More

    ನೀರಿನ ಸಮಸ್ಯೆಗೆ ಮುಕ್ತಿ ನೀಡಿ

    ಚಳ್ಳಕೆರೆ: ತಾಲೂಕಿನ ಕೆಲ ಗ್ರಾಮಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಮತ್ತು ಆರ್‌ಒ ಪ್ಲಾಂಟ್‌ಗಳ ರಿಪೇರಿ ಬಗ್ಗೆ ಕೂಡಲೇ ಕ್ರಮ ವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕ ಟಿ.ರಘುಮೂರ್ತಿ ಖಡಕ್ ಎಚ್ಚರಿಕೆ ನೀಡಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಡಿಯುವ ನೀರಿಗಾಗಿ ಟಾಸ್ಕ್‌ಫೋರ್ಸ್ ಯೋಜನೆಗೆ ಬಿಡುಗಡೆ ಆಗಲಿರುವ 1 ಕೋಟಿ ರೂ. ಅನುದಾನಕ್ಕೆ ಅಗತ್ಯ ಕ್ರಮ ಕೈಗೊಂಡು ಹಳ್ಳಿಗಳಲ್ಲಿನ ಸಮಸ್ಯೆ ಪರಿಹರಿಸಬೇಕು ಎಂದು ಸೂಚಿಸಿದರು.

    ಈಗಾಗಲೇ 2830 ಕೋಟಿ ರೂ. ವೆಚ್ಚದ ತುಂಗಾಭದ್ರ ಹಿನ್ನೀರು ಯೋಜನೆಯಡಿ 4 ಹೋಬಳಿಗಳಲ್ಲಿ 230 ಟ್ಯಾಂಕ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕೆ ಅಳವಡಿಸುತ್ತಿರುವ ಪೈಪ್‌ಲೈನ್ ಕಾಮಗಾರಿ ರಸ್ತೆಯಿಂದ ಆರು ಅಡಿ ದೂರದಲ್ಲಿ ನಿರ್ಮಾಣ ಮಾಡಲು ನಿಗಾ ವಹಿಸಬೇಕು ಎಂದು ಹೇಳಿದರು.

    ಕೋಡಿಹಳ್ಳಿ, ಚಿಕ್ಕಹಳ್ಳಿ ಗ್ರಾಮಗಳಿಗೆ ಟ್ಯಾಂಕರ್ ವ್ಯವಸ್ಥೆ ಮಾಡಿರುವ ಕುರಿತು ಇಂಜಿನಿಯರ್ ಕಿರಣ್ ಮಾಹಿತಿ ನೀಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ತಿಮ್ಮಾರೆಡ್ಡಿ, ಆರ್‌ಒ ಪ್ಲಾಂಟ್‌ಗಳ ಅಳವಡಿಕೆಯಲ್ಲಿ ಕಳಪೆ ಸಾಮಗ್ರಿ ಅಳವಡಿಸಲಾಗಿದೆ. ಇದರಿಂದ ಯಾವುದೇ ಇಲಾಖೆ ನಿರ್ವಹಣೆ ಮಾಡಿದರೂ, ಸಮಸ್ಯೆ ಬಗೆಹರಿಯುವುದಿಲ್ಲ ಎಂದು ದೂರಿದರು.

    ಕೃಷಿ ಇಲಾಖೆ ಅಧಿಕಾರಿ ಮೋಹನ್ ಕುಮಾರ್ ಮಾತನಾಡಿ, ತಳಕು ಮತ್ತು ನಾಯಕನಹಟ್ಟಿ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿರುವುದರಿಂದ ಬಿತ್ತನೆ ಕಾರ್ಯ ನಡೆಯುತ್ತಿದೆ. ತಾಲೂಕಿನ ರೈತರಿಗೆ 34 ಸಾವಿರ ಕ್ವಿಂಟಾಲ್ ಶೇಂಗಾ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

    ಕೃಷಿ ಇಲಾಖೆ ರೈತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸ್ಪ್ರಿಂಕ್ಲರ್, ಕೃಷಿ ಪರಿಕರಗಳ ವಿತರಣೆ ಸೇರಿ ಬೆಳೆ ವಿಮೆ ತಲುಪಿಸುವಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಶೇಂಗಾ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಟಿ.ಗಿರಿಯಪ್ಪ, ಗದ್ದಿಗೆ ತಿಪ್ಪೇಸ್ವಾಮಿ, ಜಿ.ವೀರೇಶ ದೂರಿದರು.

    ಸುವರ್ಣಮ್ಮ ಮಾತನಾಡಿ, ಹೊಲ ಉಳುಮೆ ಮಾಡದ ರೈತರಿಗೆ ಬೆಳೆ ವಿಮೆ ಬಂದಿದೆ. ಶೇಂಗಾ ಬಿತ್ತನೆ ಮಾಡಿ ಬೆಳೆ ವಿಮೆ ಕಟ್ಟಿರುವ ರೈತರಿಗೆ ಹಣ ಬಂದಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

    ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ಮಾತನಾಡಿ, ಬೆಳೆ ನಷ್ಟ ಅನುಭವಿಸಿದ್ದ 541 ಹೂವು ಬೆಳೆಗಾರರನ್ನು ಗುರುತಿಸಿದ್ದು, ಅದರಲ್ಲಿ 293 ಮಂದಿಗೆ ಹಣ ಜಮಾ ಮಾಡಲಾಗಿದೆ ಎಂದರು.

    ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷೆ ತಿಪ್ಪಮ್ಮ, ಸಾಮಾಜಿಕ ಸಮಿತಿ ಅಧ್ಯಕ್ಷ ಎಚ್. ಆಂಜನೇಯ, ಇಒ ಶ್ರೀಧರ್ ಬಾರಿಕರ್ ಇದ್ದರು.

    ಎಸ್ಸೆಸ್ಸೆಲ್ಸಿ ಪರೀಕ್ಷೆ: ಜೂ.25ರಿಂದ ಜುಲೈ 4ರ ವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಯಶಸ್ವಿಗೆ ಜನಪ್ರತಿನಿಧಿಗಳು ಮತ್ತು ಪಾಲಕರು ಸಹಕಾರ ಮಾಡಬೇಕು. 4588 ವಿದ್ಯಾರ್ಥಿಗಳಿಗೆ 18 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಬಿಇಒ ಕೆ.ಎಸ್.ಸುರೇಶ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts