More

    ಕಲೆ, ಕಲಾವಿದರಿಗೆ ಎಂದಿಗೂ ಸಾವಿಲ್ಲ

    ಚಾಮರಾಜನಗರ : ರಂಗಕರ್ಮಿ ರಾಜಪ್ಪ ಸ್ವಾಭಿಮಾನಕ್ಕೆ ಹೆಸರಾಗಿದ್ದು, ಅಕಾಲಿಕವಾಗಿ ಮರಣ ಹೊಂದಿದ್ದಾರೆ. ಆದರೆ ಕಲೆ ಮತ್ತು ಕಲಾವಿದರಿಗೆ ಎಂದಿಗೂ ಸಾವಿಲ್ಲ ಎಂದು ಹಿರಿಯ ರಂಗಕರ್ಮಿ ಮಿಮಿಕ್ರಿ ಮಲ್ಲಣ್ಣ ಹೇಳಿದರು.

    ನಗರದ ವರನಟ ಡಾ.ರಾಜ್‌ಕುಮಾರ್ ರಂಗಮಂದಿರದ ಮುಂಭಾಗ ಚಾಮರಾಜನಗರ ಕಲಾ ಬಳಗ, ಯುವ ಕಲಾ ಬಳಗ ಹಾಗೂ ಜಿಲ್ಲಾ ಬೀದಿನಾಟಕ ಕಲಾವಿದರ ಬಳಗದ ವತಿಯಿಂದ ಬುಧವಾರ ಆಯೋಜಿಸಿದ್ದ ರಂಗನಟ, ನಿರ್ದೇಶಕ ಆರ್.ರಾಜಪ್ಪ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಜಿಲ್ಲೆಯ ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ಅವರ ಗರಡಿಯಲ್ಲಿ ರಾಜಪ್ಪ ಅವರು ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದರು. ಬಳಿಕ ಮೈಸೂರಿನಲ್ಲಿ ಮೂರು ವರ್ಷಗಳ ಕಾಲ ರಂಗಶಿಕ್ಷಣ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಯಾರೇ ಕರೆದರೂ ಬಂದು ಬೀದಿನಾಟಗಳಲ್ಲಿ ಭಾಗವಹಿಸುತ್ತಿದ್ದರು. ತನ್ನ ಬದುಕಿನ ಅಂತ್ಯದವರೆಗೂ ಕಲೆಗೆ ತುಂಬಾ ಗೌರವ ನೀಡುತ್ತಿದ್ದ ಆತ ಅಭಿನಯಿಸಿರುವ ನಾಟಕಗಳಲ್ಲಿ ಸದಾ ಜೀವಂತವಾಗಿರುತ್ತಾನೆ ಎಂದರು.

    ಯುವ ರಂಗಕರ್ಮಿ ಕಿರಣ್‌ಗಿರ್ಗಿ ಮಾತನಾಡಿ, ಸಾಮಾನ್ಯವಾಗಿ ರಂಗಕಲಾವಿದರ ವೈಯಕ್ತಿಕ ಬದುಕು ತುಂಬಾ ಸಂಕಷ್ಟದಿಂದ ಕೂಡಿರುತ್ತದೆ. ಈ ನಡುವೆಯೂ ಅವರು ರಂಗ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುತ್ತಾರೆ. ರಂಗಕರ್ಮಿ ರಾಜಪ್ಪ ಅವರ ಸಾವು ನಾವು ಇರುವಷ್ಟು ಯಾರಿಗೂ ಕೆಡುಕನ್ನು ಬಯಸದೇ ಚೆನ್ನಾಗಿ ಜೀವನ ಸಾಗಿಸಬೇಕು ಎಂಬುದನ್ನು ಕಲಿಸುತ್ತದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

    ಕಲಾವಿದ ಶಿವಶಂಕರ್ ಚಟ್ಟು ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಜನರು ಕಲಾವಿದರು ಇದ್ದಾರೆ. ಹೆಚ್ಚಿನ ಜನರು ಸಂಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದಾರೆ. ರಾಜಪ್ಪ ಅವರ ಕುಟುಂಬವೂ ಸಾಕಷ್ಟು ಸಮಸ್ಯೆಯಲ್ಲಿದ್ದು, ಕಲಾವಿದರೇ ಅವರಿಗೆ ನೆರವಾಗಬೇಕಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

    ಈ ಸಂದರ್ಭದಲ್ಲಿ ಕಲಾವಿದರು ಮಧ್ಯಾಹ್ನದವರೆಗೂ ರಂಗಗೀತೆಗಳನ್ನು ಹಾಡುವ ಮೂಲಕ ರಾಜಪ್ಪ ಅವರಿಗೆ ಗೌರವ ಸಲ್ಲಿಸಿದರು. ಆತ್ಮೀಯ ರಂಗ ಪ್ರಯೋಗಾಲಯ ಸಂಸ್ಥೆಯ ಎಂ.ಶಿವಕುಮಾರ್, ರಂಗ ಕಲಾವಿದರಾದ ಸುಶೀಲಾ, ಸಿದ್ದರಾಜು, ಸುಮತಿ, ಅಭಿಷೇಕ್, ನಿರಂಜನ್, ಕಾಂತರಾಜು, ಮಲ್ಲೇಶ್ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts