More

    ಎಳೆ ಮನಸುಗಳ ಮೇಲೂ ‘ಧ್ವಂಸ’ದ ಪರಿಣಾಮ

    ಚಾಮರಾಜನಗರ: ಮತಗಟ್ಟೆ ಧ್ವಂಸ ಪ್ರಕರಣ ಹಿರಿಯರ ಮೇಲೆ ಮಾತ್ರವಲ್ಲದೆ, ಮಕ್ಕಳ ಮನಸ್ಸಿನ ಮೇಲೂ ಪರಿಣಾಮ ಬೀರಿದೆ. ಉದ್ವಿಘ್ನ ವಾತಾವರಣ ತಿಳಿಯಾಗುತ್ತಿದ್ದಂತೆಯೇ ಮುದುಡಿದ್ದ ಚಿಣ್ಣರ ಮನಸುಗಳು ನಿಧಾನವಾಗಿ ಅರಳುತ್ತಿವೆ.

    ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಮತ್ತು ಮೆಂದಾರೆ ಗ್ರಾಮಗಳು ಗಲಭೆಯಿಂದ ಭಿನ್ನ-ವಿಭಿನ್ನ ಪರಿಣಾಮಗಳನ್ನು ಎದುರಿಸುತ್ತಿವೆ. ಎರಡೂ ಗ್ರಾಮಗಳಲ್ಲಿ ಅಂದಾಜು 80ಕ್ಕೂ ಹೆಚ್ಚು ಮಕ್ಕಳಿದ್ದಾರೆ.
    ಇಂಡಿಗನತ್ತದವರು ಪ್ರಕರಣದ ಹಿನ್ನೆಲೆಯಲ್ಲಿ ಜೈಲು ಸೇರಿದ್ದರು. ಇದರಿಂದಾಗಿ ಪಾಲಕರಿಲ್ಲದೆ ಕೆಲ ಮಕ್ಕಳು ಅನಾಥ ಭಾವ ಅನುಭವಿಸಿದ್ದರು. ಕಲ್ಲೇಟು ತಿಂದು ಗಾಯಗೊಂಡಿದ್ದ ಮೆಂದಾರೆಯ ಪಾಲಕರ ನೋವನ್ನು ಕಂಡು ಕೆಲ ಮಕ್ಕಳು ಕಣ್ಣೀರು ಹಾಕಿದ್ದರು.
    ಈಗಂತೂ ಯಾರಾದರೂ ಗ್ರಾಮಕ್ಕೆ ಬಂದರೆ ಅವರನ್ನು ಮಕ್ಕಳು ಸಹಜಗಣ್ಣಿನಿಂದ ನೋಡುತ್ತಿಲ್ಲ. ಇಷ್ಟು ದಿನ ಶಾಲೆಗೆ ಶಿಕ್ಷಕರು ಬರುವುದನ್ನು ಮಾತ್ರ ಮಕ್ಕಳು ನೋಡುತ್ತಿದ್ದರು. ಆದರೆ ಈಗ ಗ್ರಾಮದ ಶಾಲೆ ಬಳಿಯೇ ಠಿಕಾಣಿ ಹೂಡಿರುವ ಪೊಲೀಸರನ್ನು ಕಾಣುತ್ತಿದ್ದಾರೆ.

    ಜೈಲಿನಿಂದ ಹೊರಬಂದು ಗಲಾಟೆ, ಕೇಸು ಎಂದು ಮನೆಯೊಳಗೆ ಚರ್ಚೆ ಮಾಡುತ್ತಿರುವ ಪಾಲಕರ ಮಾತಿಗೆ ಮಕ್ಕಳೂ ಕಿವಿಯಾಗಿದ್ದಾರೆ. ಕಲ್ಲೇಟು ತಿಂದು ನೋವು ಪಡುತ್ತಿರುವ ಪಾಲಕರ ಅಳಲನ್ನು ಮನೆಯ ಮಕ್ಕಳೂ ಕೇಳಿಸಿಕೊಂಡಿದ್ದಾರೆ. ಸಹಜ ಸ್ಥಿತಿಗೆ ಮರಳಲು ಈಗ ಮಕ್ಕಳು ಪ್ರಯತ್ನಿಸುತ್ತಿದ್ದಾರೆ.

    ಶಾಲೆ, ಬೀದಿಗಳಲ್ಲಿ ಆಟ:
    ಮತಗಟ್ಟೆ ಧ್ವಂಸಗೊಂಡು ಉದ್ವಿಘ್ನ ವಾತಾವರಣ ನಿರ್ಮಾಣಗೊಂಡಿದ್ದ ಸರ್ಕಾರಿ ಶಾಲೆ ಆವರಣದಲ್ಲಿ ಇಂದು ಚಿಣ್ಣರ ಚಿಲಿಪಿಲಿ ಕೇಳಿಸುತ್ತಿದೆ. ಇಂಡಿಗನತ್ತ ಗ್ರಾಮದ ಮಕ್ಕಳು ಶಾಲೆ ಆವರಣದಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಮತಗಟ್ಟೆ ಸ್ಥಾಪನೆ ಮಾಡಿದ್ದ ಶಾಲಾ ಕೊಠಡಿಯ ಬಾಗಿಲಿಗೆ ಗಲಾಟೆಯಲ್ಲಿ ಬೆಂಕಿ ಹಚ್ಚಲಾಗಿತ್ತು. ಅರ್ಧ ಬೆಂದ ಬಾಗಿಲಿನಲ್ಲಿ ಮಸಿ ಹಾಗೆಯೇ ಇದೆ. ಈ ಕೊಠಡಿಯ ಆವರಣದಲ್ಲೇ ಮಕ್ಕಳು ಆಟವಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಮತಗಟ್ಟೆ ಧ್ವಂಸ ಪ್ರಕರಣದ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ. ಬೇರೆಯವರು ಕೇಳಿದರೂ ಅದರ ಬಗ್ಗೆ ಮಾತನಾಡುವುದಿಲ್ಲ.
    ಮೆಂದಾರೆಯ ಬೀದಿಗಳಲ್ಲಿ ಮಕ್ಕಳು ಆಟ, ಓಡಾಟ ನಡೆದಿದೆ. ಗಲಭೆಯಿಂದ ನೀರವ ಮೌನ ಆವರಿಸಿರುವ ಕಾಲನಿಯಲ್ಲಿ ಮಕ್ಕಳದ್ದೇ ಸದ್ದು, ಗದ್ದಲ. ಹಿರಿಯರ ಗುಂಪು ಒಂದೆಡೆ ಸೇರಿ ಮಾತನಾಡಿಕೊಳ್ಳುವಾಗ ಅಲ್ಲಿ ನಿಂತು ನಿಶ್ಯಬ್ಧವಾಗುತ್ತಿವೆ. ಗ್ರಾಮಕ್ಕೆ ಯಾರಾದರೂ ಬಂದರೆ ಅವರನ್ನು ನೋಡುತ್ತಾ, ಅವರ ಹಿಂದೆಯೇ ಹೋಗಿ ಏನು ಮಾಡುತ್ತಾರೆ, ಏನು ಕೇಳುತ್ತಾರೆ ಎಂದು ಕುತೂಹಲದಿಂದ ಗಮನಿಸುತ್ತಿವೆ. ಶಾಲೆ ಆರಂಭಗೊಂಡ ಬಳಿಕ ಈ ಮಕ್ಕಳು ಇಂಡಿಗನತ್ತಗೆ ಹೋಗಬೇಕಿರುವ ಕುರಿತು ಪಾಲಕರು ಚರ್ಚೆ ಮಾಡುವಾಗ ಮಕ್ಕಳ ಮುಖಭಾವ ಗಂಭೀರವಾಗುತ್ತಿದೆ.

    ಶಾಲೆಗೆ ಕಳುಹಿಸಲ್ವಂತೆ:
    ಒಂದು ಕಿ.ಮೀ ಅಂತರದಲ್ಲಿರುವ ಇಂಡಿಗನತ್ತ ಗ್ರಾಮದ ಸರ್ಕಾರಿ ಕಿರಿಯ ಪಾಥಮಿಕ ಶಾಲೆಗೆ ಮೆಂದಾರೆ ಗಿರಿಜನರ ಮಕ್ಕಳು ನಡೆದುಕೊಂಡೇ ತೆರಳಿ ಈವರೆಗೂ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಸ್ತುತ ಈ ಗ್ರಾಮದಿಂದ 2ರಿಂದ 5ನೇ ತರಗತಿಯವರೆಗೆ 10 ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಿದ್ದಾರೆ. ಆದರೆ ಮತಗಟ್ಟೆ ಧ್ವಂಸ ಪ್ರಕರಣದಿಂದಾಗಿ ಗಿರಿಜನರು ಭಯ ಭೀತರಾಗಿದ್ದು, ಶಾಲೆ ಆರಂಭವಾದರೆ ಅಲ್ಲಿಗೆ ಮಕ್ಕಳನ್ನು ಕಳುಹಿಸುವುದಿಲ್ಲ ಎನ್ನುತ್ತಿದ್ದಾರೆ.
    ಸರ್ಕಾರ ಬರ ಪರಿಸ್ಥಿತಿಯ ಹಿನ್ನೆಲೆ ರಜಾ ಅವಧಿಯಲ್ಲೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ. ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ 62 ವಿದ್ಯಾರ್ಥಿಗಳಿದ್ದು, ಇದರಲ್ಲಿ ಇಂಡಿಗನತ್ತದ ಸುಮಾರು 30-40 ಮಕ್ಕಳು ಮಾತ್ರ ಶಾಲೆಗೆ ಬಂದು ಬಿಸಿಯೂಟ ಸೇವಿಸುತ್ತಿದ್ದಾರೆ. ಆದರೆ ಮೆಂದಾರೆ ಗ್ರಾಮದ ಪಾಲಕರು ಮಕ್ಕಳನ್ನು ಬಿಸಿಯೂಟಕ್ಕೂ ಶಾಲೆಗೆ ಕಳುಹಿಸುತ್ತಿಲ್ಲ.

    ಶಾಲೆಯಲ್ಲಿ ಒಟ್ಟು 62 ವಿದ್ಯಾರ್ಥಿಗಳಿದ್ದು, ಇದರಲ್ಲಿ 30-40 ಮಕ್ಕಳು ನಿತ್ಯ ಬಿಸಿಯೂಟಕ್ಕೆ ಆಗಮಿಸುತ್ತಿದ್ದಾರೆ. ಆದರೆ ಮೆಂದಾರೆ ಗ್ರಾಮದ ಮಕ್ಕಳು ಬರುತ್ತಿಲ್ಲ. ಸದ್ಯ ಶಾಲೆಯಲ್ಲಿ ಏನು ಸಮಸ್ಯೆ ಇಲ್ಲ.
    ರತ್ನಮ್ಮ
    ಬಿಸಿಯೂಟ ಸಹಾಯಕಿ, ಇಂಡಿಗನತ್ತ ಶಾಲೆ

    ಮೆಂದಾರೆ ಗ್ರಾಮಸ್ಥರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೂಡಲೇ ಶಿಕ್ಷಕರನ್ನು ಗ್ರಾಮಕ್ಕೆ ಕಳುಹಿಸಿ ವಾಸ್ತವ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲಾಗುವುದು. ಜತೆಗೆ ಶಾಲಾ ಆರಂಭದ ಹಿಂದಿನ ದಿನವೂ ಶಿಕ್ಷಕರನ್ನು ಗ್ರಾಮಕ್ಕೆ ಕಳುಹಿಸಲಾಗುವುದು. ಮಕ್ಕಳು ಶಾಲೆಗೆ ಆಗಮಿಸುತ್ತಾರೋ ಅಥವಾ ಇಲ್ಲವೋ ಎಂಬುದರ ಆಧಾರದ ಮೇಲೆ ಕ್ರಮವಹಿಸಲಾಗುವುದು.
    ಮಹೇಶ್
    ಬಿಇಒ ಹನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts