More

    ಮಾ.26 ರಂದು ಸೆಸ್ಕ್ ಎಂಡಿ ಕಚೇರಿಗೆ ಮುತ್ತಿಗೆ

    ಚಾಮರಾಜನಗರ: ಸಮರ್ಪಕ ವಿದ್ಯುತ್ ಪೂರೈಕೆಮಾಡುವಂತೆ ಒತ್ತಾಯಿಸಿ ಮಾ.26 ರಂದು ಮೈಸೂರಿನಲ್ಲಿರುವ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.

    ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗವಿರುವ ಉದ್ಯಾನವನದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲೆಯ ರೈತ ಪದಾಧಿಕಾರಿಗಳು ಹಾಗೂ ಕೃಷಿ ಪಂಪ್‌ಸೆಟ್ ಬಳಕೆದಾರರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮಾ.26 ರಂದು ಬೆಳಿಗ್ಗೆ 11.30 ಗಂಟೆಗೆ ಎಂಡಿ ಕಚೇರಿಯನ್ನು ಮುತ್ತಿಗೆ ಹಾಕಲಾಗುವುದು ಎಂದರು.

    ಸರ್ಕಾರದ ಆದೇಶದಂತೆ ಕೃಷಿಪಂಪ್ ಸೆಟ್‌ಗಳಿಗೆ ಹಗಲಿನಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಕಳೆದ ಸಾಲಿನಲ್ಲಿ ಇದ್ದಂತೆ ಅಕ್ರಮ-ಸಕ್ರಮವನ್ನು ಜಾರಿ ಮಾಡಬೇಕು. ಹೊಸ ವಿದ್ಯುತ್ ಸಂಪರ್ಕವನ್ನು ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಇಲಾಖೆಯವರು ಸರ್ಕಾರದ ಆದೇಶ ಇದೆ ಎನ್ನುತ್ತಾ ಯಾವುದೇ ನೋಂದಣಿಯನ್ನು ಮಾಡಿಕೊಳ್ಳದೆ ಸ್ವಂತ ಎರಡರಿಂದ, ಮೂರು ಲಕ್ಷ ರೂ, ಹಣವನ್ನು ಕಟ್ಟಿಸಿ ಸಂಪರ್ಕಪಡೆಯಲು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

    ರೈತರ ಜಮೀನಿನಲ್ಲಿ ಇರುವ ಟಿಸಿಗಳು ಸುಟ್ಟುಹೋದರೆ 72 ಗಂಟೆಗಳಲ್ಲಿ ಅಳವಡಿಸಬೇಕು ಎಂಬ ನಿಯಮವಿದ್ದರೂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಜಮೀನುಗಳಲ್ಲಿ ಜೋತುಬಿದ್ದಿರುವ ತಂತಿಗಳನ್ನು ಸರಿಪಡಿಸುತ್ತಿಲ್ಲ ಎಂದು ದೂರಿದರು.

    ಈ ನಿಟ್ಟಿನಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಕೆಗೆ ಮೊದಲಿನಂತೆಯೇ 23 ಸಾವಿರ ರೂ, ಕಟ್ಟಿಸಿಕೊಂಡು ಉಳಿಕೆ ಹಣವನ್ನು ಸರ್ಕಾರವೇ ಭರಿಸಿಬೇಕು. ವಿದ್ಯುತ್ ಅವಘಡದಲ್ಲಿ ಮರಣ ಹೊಂದಿದ ಕುಟುಂಬಕ್ಕೆ 25 ಲಕ್ಷ ರೂ, ಸೂಕ್ತ ಪರಿಹಾರವನ್ನು ಕೊಡಬೇಕು. ವಿದ್ಯುತ್‌ನಿಂದ ಸುಟ್ಟುಹೋದ ಕಬ್ಬಿಗೆ 30 ದಿನದೊಳಗೆ ಪರಿಹಾರ ನೀಡಬೇಕು. ಕೂಡಲೇ ಸೆಸ್ಕ್ ಇಲಾಖೆಯ ಅಧಿಕಾರಿಗಳು ರೈತರ ಸಭೆ ಕರೆಯಬೇಕು ಎಂಬ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

    ಸಭೆಯಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜು, ಉಪಾಧ್ಯಕ್ಷ ಮಲೆಯೂರು ಪ್ರವೀಣ್, ಸಂಘಟನಾ ಕಾರ್ಯದರ್ಶಿ ಮಲೆಯೂರು ಮಹೇಂದ್ರ ಕುಮಾರ್, ತಾಲೂಕು ಅಧ್ಯಕ್ಷ ಅರಳಿಕಟ್ಟೆ ಕುಮಾರ್, ಸಂಚಾಲಕ ಶ್ರೀಕಂಠಸ್ವಾಮಿ, ಪ್ರಭುಸ್ವಾಮಿ ಹಾಗೂ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts