More

    ತೋಟಗಾರಿಕೆ, ರೇಷ್ಮೆ ಉದ್ಯಮ ಅಭಿವೃದ್ಧಿಗೆ ಕ್ರಮ

    ಚಾಮರಾಜನಗರ: ತೋಟಗಾರಿಕೆ ಹಾಗೂ ರೇಷ್ಮೆ ಉದ್ಯಮವನ್ನು ಜಿಲ್ಲೆಯಲ್ಲಿ ಅಭಿವೃದ್ಧಿಗೊಳಿಸಿ, ಆಧುನಿಕರಣಗೊಳಿಸಲು ಅಗತ್ಯ ಅನುದಾನ ನೀಡಲಾಗುವುದು ಎಂದು ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ನಾರಾಯಣಗೌಡ ಭರವಸೆ ನೀಡಿದರು.

    ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ರೈತರ ಅಭಿವೃದ್ಧಿಗಾಗಿ ಹೆಚ್ಚು ಒತ್ತು ನೀಡಬೇಕು. ಈ ದೃಷ್ಟಿಯಿಂದ ಅನುದಾನ ಕೊರತೆ ಇದ್ದಲ್ಲಿ ಅಧಿಕಾರಿಗಳು ಶೀಘ್ರ ವರದಿ ಸಲ್ಲಿಸಿ ಎಂದು ಹೇಳಿದರು.

    ಕೋವಿಡ್-19 ಸಂದರ್ಭದಲ್ಲಿ ಸರ್ಕಾರದಿಂದ ಬಿಡುಗಡೆಗೊಳಿಸಿದ ಹಣ ಎಲ್ಲ ರೈತರಿಗೂ ತಲುಪಿದೆಯೇ ಎಂದು ಪರಿಶೀಲಿಸಿದರು. ಕೆಲವು ದಾಖಲಾತಿಗಳ ಕೊರತೆಯಿಂದ ತಲುಪದವರಿಗೆ ಪರಿಹಾರ ಶೀಘ್ರ ತಲುಪಿಸಬೇಕು. ಕೃಷಿ ಸಿಂಚಾಯಿ ಯೋಜನೆಯಡಿ ಹನಿ ಹಾಗೂ ತುಂತುರು ನೀರಾವರಿ ಅಳವಡಿಸಿಕೊಳ್ಳಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು. ಕಳಪೆ ಸಲಕರಣೆಗಳನ್ನು ಅಳವಡಿಸಿ ಮೋಸವೆಸಗುತ್ತಿದ್ದರು. ಆದ್ದರಿಂದ ಕಂಪನಿಯಿಂದ ರೈತರಿಗೆ ನೇರವಾಗಿ ಸಲಕರಣೆಗಳು ದೊರೆಯುವಂತೆ ಕ್ರಮ ವಹಿಸಲಾಗಿದೆ ಎಂದರು.

    ಚಾಮರಾಜನಗರ ತಾಲೂಕಿನ ರೇಷ್ಮೆ ಕಾರ್ಖಾನೆಯನ್ನು ಆಧುನಿಕರಣಗೊಳಿಸಲು ಬಿಡುಗಡೆಗೊಳಿಸಿದ ಅನುದಾನದಲ್ಲಿ 10ಲಕ್ಷ ರೂ.ಗಳನ್ನು ಕಾಂಪೌಂಡ್ ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ ಎಂದು ಸಂತೇಮರಹಳ್ಳಿ ರೇಷ್ಮೆ ಕಾರ್ಖಾನೆಯ ಅಧೀಕ್ಷಕ ಚಂದ್ರಶೇಖರ್ ಮಾಹಿತಿ ನೀಡಿದರು.

    ಈ ಸಂದರ್ಭ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ ಎನ್.ಮಹೇಶ್, ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ ರೇಷ್ಮೆ ಕಾರ್ಖಾನೆ ಸಂಪೂರ್ಣವಾಗಿ ಹದಗೆಟ್ಟಿದೆ. ಅದನ್ನು ಆಧುನೀಕರಣಗೊಳಿಸಲು ಬಿಡುಗಡೆಗೊಳಿಸಿದ ಹಣವನ್ನು ಯಾರನ್ನು ಕೇಳಿ ಬೇರೆ ಕಾಮಗಾರಿಗೆ ಬಳಸಿಕೊಂಡಿದ್ದೀರಿ ಎಂದು ಪ್ರಶ್ನಿಸಿದರು.

    ನಂತರ ಸಚಿವರು ಮಾತನಾಡಿ, ಯಾವುದೇ ಕಾಮಗಾರಿ ಮಾಡಬೇಕಾದಲ್ಲಿ ಅದನ್ನು ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು. ಇದೇ ವೇಳೆ ರೀಲರ್ಸ್‌ಗಳು ರೇಷ್ಮೆ ಮಾರಾಟವಾಗುತ್ತಿಲ್ಲ. ಉತ್ತಮ ಬೆಲೆ ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ರೇಷ್ಮೆಯನ್ನು ಇಲಾಖೆಯಲ್ಲಿ ಅಡಮಾನ ಇರಿಸಿ ಸಾಲ ಪಡೆಯಲಾಗಿದ್ದು, ಸಾಲದ ಬಡ್ಡಿಯನ್ನು ಮನ್ನಾ ಮಾಡಿಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ರೇಷ್ಮೆ ಅಧಿಕಾರಿಗೆ ಮಾಹಿತಿ ನೀಡುವಂತೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts