುತ ಸಂದರ್ಭದಲ್ಲಿ ಪಾದರಸದಂತೆ ಕಲಾ ಕೈಂಕರ್ಯದಲ್ಲಿ ತೊಡಗಿದೆ.

    ಅನೇಕ ನಾಟಕ ಪ್ರದರ್ಶನ:
    ಆತ್ಮೀಯ ರಂಗಪ್ರಯೋಗಾಲಯ ಟ್ರಸ್ಟ್ ಹುಟ್ಟಿಕೊಂಡ ದಿನಗಳಿಂದಲೂ ನಿರಂತರವಾಗಿ ರಂಗಚಟುವಟಿಕೆಯಲ್ಲಿ ತಲ್ಲೀನವಾಗಿದ್ದು, ಸಾಕಷ್ಟು ನಾಟಕಗಳನ್ನು ಪ್ರದರ್ಶನ ಮಾಡಿದೆ. ಜಿಲ್ಲೆಯ ಹಿರಿಯ ಸಾಹಿತಿ ಮಂಜು ಕೋಡಿಉಗನೆ ರಚನೆಯ ಚಾಮಿಯ ಕೋಳಿಯೂ ಮಂಟೇಸ್ವಾಮಿ ಕಂಡಾಯವೂ ಕಥೆ ಆಧರಿಸಿ ‘ಕಂಡಾಯದ ಕೋಳಿ’ ಎಂಬ ಚಾಮರಾಜನಗರ ಭಾಷಾ ಸೊಗಡಿನ ನಾಟಕ ಪ್ರದರ್ಶನ. 2019-20ನೇ ಸಾಲಿನ ಆತ್ಮೀಯ ವಾರಾಂತ್ಯ ರಂಗಶಾಲೆ ಮಕ್ಕಳಿಂದ ಶ್ರೀಕೃಷ್ಣಗಾರುಡಿ ಪೌರಾಣಿಕ ನಾಟಕ. ಚಂದ್ರಕಾಂತ ಕುಸನೂರರ ವಿದೂಷಕ ಅಸಂಗತ ನಾಟಕ. ಬೇಲೂರು ಕೃಷ್ಣಮೂರ್ತಿ ಅವರ ಕುದುರೆ ಮೊಟ್ಟೆ ಹಾಸ್ಯ ನಾಟಕ ಪ್ರದರ್ಶನ. 2021-22ನೇ ಸಾಲಿನ ಆತ್ಮೀಯ ವಾರಾಂತ್ಯ ರಂಗಶಾಲೆ ಮಕ್ಕಳಿಂದ ಕೋಟಿಗಾನಹಳ್ಳಿ ರಾಮಯ್ಯ ಅವರ ಒಗಟಿನ ರಾಣಿ ಹಾಗೂ ಇನ್ನೂ ಮುಂತಾದ ನಾಟಕಗಳು ಮೈಸೂರು, ಚಾಮರಾಜನಗರದಲ್ಲಿ ನಡೆದ ಹಲವು ಉತ್ಸವಗಳಲ್ಲಿ ಪ್ರಯೋಗಗೊಂಡಿದೆ. ಮುಂದುವರಿದು ’ಆತ್ಮೀಯ ಪ್ರಕಾಶನ’ವನ್ನು ಪ್ರಾರಂಭಿಸಿ ಕಿರಣ್ ಗಿರ್ಗಿ ಅವರ ’ನ್ಯಾಣ ಕವಿತೆಗಳು’ ಕೃತಿಯನ್ನು ಲೋಕಾರ್ಪಣೆಗೊಳಿಸಲಾಗಿದೆ.

    ಸಂಗೀತದಲ್ಲೂ ಛಾಪುಮೂಡಿಸಿದೆ:
    ಆತ್ಮೀಯ ರಂಗಪ್ರಯೋಗಾಲಯ ಟ್ರಸ್ಟ್ ಹಲವಾರು ಸಾಹಿತಿಗಳ ಕವಿತೆಗೆ ಹಾಡಿನ ರೂಪವನ್ನು ನೀಡಿ ಸಂಗೀತದಲ್ಲೂ ಛಾಪುಮೂಡಿಸಿದೆ. ’ಕೊರೋನಾ ಪದ ಜನಪದ ಜಾಗೃತಿ ಗೀತೆ’ಯನ್ನು ನಿರ್ಮಿಸಿ ಬಿಡುಗಡೆ ಮಾಡಿದೆ. ’ಕವಿತೆ ಹಾಡಾಗಿದೆ’ ಎಂಬ ಶೀರ್ಷಿಕೆಯಡಿ ’ಚಾಮರಾಜನಗರ ಜಿಲ್ಲಾ ಕವಿಗಳ ಆಯ್ದ ಕವಿತೆಗಳಿಗೆ ಹಾಡಿನ ರೂಪ ನೀಡಿ ಯೂಟ್ಯೂಬ್ ಮೂಲಕ ಬಿಡುಗಡೆಗೊಳಿಸಿದೆ. ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ’ನನ್ನ ಭಾವ ಬಿಂದು ಕನ್ನಡ. ಮಹಾದೇವ ಶಂಕನಪುರ ಅವರ ’ಹಕ್ಕಿ ಕೂಗುತ್ತಿದೆ’. ಮಂಜು ಕೋಡಿಉಗನೆ ಅವರ ’ಓ ಭೀಮ ಅಂಬೇಡ್ಕರ’, ಸೋಮಶೇಖರ ಬಿಸಲ್ವಾಡಿ ಅವರ ನನ್ನವಳು ಬಳಿಯಿರಲು’, ರೇಚಂಬಳ್ಳಿ ದುಂಡಮಾದಯ್ಯ ಅವರ ’ಓ ಸೈನಿಕ’, ಕಿರಣ್ ಗಿರ್ಗಿ ಅವರ ’ಅಮ್ಮ ನಿನ್ನ ನಗುವಿನಲ್ಲೇ ಕವಿತೆಗಳು ಹಾಡಿನ ರೂಪ ಪಡೆದು ಜನರಿಂದ ಮೆಚ್ಚುಗೆ ಪಡೆದಿವೆ. ಕಿರಣ್‌ಗಿರ್ಗಿ ಅವರ ಸಂಗೀತ ಸಂಯೋಜನೆಯಲ್ಲಿ ಅಷ್ಟೂ ಕವಿತೆಗಳನ್ನು ಗಾಯಕರಾದ ಎಸ್.ಜಿ. ಮಹಾಲಿಂಗ ಗಿರ್ಗಿ ಹಾಡಿದ್ದಾರೆ.

    ಬೇಸಿಗೆ ಶಿಬಿರ ಆಯೋಜನೆ:
    ವಿಶ್ವರಂಗಭೂಮಿ ದಿನಾಚರಣೆ – 2024 ಇದರ ಪ್ರಯುಕ್ತ ಯುವಕ-ಯುವತಿಯರಿಗೆ ಅಭಿನಯ, ನಾಟಕ ತರಬೇತಿ ಶಿಬಿರವನ್ನು ಆತ್ಮೀಯ ಪ್ರಯೋಗಾಲಯ ಟ್ರಸ್ಟ್ ವತಿಯಿಂದ ಆಯೋಜನೆ ಮಾಡಲಾಗಿದೆ.ಆತ್ಮೀಯ ಸಂಸ್ಥೆಯು 5 ವರ್ಷಗಳ ಪಯಣದಲ್ಲಿ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆಮಾಡಿಕೊಂಡು ಬರುತ್ತಿದ್ದು, ರಂಗ ಆಸಕ್ತರಿಗೆ, ಪ್ರತಿಭೆಗಳ ಅನಾವರಣಕ್ಕೆ ಸೂಕ್ತವಾದ ವೇದಿಕೆಯಾಗಿದೆ. ಈ ಬಾರಿಯ ಬೇಸಿಗೆ ಶಿಬಿರದಲ್ಲೂ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು, ಶಿಬಿರಕ್ಕೆ ಭಾಗವಹಿಸಲು ಆಸಕ್ತಿ ಇರುವವರು ಮೊ: 9380277597, 9740689176 ನಂಬರ್‌ಗೆ ಸಂಪರ್ಕಿಸಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts