More

    ಪರಿಸರ ಭಾಷಣ ಆಚರಣೆಗೆ ಬರಲಿ

    ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿಕೆ

    ಕೊಳ್ಳೇಗಾಲ: ನೈಸರ್ಗಿಕವಾಗಿ ಕಷ್ಟ ಎದುರಾದಾಗ ಪರಿಸರ ಉಳಿಸುವ ಬಗ್ಗೆ ಮಾತನಾಡುವುದರ ಬದಲು ಅದನ್ನು ಆಚರಣೆಗೆ ತರುವ ಕೆಲಸವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
    ತಾಲೂಕಿನ ಚಿಲಕವಾಡಿ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿಯೇ ಚಾಮರಾಜನಗರ ಜಿಲ್ಲೆ ಕರೊನಾ ಮುಕ್ತವಾಗಿ ಉಳಿದುಕೊಂಡಿರುವುದರಿಂದ ಕೇಂದ್ರದ ಆರೋಗ್ಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ತನ್ನಾದಿಯಾಗಿ ಜಿಲ್ಲಾಡಳಿತಕ್ಕೆ ಸಂತೋಷವಾಗಿದೆ ಎಂದರು.
    ಕೊಡಗಲ್ಲಿ ಭೂ ಕುಸಿತವಾದಾಗ, ಇನ್ನೆಲ್ಲೊ ಪ್ರವಾಹವಾದಾಗ, ಹೆಚ್ಚು ಮಳೆ ಬಂದಾಗ, ಬರಬೇಕಾದ ಮಳೆ ಬಾರದಿದ್ದಾಗ ನಾವು ಪರಿಸರವನ್ನು ಜ್ಞಾಪಿಸಿಕೊಳ್ಳುತ್ತೇವೆ. ಆದರೆ ಮುಂಚೆಯಿಂದಲೂ ಪಂಚ ಮಹಾಭೂತವನ್ನು ಗೌರವಿಸಿ ಆಧಾರಿಸುವ ಸಂಸ್ಕೃತಿ ನಮ್ಮ ದೇಶದ್ದಾಗಿದೆ ಎಂದು ಹೇಳಿದರು.
    ಪರಿಸರ ಬಗೆಗಿನ ಪ್ರಜ್ಞೆ ಎಲ್ಲರಲ್ಲೂ ಹಿಂದಿನಿಂದಲೂ ಇದೆ. ಆದರೆ ಕ್ರಮೇಣ ಪರಿಸರ ನಮ್ಮ ಭೋಗಕ್ಕೆ ಇರುವುದು ಎಂಬ ಅಹಂಕಾರ ನಮ್ಮಲ್ಲಿ ಮೂಡಿದ ಹಿನ್ನೆಲೆಯಲ್ಲಿ ಪರಿಸರವನ್ನು ನಾವು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ. ಇದರ ಪರಿಣಾಮವನ್ನು ಬೇರೆ ರೀತಿಯಲ್ಲಿ ನಾವು ನೋಡುತ್ತಿದ್ದು, ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಪರಿಸರವನ್ನು ಕಾಪಾಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಸಲಹೆ ನೀಡಿದರು.
    ಶಾಸಕ ಆರ್.ನರೇಂದ್ರ ಮಾತನಾಡಿ, ಕರೊನಾ ವೈರಾಣು ಜನತೆಗೆ ಪಾಠ ಕಲಿಸಿದೆ. ಲಾಕ್‌ಡೌನ್‌ನಿಂದಾಗಿ ಕೈಗಾರಿಕಾ ಕ್ಷೇತ್ರ ಸ್ಥಗಿತಗೊಂಡಿದ್ದು, ಜಲ, ಶಬ್ದ ಹಾಗೂ ವಾಯುಮಾಲಿನ್ಯ ಹತೋಟಿಗೆ ಬಂದಿದೆ. ಪರಿಸರವನ್ನು ಉಳಿಸುವುದು ನಮ್ಮ ಕೈಯಲ್ಲಿದ್ದು, ನಾವೆಲ್ಲರೂ ಪರಿಸರ ಉಳಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಶಾಸಕ ಎನ್.ಮಹೇಶ್ ಮಾತನಾಡಿ, ತಾಲೂಕಿನ ಉತ್ತಂಬಳ್ಳಿಯಿಂದ ಟಗರಪುರ ಗ್ರಾಮದವರೆಗೆ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡಲಾಗಿದೆ. ಇವುಗಳ ಜವಾಬ್ದಾರಿಯನ್ನು ಆಯಾ ಭಾಗದ ಪಿಡಿಒ ಹಾಗೂ ಚುನಾಯಿತ ಜನಪ್ರತಿನಿಧಿಗಳು ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್, ಜಿ.ಪಂ.ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಎಫ್‌ಒ ಏಡುಕೊಂಡಲು, ತಾ.ಪಂ.ಉಪಾಧ್ಯಕ್ಷೆ ಲತಾ ರಾಜಣ್ಣ ಉಪಸ್ಥಿತರಿದ್ದರು.
    ರಸ್ತೆ ಬದಿಯಲ್ಲಿ 1,100 ಸಸಿ: ವಿಶ್ವ ಪರಿಸರ ದಿನದ ಅಂಗವಾಗಿ ಅರಣ್ಯ ಇಲಾಖೆಯಿಂದ ತಾಲೂಕಿನ ಉತ್ತಂಬಳ್ಳಿ ಕ್ರಾಸ್‌ನಿಂದ ಟಗರಪುರ ಗ್ರಾಮದವರೆಗಿನ ರಾಷ್ಟ್ರೀಯ ಹೆದ್ದಾರಿ 212ರ ಎರಡೂ ಬದಿಯಲ್ಲಿ ತಾರೆ, ಹೊಳೆಮತ್ತಿ, ಬುಗುರಿ, ನೆರಳೆ, ಶಿವುನಿ, ಹರಳಿ, ಮಹಾಗನಿ ಎಂಬ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು.
    ಬಫರ್ ವಲಯ ವ್ಯಾಪ್ತಿಯ ಆರ್‌ಎಫ್‌ಒ ಪ್ರವೀಣ್ ರಾಮಪ್ಪ ಚಲವಾದಿ ನೇತೃತ್ವದಲ್ಲಿ ಸಸಿ ನೆಡುವ ಕೆಲಸ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರು ಟಗರಪುರ ಸರ್ಕಾರಿ ಶಾಲಾ ಆವರಣದಲ್ಲಿ ಸಸಿ ನೆಟ್ಟು ನೀರೆರೆದು ವಿಶ್ವರಿಸರ ದಿನ ಆಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts