More

    ಕುಡಿವ ನೀರಿನ ಸಮಸ್ಯೆ ಪರಿಹರಿಸಿ

    ಚಳ್ಳಕೆರೆ: ತಾಲೂಕಿನಲ್ಲಿ 60ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಕುರಿತು ದೂರುಗಳಿದ್ದು, ತಕ್ಷಣ ಪರಿಹಾರಕ್ಕೆ ತಹಸೀಲ್ದಾರ್, ಇಒ, ಪಿಡಿಒಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಸೂಚನೆ ನೀಡಿದರು.

    ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಲು ಅನುದಾನ ಕೊರತೆ ಇಲ್ಲ. ಸೂಕ್ತ ದಾಖಲೆ ಒದಗಿಸಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದರು.

    ಗದ್ದಿಗೆ ತಿಪ್ಪೇಸ್ವಾಮಿ ಮಾತನಾಡಿ, ತುಂಗಭದ್ರಾ ಹಿನ್ನೀರು ಯೋಜನೆಯಡಿ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಪಕ್ಕದಲ್ಲೇ ಪೈಪ್‌ಲೈನ್ ಹಾಕಲಾಗುತ್ತಿದೆ. ಕೆಲ ಕಾಂಕ್ರಿಟ್ ರಸ್ತೆಗಳನ್ನು ಅಗೆದು ಅಳವಡಿಸಲಾಗುತ್ತಿದೆ. ತಗ್ಗುಗಳನ್ನು ಸಮರ್ಪಕವಾಗಿ ಮುಚ್ಚಲಾಗುತ್ತಿಲ್ಲ. ಮುಂದಾಲೋಚನೆ ಇಲ್ಲದ ರೀತಿ ಕಾಮಗಾರಿ ಕೆಲಸ ನಡೆಯುತ್ತಿದೆ ಎಂದು ದೂರಿದರು.

    ಪೈಪ್‌ಲೈನ್ ಅಳವಡಿಕೆಗೆ ರಸ್ತೆ ಅಗೆದ ಜಾಗವನ್ನು ಸಮಾನವಾಗಿ ಮುಚ್ಚಬೇಕು. ರಸ್ತೆ ಬದಿಯಲ್ಲಿ ಮಣ್ಣು ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಶಾಸಕರು, ಇಂಜಿನಿಯರ್ ತಿಪ್ಪೇಸ್ವಾಮಿ ಅವರಿಗೆ ತಾಕೀತು ಮಾಡಿದರು.

    ಕೃಷಿ ಇಲಾಖೆಯಿಂದ ಎಸ್ಸಿ-ಎಸ್ಟಿ ರೈತರಿಗೆ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಸ್ಪ್ರಿಂಕ್ಲರ್ ಸೆಟ್ ಸೇರಿ ಇತರೆ ಯಾವುದೇ ಸೌಲಭ್ಯ ಕೇಳಿದರೂ ಬಂದಿಲ್ಲ ಎಂದು ಜವಾಬು ಹೇಳಲಾಗುತ್ತಿದೆ ಎಂದು ಕೆಲ ಸದಸ್ಯರು ಆರೋಪ ಮಾಡಿದರು.

    ಕೃಷಿ ಅಧಿಕಾರಿ ಮೋಹನ್ ಕುಮಾರ್, ಎಸ್ಸಿ-ಎಸ್ಟಿ ಸಬ್ಸಿಡಿ ಸೌಲಭ್ಯಕ್ಕೆ ಒಂದೂವರೆ ಕೋಟಿ ರೂ.ಗೆ ಬೇಡಿಕೆ ಸಲ್ಲಿಸಲಾಗಿತ್ತು. ಇದರಲ್ಲಿ ಕೇವಲ 16 ಲಕ್ಷ ರೂ. ಮಾತ್ರ ಬಂದಿದೆ ಎಂದರು.

    ಮೀಸಲು ಕ್ಷೇತ್ರದಲ್ಲಿ ಎಸ್ಸಿ-ಎಸ್ಟಿ ರೈತರಿಗೆ ಸೌಲಭ್ಯಗಳು ಸಿಗಬೇಕು. ಕೂಡಲೇ ಸರ್ಕಾರಕ್ಕೆ ಮತ್ತೊಂದು ಬೇಡಿಕೆ ಪಟ್ಟಿ ಸಲ್ಲಿಸಬೇಕು. ಇದರ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸುವುದಾಗಿ ಶಾಸಕರು ಹೇಳಿದರು.

    ತಾಲೂಕಿನ ಬುಡ್ನಹಟ್ಟಿ ಗ್ರಾಮದ ಸರ್ಕಾರಿ ಶಾಲೆಗೆ ಹೆಸರಿಗೆ ಮಾತ್ರ 8 ಎಕರೆ ಜಮೀನು ನಿಯೋಜನೆ ಮಾಡಲಾಗಿದೆ. ಒತ್ತುವರಿಯಾಗಿ ಕೇವಲ 3 ಎಕರೆ ಉಳಿದುಕೊಂಡಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಣ್ಣಸೂರಯ್ಯ ಆಗ್ರಹಿಸಿದರು.

    ಅಧ್ಯಕ್ಷೆ ವಿಜಯಲಕ್ಷ್ಮೀ, ಉಪಾಧ್ಯಕ್ಷೆ ತಿಪ್ಪಮ್ಮ, ಸದಸ್ಯರಾದ ಟಿ.ಗಿರಿಯಪ್ಪ, ತಿಮ್ಮಾರೆಡ್ಡಿ, ತಿಪ್ಪೇಸ್ವಾಮಿ, ಎಚ್.ಸಮರ್ಥರಾಯ, ಶ್ರೀನಿವಾಸ, ಗಂಗಿಬಾಯಿ, ಶಿವಮ್ಮ, ತಿಪ್ಪಕ್ಕ, ತಿಮ್ಮಾರೆಡ್ಡಿ ಇತರರಿದ್ದರು.

    ದಿನಚರಿ ಪುಸ್ತಕದಲ್ಲಿ ಸಮಸ್ಯೆ: ತಾಪಂ ಹೊರ ತಂದಿರುವ ಹೊಸ ವರ್ಷದ ದಿನಚರಿ ಪುಸ್ತಕದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನು ಶಾಸಕರ ಹೆಸರ ಕೆಳಗೆ ಹಾಕಲಾಗಿದೆ ಎಂದು ಸದಸ್ಯ ರಾಮರೆಡ್ಡಿ ಸೇರಿ ಕೆಲ ಬಿಜೆಪಿ ಸದಸ್ಯರು ಇಒ ಅವರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಡೈರಿಗಳನ್ನು ಬದಲಾಯಿಸಲಾಗುವುದು ಎಂದು ಇಒ ಶ್ರೀಧರ್ ಬಾರಿಕರ್ ತಿಳಿಸಿ, ವಿವಾದಕ್ಕೆ ತೆರೆ ಎಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts