More

    ಡಿ.ಕೆ.ಶಿವಕುಮಾರ್​ ಎದುರು ಸವಾಲಿನ ಹಾದಿ

    | ರಾಘವ ಶರ್ಮ ನಿಡ್ಲೆ ನವದೆಹಲಿ

    ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳುಗಳಷ್ಟೇ ಬಾಕಿ ಯಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಸಮರ ತಾರಕಕ್ಕೇರು ತ್ತಿರುವ ಸಂದರ್ಭದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಜಾರಿ ನಿರ್ದೇಶನಾಲಯದ ಚಾರ್ಜ್​ಶೀಟ್ ಬಿಸಿ ತಟ್ಟಿದೆ.

    ಶಿವಕುಮಾರ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆಗೆ ಜಾರಿ ನಿರ್ದೇಶಾನಲಯ ಇಷ್ಟೊಂದು ಸಮಯ ತೆಗೆದುಕೊಂಡಿದ್ದು ಏಕೆ ಎಂಬುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದ್ದರೂ, ಡಿಕೆಶಿ ರಾಜ್ಯ ಕಾಂಗ್ರೆಸ್​ನ ಭ್ರಷ್ಟಾಧ್ಯಕ್ಷ ಎಂದು ಟೀಕೆ ಮಾಡುತ್ತಿದ್ದ ಬಿಜೆಪಿ ನಾಯಕರಿಗೆ ಇದು ಮತ್ತೊಂದು ಬ್ರಹ್ಮಾಸ್ತ್ರವಾಗಿ ಪರಿಣಮಿಸಲಿದೆ.

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್​ಎ) ವಿವಿಧ ಸೆಕ್ಷನ್​ಗಳಡಿ ಶಿವಕುಮಾರ್ ವಿರುದ್ಧ ದೂರು ದಾಖಲಿಸಿ ಈಗಾಗಲೆ ಸಮಗ್ರ ತನಿಖೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಚಾರ್ಜ್​ಶೀಟ್ ಮೇಲೆ ಕೆಳ ನ್ಯಾಯಾಲಯದಲ್ಲಿ ವಾದ-ಪ್ರತಿವಾದದ ವಿಚಾರಣೆ ಆರಂಭಗೊಳ್ಳಲಿವೆ. ಹೀಗಾಗಿ, ಚುನಾವಣಾ ವರ್ಷದಲ್ಲಿ ತಮ್ಮ ವಿರುದ್ಧದ ಕೇಸು ನಿಭಾಯಿಸಲು ಆಗಾಗ್ಗೆ ಶಿವಕುಮಾರ್ ದೆಹಲಿಗೆ ಹೋಗಿ-ಬರಬೇಕಾದ ಅನಿವಾರ್ಯ ಸ್ಥಿತಿ ನಿರ್ವಣವಾದರೂ ಅಚ್ಚರಿ ಇಲ್ಲ. ಸದ್ಯ ಡಿಕೆಶಿ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ನಿಂದ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಚಾರ್ಜ್​ಶೀಟ್ ಸಲ್ಲಿಕೆ ಹಿನ್ನೆಲೆಯಲ್ಲಿ ಸಮಗ್ರ ದಾಖಲೆಗಳನ್ನು ಮುಂದಿಟ್ಟುಕೊಂಡೇ ಇಡಿ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಲಿದ್ದಾರೆ ಎಂದು ವಕೀಲರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಶಿವಕುಮಾರ್ ಸುಮಾರು 800 ಕೋಟಿ ರೂ. ಗಿಂತಲೂ ಹೆಚ್ಚು ಮೌಲ್ಯದ ಬೇನಾಮಿ ಆಸ್ತಿ ಮಾಡಿದ್ದಾರೆ. ಅವರ ಕುಟುಂಬದ ಸದಸ್ಯರ ಹೆಸರಲ್ಲಿ ಬ್ಯಾಂಕುಗಳಲ್ಲಿ 200 ಕೋಟಿ ರೂ. ಠೇವಣಿ ರೂಪದಲ್ಲಿ ಕಂಡುಬಂದಿದೆ. 20ಕ್ಕೂ ಅಧಿಕ ಬ್ಯಾಂಕ್​ಗಳಲ್ಲಿ 317 ಖಾತೆಗಳನ್ನು ಇಡಿ ತನಿಖಾಧಿಕಾರಿಗಳು ಗುರುತಿಸಿದ್ದರು ಎಂದು ಇಡಿ ಮೂಲಗಳು ಮಾಹಿತಿ ಹಂಚಿಕೊಂಡಿವೆ. ನ್ಯಾಯಾಲಯ ವಿಚಾರಣೆ ಸಂದರ್ಭದಲ್ಲೂ ಈ ಅಂಶಗಳನ್ನು ಇಡಿ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು. ಶಿವಕುಮಾರ್ ಹೆಸರಲ್ಲಿ 24, ತಮ್ಮ ಹಾಗೂ ಸಂಸದ ಡಿ.ಕೆ. ಸುರೇಶ್ ಹೆಸರಲ್ಲಿ 27, ತಾಯಿ ಹೆಸರಲ್ಲಿ 38 ಆಸ್ತಿ ಸೇರಿ ಕುಟುಂಬಸ್ಥರ ಬಳಿ ಸುಮಾರು 300ಕ್ಕೂ ಅಧಿಕ ಸ್ಥಿರಾಸ್ತಿಗಳಿವೆ. ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಹಾಗೂ ಸಂಪಾದನೆಗೆ ಈ ಖಾತೆಗಳನ್ನು ಬಳಸಿಕೊಂಡಿರುವ ಬಗ್ಗೆ ನಮ್ಮ ಬಳಿ ಸಾಕ್ಷ್ಯಗಳಿವೆ ಎಂದು ಇಡಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

    ಕರ್ನಾಟಕದಲ್ಲಿ ಸದ್ಯ ವಿವಿಧ ನೇಮಕಾತಿಗಳಲ್ಲಿ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬಂದಿರುವ ಜತೆಗೆ ಬಿಜೆಪಿ ನಾಯಕರ ಮೇಲೆ ಶೇ.40 ಕಮಿಷನ್ ಆರೋಪವನ್ನೂ ಕಾಂಗ್ರೆಸ್ ವಿರಾಟ್ ಸ್ವರೂಪದಲ್ಲಿ ಜನರ ಮುಂದಿಡುತ್ತಿದೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ನಾಯಕರು ಕೂಡ ಚಿಂತಿತರಾಗಿದ್ದಾರೆ. ಹೀಗಾಗಿ, ಈ ಕಳಂಕ ಮರೆ ಮಾಚಲು ಬಿಜೆಪಿ ನಾಯಕರು ಡಿಕೆಶಿ ವಿರುದ್ಧ ಭ್ರಷ್ಟಾಚಾರ ಅಸ್ತ್ರ ಪ್ರಯೋಗಿಸಿ ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸಲು ಯತ್ನಿಸುವುದು ಗ್ಯಾರಂಟಿ.

    ಸ್ವಯಂಪ್ರೇರಿತ ವೇಶ್ಯಾವೃತ್ತಿ ಕಾನೂನುಬದ್ಧ ಎಂದ ಸುಪ್ರೀಂಕೋರ್ಟ್; ಪೊಲೀಸರು ಕೇಸ್​ ದಾಖಲಿಸುವಂತಿಲ್ಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts