More

    ಎಸ್‌ಟಿ ಸೌಲಭ್ಯಕ್ಕೆ ಕಾಡುಗೊಲ್ಲರ ಪಟ್ಟು

    ಚಳ್ಳಕೆರೆ: ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಶೋಚನೀಯ ಪರಿಸ್ಥಿತಿಯಲ್ಲಿರುವ ಕಾಡುಗೊಲ್ಲ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲು ಕೊಡುವಂತೆ ಆಗ್ರಹಿಸಿ ಸಹಸ್ರಾರು ಸಂಖ್ಯೆಯಲ್ಲಿ ಸಮುದಾಯದವರು ಚಳ್ಳಕೆರೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

    ತಾಲೂಕು ಕಾಡುಗೊಲ್ಲರ ಸಂಘದ ನೇತೃತ್ವದಲ್ಲಿ ನಗರದ ಯಾದವ ವಿದ್ಯಾರ್ಥಿ ನಿಲಯದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ವಾಲ್ಮೀಕಿ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ನೆಹರು ವೃತ್ತಕ್ಕೆ ಆಗಮಿಸಿ ರಸ್ತೆತಡೆ ನಡೆಸಿದರು. ಬಳಿಕ ತಾಲೂಕು ಕಚೇರಿಗೆ ತೆರಳಿ, ತಹಸೀಲ್ದಾರ್ ಎನ್.ರಘುಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

    ಕುರಿ, ಮೇಕೆ ಮತ್ತು ಪಶುಪಾಲನಾ ಕಸುಬು ಮಾಡಿಕೊಂಡು ಹಟ್ಟಿಗಳಲ್ಲಿ ಜೀವನ ಮಾಡುತ್ತಿರುವ ಸಮುದಾಯಕ್ಕೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಶೌಚಗೃಹ, ವಸತಿ ಮತ್ತಿತರ ಮೂಲಸೌಕರ್ಯ, ಸೌಲಭ್ಯ ಪಡೆಯಬೇಕಾದರೆ ಸರ್ಕಾರಕ್ಕೆ ವಂತಿಕೆ ಕಟ್ಟಬೇಕಾಗಿದೆ. ಹಟ್ಟಿಗಳಲ್ಲಿ ಸಾಮಾಜಿಕ ಬದಲಾವಣೆ ಇಲ್ಲ. ಶಿಕ್ಷಣದ ಕೊರತೆ ಇದೆ. ಮೌಢ್ಯತೆ ಮತ್ತು ಕಂದಾಚಾರಗಳಿಂದ ಹೊರಬರಲು ಮೀಸಲು ಅನಿವಾರ್ಯವಾಗಿದೆ. ಸಂವಿಧಾನಬದ್ಧ ಹಕ್ಕು ಪ್ರಕಾರ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಮೀಸಲು ಕೇಳುತ್ತಿದ್ದೇವೆ ಎಂದು ಹಕ್ಕೋತ್ತಾಯ ಮಂಡಿಸಿದರು.

    ಈಗಾಗಲೇ ಕುಲಶಾಸ್ತ್ರ ಅಧ್ಯಯನದಿಂದ ಕಾಡುಗೊಲ್ಲ, ಹಟ್ಟಿಗೊಲ್ಲ, ಅಡವಿಗೊಲ್ಲರು ಬುಡಕಟ್ಟು ಸಂಸ್ಕೃತಿಯ ಪರಿಸ್ಥಿತಿಯಲ್ಲಿದೆ. ಆದ್ದರಿಂದ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಆದರೆ, ಆಡಳಿತ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಸಮುದಾಯದ ಸಂಸ್ಕೃತಿ, ಬುಡಕಟ್ಟು ಆಚರಣೆಗಳ ಉಳಿವಿಗಾಗಿ ಮತ್ತು ಮಕ್ಕಳ ಶಿಕ್ಷಣ ಪ್ರಗತಿಗಾಗಿ ಎಸ್‌ಟಿ ಮೀಸಲು ನೀಡಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಹಟ್ಟಿಗಳಿಗೆ ಕಳ್ಳೆ-ಬೇಲಿ ಹಾಕಿ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ರಾಜ್ಯದ 42 ತಾಲೂಕುಗಳಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಕಾಡುಗೊಲ್ಲ ಸಮುದಾಯ ರಾಜ್ಯದಲ್ಲಿ 35 ಲಕ್ಷ ಜನಸಂಖ್ಯೆ ಹೊಂದಿದೆ. ಕಳ್ಳೆ ಸಾಲಿನಲ್ಲಿ ಬದುಕುವ ಬದುಕಾಗಿದೆ. ಕುರಿ, ಮೇಕೆ ಕಟ್ಟಿಕೊಂಡು ಊರೂರು ಅಲೆಯುವ ಅಲೆಮಾರಿ ಬದುಕು ನಮ್ಮದು. ಮಳೆ-ಗಾಳಿಯಲ್ಲಿ ಬದುಕುವ ನಮಗೆ ಭದ್ರತೆ ಇಲ್ಲ. ಸರ್ಕಾರಗಳಿಂದಲೂ ಸಾಮಾಜಿಕ ಸೌಲಭ್ಯಗಳು ಸಿಗುತ್ತಿಲ್ಲ. ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಪಡೆಯಲು ಗೆಜೆಟ್ ಅನುಮೋದನೆ ಆಗಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಮಾಡಿಲ್ಲ. ನಾಮಕಾವಸ್ಥೆಗೆ ನಿಗಮ ಸ್ಥಾಪನೆ ಮಾಡಲಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ದೂರಿದರು.

    ಸಮುದಾಯದ ಆಚರಣೆಗಳ ಪ್ರದರ್ಶನ: ಪ್ರತಿಭಟನೆಯಲ್ಲಿ 3 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಕೆಲವರು ಕಂಬಳಿ ಹೊದ್ದು, ಇನ್ನೂ ಕೆಲವರು ಕುರಿಗಳನ್ನು ಹೆಗಲ ಮೇಲೆ ಹೊತ್ತು ಬಂದಿದ್ದರು. ಪ್ರತಿಭಟನೆ ಆರಂಭಕ್ಕೂ ಮುನ್ನ ಕಾಡುಗೊಲ್ಲ ಸಂಪ್ರದಾಯದಂತೆ ಗದ್ದಿಗೆ ಕಂಬಳಿ ಹಾಸಿ ಅಕ್ಕಿಯಿಂದ ಚಿತ್ತಾರ ಬಿಡಿಸಿ ವೀಳ್ಯದೆಲೆ ಶಾಸ್ತ್ರ ಮಾಡಿ, ಹಸಿಜಾಡಿ ಪೂಜೆ ನೆರವೇರಿಸಿ, ಬಳಿಕ ಒಳ್ಳಕ್ಕಿ ಶಾಸ್ತ್ರ ನೆರವೇರಿಸಲಾಯಿತು. ನಂತರ ಗೋಪೂಜೆ ನೆರವೇರಿಸಿ ಪ್ರತಿಭಟನಾ ಮೆರವಣಿಗೆ ಆರಂಭಿಸಲಾಯಿತು. ಕೋಲಾಟ, ತಮಟೆ ತಂಡಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಜುಂಜಪ್ಪ, ಎತ್ತಪ್ಪ ದೇವರ ಪದಗಳನ್ನು ಹಾಡಿ, ಶಕ್ತಿ ಪ್ರದರ್ಶನ ಮಾಡಲಾಯಿತು.

    ವಿಧಾನಸೌಧ ಮುತ್ತಿಗೆ ಶೀಘ್ರ: ಬೇಡಿಕೆಯನ್ನು ನಿರ್ಲಕ್ಷೃ ಮಾಡುತ್ತಿರುವ ಆಡಳಿತ ಸರ್ಕಾರಗಳಿಗೆ ಶಕ್ತಿ ಪ್ರದರ್ಶನ ತೋರಿಸಲು ವಿಧಾನಸೌಧ ಮುತ್ತಿಗೆ ಪ್ರತಿಭಟನೆ ಶೀಘ್ರ ಹಮ್ಮಿಕೊಳ್ಳಲಾಗುವುದು. ರಾಜ್ಯದಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಚಿತ್ರದುರ್ಗ, ತುಮಕೂರು, ದಾವಣಗೆರೆ, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬಳ್ಳಾರಿ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಕುರಿ, ಮೇಕೆಗಳೊಂದಿಗೆ ವಿಧಾನಸೌಧ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

    ವಿಧಾನ ಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ, ಜಿಲ್ಲಾಧ್ಯಕ್ಷ ಎಸ್. ರಾಜ್‌ಕುಮಾರ್, ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಪರಶುರಾಂಪುರ ರಂಗಸ್ವಾಮಿ, ಟಿ. ರವಿಕುಮಾರ್, ಶಾಂತಮ್ಮ, ಸಿ. ವೀರಭದ್ರಬಾಬು, ಪಿಲ್ಲಹಳ್ಳಿ ಚಿತ್ರಲಿಂಗಪ್ಪ, ಕಾಟಪ್ಪನಹಟ್ಟಿ ವೀರೇಶ್, ಜಿ.ಕೆ. ವೀರಣ್ಣ, ಪುರುಷೋತ್ತಮ್, ಬಿ.ತಿಪ್ಪೇಸ್ವಾಮಿ, ಬಿ. ಅಶೋಕ್, ನಿಸರ್ಗ ಗೋವಿಂದರಾಜು, ಎಸ್. ಈರಣ್ಣ, ಜಿ. ಶ್ರೀನಿವಾಸ, ಜಿ. ಮಂಜುನಾಥ, ಟಿ. ಆಂಜನೇಯ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts