More

    ಗೆದ್ದರೂ ಅಧಿಕಾರ ಭಾಗ್ಯ ಇಲ್ಲ

    ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ನಗರಸಭೆ ಚುನಾವಣೆ ನಡೆದು ಎರಡು ವರ್ಷ ಸಮೀಪಿಸುತ್ತ ಬಂದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲು ಗೊಂದಲದಿಂದ ಚುನಾಯಿತ ಸದಸ್ಯರ ಪಾಡು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

    ನಗರಸಭೆಗೆ ಕಳೆದ ವರ್ಷ ಸೆ.5 ರಂದು ಪ್ರಕಟವಾದ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್‌ಟಿ ಮಹಿಳೆಗೆ ಎಂದಿತ್ತು. ನಂತರ ಸೆ.6 ರಂದು ಪ್ರಕಟವಾದ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗೆ ಅಧ್ಯಕ್ಷ ಸ್ಥಾನ, ಪರಿಶಿಷ್ಟ ಪಂಗಡ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಎಂದಾಯಿತು. ಮತ್ತೆ ಕಳೆದ ತಿಂಗಳು ಏ.11 ರಂದು ಬದಲಾದ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗೆ ಅಧ್ಯಕ್ಷ ಸ್ಥಾನ, ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿತ್ತು.

    ಹೀಗೆ ಒಂದಲ್ಲ ಎರಡಲ್ಲ ಮೂರು ಬಾರಿ ಮೀಸಲಾತಿ ಪಟ್ಟಿ ಬದಲಾವಣೆ ಕಾರಣ ಈ ಪ್ರಕರಣ ಈಗ ಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರಿಗೆ ಅಧಿಕಾರ ಯಾವಾಗ ಸಿಗುತ್ತದೋ ಎಂಬ ಪ್ರಶ್ನೆ ಮೂಡಿದೆ.

    70 ಸಾವಿರ ಜನಸಂಖ್ಯೆ ಇರುವ 31 ವಾರ್ಡ್‌ಗಳ ನಗರಸಭೆಗೆ ನಡೆದ ಚುನಾವಣೆಯಲ್ಲಿ ಶೇ.50 ರಷ್ಟು ಮೀಸಲಾತಿಯಡಿ 15 ಮಹಿಳಾ ಸದಸ್ಯರು ಮೊದಲ ಬಾರಿಗೆ ಆಯ್ಕೆಯಾಗಿರುವುದು ವಿಶೇಷ. ಉಳಿದ 16 ಪುರುಷ ಸದಸ್ಯರಲ್ಲಿ 9 ನೇ ವಾರ್ಡ್ ಆಸರ್ ಮೊಹಲ್ಲಾದಿಂದ ವಿ.ವೈ.ಪ್ರಮೋದ್, 26 ನೇ ವಾರ್ಡ್‌ನಿಂದ ಸಿ. ಶ್ರೀನಿವಾಸ್, 27ನೇ ವಾರ್ಡ್‌ನಿಂದ ಬಿ.ಟಿ.ರಮೇಶ್‌ಗೌಡ ಮರು ಆಯ್ಕೆ ಆಗಿರುವುದನ್ನು ಬಿಟ್ಟರೆ, ಬಹುತೇಕರು ಹೊಸಬರೇ ಆಗಿದ್ದಾರೆ.

    2018-19ರ ಕ್ರಿಯಾ ಯೋಜನೆ ತಯಾರಿಕೆಯಲ್ಲಿ ಅಧಿಕಾರ ಸಿಗದೆ ವಾರ್ಡ್‌ಗಳ ನಿಗದಿತ ಕೆಲಸ ನಿರ್ವಹಣೆಯಲ್ಲಿ ಸದಸ್ಯರು ಉತ್ಸಾಹ ಕಳೆದುಕೊಂಡಂತೆ ಕಾಣುತ್ತಿದೆ.

    30ನೇ ವಾರ್ಡ್ ಸದಸ್ಯೆ ಪಾಲಮ್ಮ ಹೇಳಿಕೆ: ನನ್ನ ವಾರ್ಡ್‌ನಲ್ಲಿ 10 ಎಕರೆ ವ್ಯಾಪ್ತಿಯ ಸ್ಮಶಾನ ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕಿತ್ತು. ಚರಂಡಿ, ರಸ್ತೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಐದಾರು ಬೀದಿಗಳಿಗೆ ವಿದ್ಯುತ್ ಕಂಬಗಳ ಅಳವಡಿಕೆ ಮಾಡಿಸಿ ಬೆಳಕಿನ ವ್ಯವಸ್ಥೆ ಮಾಡಬೇಕಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ಗೊಂದಲದಿಂದ ವಾರ್ಡ್ ಜನತೆಗೆ ವಾಗ್ದಾನ ಮಾಡಿದಂತೆ ಅಭಿವೃದ್ಧಿ ಕೈಗೊಳ್ಳಲಾಗುತ್ತಿಲ್ಲ.

    24ನೇ ವಾರ್ಡ್ ಸದಸ್ಯೆ ಆರ್.ಮಂಜುಳಾ ಹೇಳಿಕೆ: ನನ್ನ ವಾರ್ಡ್‌ಗೆ ಒಳಪಡುವ ಜಗಜೀವನರಾಂ ಕಾಲನಿಯಲ್ಲಿ ಸ್ಲಂ ಬೋರ್ಡ್ ಕಾಮಗಾರಿ ಕುಂಠಿತವಾಗಿದೆ. ರೈಲ್ವೆ ಸ್ಟೇಷನ್ ಸಮೀಪ ಹರಿಯುತ್ತಿರುವ ದೊಡ್ಡ ಹಳ್ಳಕ್ಕೆ ರಿವಿಟ್‌ಮೆಂಟ್ ಕೈಗೊಳ್ಳಬೇಕಾಗಿತ್ತು. ಸ್ಮಶಾನ ಭೂಮಿಯಲ್ಲಿ ವಿದ್ಯುತ್ ಚಿತಾಗಾರ ಅಳವಡಿಸಿ ನೀರಿನ ವ್ಯವಸ್ಥೆ ಮಾಡಬೇಕಿತ್ತು. ಮೀಸಲಾತಿ ಗೊಂದಲದಿಂದ ನಗರಸಭೆ ಕಾರ್ಯ ಕಲಾಪವೂ ನಡೆಯುತ್ತಿಲ್ಲ. ಒಟ್ಟಾರೆ ಜನರ ವಿಶ್ವಾಸ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ.

    15ನೇ ವಾರ್ಡ್ ಸದಸ್ಯೆ ಸಿ.ಬಿ.ಜಯಲಕ್ಷ್ಮಿಹೇಳಿಕೆ: ಸದಸ್ಯರಿಗೆ ಇನ್ನೂ ಅಧಿಕಾರ ಇಲ್ಲವೆಂಬ ಕಾರಣಕ್ಕೆ ವಾರ್ಡ್‌ನಲ್ಲಿ 10 ಲಕ್ಷ ರೂ. ವೆಚ್ಚದ ಚರಂಡಿ ಕಾಮಗಾರಿ ಮಂಜೂರಾಗಿದ್ದರೂ ಅಧಿಕಾರಿಗಳು ಪ್ರಾರಂಭ ಮಾಡಿಲ್ಲ. ಇಲ್ಲಿನ ರಾಜಕಾಲುವೆ ದುರಸ್ತಿ ನಡೆಯುತ್ತಿಲ್ಲ. ಸ್ಲಂ ನಿವಾಸಿಗಳಿಗೆ ಕೊಟ್ಟ ಮಾತಿನಂತೆ ನಿವೇಶನ ಹಕ್ಕುಪತ್ರ ಕೊಡಲಾಗುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts