More

    ಕಾರ್ಮಿಕರ ವಲಸೆ ತಡೆ ಸವಾಲು

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಕಳೆದ ಲಾಕ್‌ಡೌನ್ ಸಂದರ್ಭ ನೂರಾರು ಕಿ.ಮೀ ನಡೆದು, ಸಿಕ್ಕಿದ ವಾಹನ ಹತ್ತಿ ಊರು ಸೇರಿದ್ದ ವಲಸೆ ಕಾರ್ಮಿಕರ ಪೈಕಿ ಶೇ.35 ಜನರು ಮಾತ್ರ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಕೇಂದ್ರಗಳಿಗೆ ವಾಪಸಾಗಿದ್ದಾರೆ. ಪ್ರಸ್ತುತ ಕರಾವಳಿಯಲ್ಲಿ ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿರುವ ಕಾರ್ಮಿಕರನ್ನು ಉಳಿಸಿಕೊಳ್ಳುವ ಸವಾಲು ಜಿಲ್ಲಾಡಳಿತದ ಮುಂದಿದೆ.

    ಎಂಆರ್‌ಪಿಎಲ್ ಪ್ರದೇಶದಲ್ಲಿ ಸುಮಾರು 5 ಸಾವಿರ, ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ 3,500 ವಲಸೆ ಕಾರ್ಮಿಕರು ವಿವಿಧ ಕಾಮಗಾರಿ, ಕೆಲಸಗಳಲ್ಲಿ ತೊಡಗಿಕೊಂಡಿದ್ದು, ಸಾಮಾನ್ಯ ಉದ್ಯೋಗ ಭದ್ರತೆ ಇರುವ ಅವರು ಸದ್ಯದ ಪರಿಸ್ಥಿತಿಯಲ್ಲಿ ವಲಸೆ ಹೋಗುವ ಸಾಧ್ಯತೆ ಕಡಿಮೆ. ಆದರೆ ಕರಾವಳಿಯಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುವ ಇತರ ನಿರ್ಮಾಣ ಕಾಮಗಾರಿಗಳಲ್ಲಿ ಬಹುಪಾಲು ದುಡಿಯುವ ವಲಸೆ ಕಾರ್ಮಿಕರು ಪ್ರತಿಕೂಲ ಪರಿಸ್ಥಿತಿಯಲ್ಲಿ ಹೆಚ್ಚು ಸಮಯ ಇಲ್ಲೇ ನಿಲ್ಲುವುದು ಕಷ್ಟ.

    ಸೌಲಭ್ಯಕ್ಕೆ ಸೂಚನೆ: ವಿಷಯದ ಗಂಭೀರತೆ ಅರಿತ ಜಿಲ್ಲಾಧಿಕಾರಿ ಕ್ರೆಡೈ, ಕೆನರಾ ಚೇಂಬರ್ ಆಫ್ ಕಾಮರ್ಸ್, ಸಣ್ಣ ಕೈಗಾರಿಕೆ ಸಂಘ ಸಹಿತ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಭೆ ಕರೆದು ವಲಸೆ ಕಾರ್ಮಿಕರಿಗೆ ಸೂಕ್ತ ಆಶ್ರಯ, ಪೂರಕ ವ್ಯವಸ್ಥೆ ರೂಪಿಸುವಂತೆ ಸೂಚಿಸಿದ್ದಾರೆ. ವಲಸೆ ಕಾರ್ಮಿಕರು ತಾವು ದುಡಿಯುತ್ತಿರುವ ಪ್ರದೇಶಗಳಲ್ಲಿ ಕೋವಿಡ್ ನಿರೋಧಕ ಲಸಿಕೆಗೆ ವ್ಯವಸ್ಥೆ ಮಾಡುವ ಬಗ್ಗೆ ಕೂಡ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

    ಸಂಚಾರ ಸಮಸ್ಯೆ: ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಕೊಂಡಿರುವ ವಲಸೆ ಕಾರ್ಮಿಕರಿಗೆ ಲಾಕ್‌ಡೌನ್ ಅವಧಿಯಲ್ಲಿ ಸೂಕ್ತ ವ್ಯವಸ್ಥೆಯನ್ನು ಒದಗಿಸಲು ಜಿಲ್ಲಾಡಳಿತ ಮುಂದೆ ಬಂದಿರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಹೆಚ್ಚು ಸಮಸ್ಯೆಯಾಗದು. ಆದರೆ ಈ ಕಾರ್ಮಿಕರು ಕೆಲಸ ಮಾಡುವ, ವಾಸ್ತವ್ಯ ಸ್ಥಳ ಪ್ರತ್ಯೇಕವಾಗಿದೆ. ಇದರಿಂದ ಕಾರ್ಮಿಕರಿಗೆ ಸಂಚಾರ ಸಮಸ್ಯೆ ಎದುರಾಗಬಹುದು. ಈ ಬಗ್ಗೆ ಜಿಲ್ಲಾಡಳಿತ, ಗುತ್ತಿಗೆದಾರರು ಗಮನಿಸಬೇಕು ಎನ್ನುತ್ತಾರೆ ಬಿಎಂಎಸ್ ರಾಜ್ಯ ಮುಖಂಡ ವಿಶ್ವನಾಥ ಶೆಟ್ಟಿ.

    43 ಸಾವಿರ ಕಾರ್ಮಿಕರು ಮರಳಿ ಊರಿಗೆ: ಅಧಿಕೃತ ಅಂಕಿ ಅಂಶ ಪ್ರಕಾರ ಜಿಲ್ಲಾಡಳಿತದ ನೆರವು ಪಡೆದು ದಕ್ಷಿಣ ಕನ್ನಡದಿಂದ 30,428 ಮಂದಿ ವಲಸೆ ಕಾರ್ಮಿಕರು ರೈಲುಗಳಲ್ಲಿ ಹೊರ ರಾಜ್ಯಗಳಿಗೆ ಮತ್ತು 13 ಸಾವಿರ ಮಂದಿ ಬಸ್‌ಗಳಲ್ಲಿ ವಿವಿಧ ಜಿಲ್ಲೆಗಳಿಗೆ ಮರಳಿದ್ದಾರೆ. ಮತ್ತು ಇಷ್ಟೇ ಪ್ರಮಾಣದ ಅಥವಾ ಇದಕ್ಕಿಂತಲೂ ಅಧಿಕ ಮಂದಿ ಸ್ವಂತ ವ್ಯವಸ್ಥೆಗಳಲ್ಲೇ ತಮ್ಮ ಊರು ಸೇರಿದ್ದಾರೆ.(ಈ ಅಂಕಿ ಅಂಶ ಅಲಭ್ಯ). ಕರೊನಾ ಮೊದಲು ಸುಮಾರು 80 ಸಾವಿರ ಹೊರ ರಾಜ್ಯದ ಜನರು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಂದಾಜಿಸಲಾಗಿದೆ.

    ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ಥಾನ, ಒಡಿಶಾ, ಛತ್ತೀಸ್‌ಗಡ ರಾಜ್ಯಗಳ ಕಾರ್ಮಿಕರು ಮುಖ್ಯವಾಗಿ ಇಲ್ಲಿ ದುಡಿದು ಬದುಕು ಕಟ್ಟಿಕೊಂಡಿದ್ದರು. ಜನಜೀವನ ಬಹುತೇಕ ಪೂರ್ವ ಸ್ಥಿತಿಗೆ ಮರಳುವ ಹಾದಿಯಲ್ಲಿರುವ ಸಂದರ್ಭದಲ್ಲೂ ಕರಾವಳಿಯಲ್ಲಿ ಉದ್ಯೋಗ ಅವಕಾಶಗಳು ಸಹಜ ಸ್ಥಿತಿಗೆ ಮರಳಿರಲಿಲ್ಲ. ರಿಯಲ್ ಎಸ್ಟೇಟ್ ವ್ಯವಹಾರ ಬಹುಪಾಲು ನೆಲ ಕಚ್ಚಿದ್ದು, ಅನೇಕ ಕೈಗಾರಿಕೆಗಳು ಉತ್ಪಾದನೆ ಕಡಿಮೆಗೊಳಿಸಿದ್ದವು. ಮೂರು ಪಾಳಿಗಳಲ್ಲಿ ಕೆಲಸ ನಡೆಯುಸುತ್ತಿದ್ದ ಕಂಪನಿಗಳು ಎರಡು ಅಥವಾ ಒಂದು ಪಾಳಿಗೆ ಇಳಿಸಿದ್ದವು.

    ಕೋವಿಡ್ ನಿರ್ಬಂಧ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ಪೂರಕ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಹಾಗೂ ಅವರ ಆರೋಗ್ಯ ರಕ್ಷಣೆಯನ್ನು ಖಾತರಿಪಡಿಸುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಸಂಸ್ಥೆ ಹಾಗೂ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಕಾರ್ಮಿಕರಿಗೆ ಅವರು ದುಡಿಯುವ ಪ್ರದೇಶಗಳಲ್ಲಿಯೇ ಕೋವಿಡ್ ನಿರೋಧಕ ಲಸಿಕೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ.

    ವಿಲ್ಮಾ, ಕಾರ್ಮಿಕ ಅಧಿಕಾರಿ, ಮಂಗಳೂರು

    ವಲಸೆ ಕಾರ್ಮಿಕರ ಹಿತ ಕಾಯಲು ಸೂಕ್ತ ವ್ಯವಸ್ಥೆ ಕೈಗೊಳ್ಳಲು ಈಗಾಗಲೇ ದೊಡ್ಡ ಮಟ್ಟದ ಬಿಲ್ಡರ್‌ಗಳು, ಗುತ್ತಿಗೆದಾರರಿಗೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ. ಆದರೆ ಅಸಂಖ್ಯ ಕಾರ್ಮಿಕರು ಉಪ ಗುತ್ತಿಗೆದಾರರ ಕೈಕೆಳಗೆ ಕೆಲಸ ಮಾಡುತ್ತಿದ್ದಾರೆ. ಎಲ್ಲ ವಲಸೆ ಕಾರ್ಮಿಕರನ್ನು ಗುರುತಿಸಿ ಅವರು ಇರುವ ಕಡೆ ಲಾಕ್‌ಡೌನ್ ಅವಧಿಯಲ್ಲಿ ಆಹಾರ ಸಾಮಗ್ರಿ, ದಿನ ಬಳಕೆ ವಸ್ತುಗಳನ್ನು ಒದಗಿಸಲು ಸರ್ಕಾರ ವ್ಯವಸ್ಥೆ ಮಾಡಬೇಕು.

    ವಸಂತ ಆಚಾರಿ, ಅಧ್ಯಕ್ಷ, ಕಟ್ಟಡ ನಿರ್ಮಾಣ ನೌಕರರ ಸಂಘ(ಸಿಐಟಿಯು), ದ.ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts