More

    ಸೈನ್ಸ್ ಸಿಟಿಯಲ್ಲಿ ರಂಗೇರುತ್ತಿದೆ ರಾಜಕಾರಣ

    ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ವಿಧಾನಸಭಾ ಚುನಾವಣೆಗೆ ಮೂರು ತಿಂಗಳ ಮುನ್ನವೇ ವಿಜ್ಞಾನ ನಗರಿ ಚಳ್ಳಕೆರೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪ್ರಮುಖ ಪಕ್ಷಗಳು ಅಖಾಡಕ್ಕೆ ಧುಮುಕಿವೆ.

    ಶಾಸಕ ಟಿ.ರಘುಮೂರ್ತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗುವುದು ಖಚಿತವಾಗಿದೆ. ಟಿಕೆಟ್ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದವರಲ್ಲಿ ರಘುಮೂರ್ತಿ ಒಬ್ಬರೇ ಎಂಬುದು ವಿಶೇಷ. ಜೆಡಿಎಸ್ ಪಕ್ಷ ಕಳೆದ ಬಾರಿ ಸ್ಪರ್ಧಿಸಿದ್ದ ಎಂ.ರವೀಶ್‌ಕುಮಾರ್ ಅವರನ್ನೇ ಅಭ್ಯರ್ಥಿ ಎಂದು ಘೋಷಿಸಿದೆ. ಸದ್ಯಕ್ಕೆ ಕಾಂಗ್ರೆಸ್-ಜೆಡಿಎಸ್ ಹುರಿಯಾಳುಗಳ ಸ್ಪರ್ಧೆಯ ಬಗ್ಗೆ ಮಾತ್ರ ಸ್ಪಷ್ಟತೆ ಸಿಕ್ಕಿದೆ. ಆದರೆ, ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಾಲು ದೊಡ್ಡದಿದೆ. ಇಂಥಹವರಿಗೆ ಟಿಕೆಟ್ ಪಕ್ಕಾ ಎಂದು ಹೇಳುವ ಸ್ಥಿತಿ ಇಲ್ಲ. ಕೊನೇ ಗಳಿಗೆಯಲ್ಲಿ ಯಾರು ಬಿ ಫಾರಂ ತರುತ್ತಾರೆ ಎಂಬ ಕುತೂಹಲ ಇದೆ.ಸೈನ್ಸ್ ಸಿಟಿಯಲ್ಲಿ ರಂಗೇರುತ್ತಿದೆ ರಾಜಕಾರಣ

    2018ರಲ್ಲಿ ಕಾಂಗ್ರೆಸ್-ಬಿಜೆಪಿ- ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕೊನೇ ಗಳಿಗೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದು 72,874 ಮತ ಪಡೆದ ಕಾಂಗ್ರೆಸಿನ ರಘುಮೂರ್ತಿ ಗೆಲುವಿನ ನಗೆ ಬೀರಿದ್ದರು. ಜೆಡಿಎಸ್‌ನ ರವೀಶ್ ಕುಮಾರ್ 59,335 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ 33,471 ಮತ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಚುನಾವಣೆ ಅಂತಿಮ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಆಕ್ರಮಣಕಾರಿ ಆಗದೆ ಹೋಗಿದ್ದು, ಕಾಂಗ್ರೆಸ್‌ಗೆ ವರವಾಯಿತು.

    ಮತ್ತೊಮ್ಮೆ ತ್ರಿಕೋನ ಸ್ಪರ್ಧೆ: 2023ರ ಚುನಾವಣೆಯಲ್ಲೂ ಕೂಡ ಈ ಹಿಂದಿನ ಅಭ್ಯರ್ಥಿಗಳ ನಡುವೆ ಪೈಪೋಟಿ ನಿರೀಕ್ಷಿಸಿದ್ದು, ಇದಕ್ಕೆ ಪುಷ್ಟಿ ಎಂಬಂತೆ ಈಗಾಗಲೇ ಕೈ ಶಸಕ ರಘುಮೂರ್ತಿ, ಜೆಡಿಎಸ್‌ನ ರವೀಶ್‌ಕುಮಾರ್ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿಯ ಸ್ಪರ್ಧಾಳು ಕೆ.ಟಿ.ಕುಮಾರಸ್ವಾಮಿ ಈ ಬಾರಿಯೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಮೇಲ್ಮಟ್ಟದಲ್ಲಿ ಪ್ರಯತ್ನ ನಡೆದಿದೆ. ಒಂದು ವೇಳೆ ಟಿಕೆಟ್ ನಿರಾಕರಿಸಿದರೆ ಪಕ್ಷೇತರ ಆಗಿಯಾದರೂ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ. ಉಳಿದಂತೆ ಜಿ.ಪಿ.ಜಯಪಾಲಯ್ಯ, ನಿವೃತ್ತ ಅಧಿಕಾರಿ ಎಂ.ಎಸ್.ಜಯರಾಮ್, ಆರ್‌ಎಸ್‌ಎಸ್ ಸಂಘಟಕ ಬಾಳೆಕಾಯಿ ರಾಮದಾಸ್, ತುಮಕೂರಿನ ಆರ್.ಅನಿಲ್‌ಕುಮಾರ್ ಹಾಗೂ ತಾಲೂಕಿನಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಆಕಾಂಕ್ಷಿತರಾಗಿದ್ಧಾರೆ.

    ಮತದಾರರ ವಿವರ: 1,09,031 ಮಹಿಳೆಯರು, 1,08,384 ಪುರುಷರು ಮತ್ತು ಇತರೆ ವರ್ಗದ ಮೂವರು ಸೇರಿ 2,17,418 ಮತದಾರರಿದ್ದಾರೆ. 259 ಮತಗಟ್ಟೆಗಳಿವೆ. ಕಳೆದ ಅವಧಿಗಿಂತ ಈ ಬಾರಿ 10,947 ಮತದಾರರು ಮತ್ತು 8 ಮತಗಟ್ಟೆಗಳ ಸಂಖ್ಯೆ ಹೆಚ್ಚಳವಾಗಿದೆ.

    ಪಕ್ಷಗಳ ಲಾಭ-ನಷ್ಟ: ಸತತ ಎರಡು ಬಾರಿ ಶಾಸಕರಾಗಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಟಿ.ರಘುಮೂರ್ತಿ ಅಭಿವೃದ್ಧಿ ಆಧರಿಸಿ ಮತ ಯಾಚಿಸುತ್ತಿದ್ದಾರೆ. ಕಾಮಗಾರಿ ನೀಡುವ ವಿಷಯದಲ್ಲಿ ಪಕ್ಷದ ಮುಖಂಡರಿಗೆ ಮಣೆ ಹಾಕುತ್ತಿಲ್ಲ ಎಂಬ ಅಸಮಧಾನ ಅಲ್ಲಲ್ಲಿ ಇದೆ. ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಜೆಡಿಎಸ್ ಪಕ್ಷ ಇಲ್ಲಿ ಗೆಲುವಿಗೆ ಸಾಕಷ್ಟು ಬೆವರು ಹರಿಸಬೇಕಿದೆ. ರವೀಶ್ ಕುಮಾರ್ ಹಬ್ಬ, ಹರಿದಿನಗಳಿಗೆ ಬಂದು ಹೋಗುವ ಬದಲು ಜನರ ನಡುವೆ ಇರಬೇಕಿತ್ತು ಎಂಬ ಅಭಿಪ್ರಾಯವಿದೆ. ಸರ್ವಸಮ್ಮತ ಅಭ್ಯರ್ಥಿ ಘೋಷಿಸುವ ಗುರುತರ ಜವಾಬ್ದಾರಿ ಬಿಜೆಪಿ ಮೇಲಿದೆ. ಟಿಕೆಟ್ ಕೈ ತಪ್ಪಿದವರು ಮುನಿಸಿಕೊಂಡು ಬೇರೆಡೆ ಹೋಗದಂತೆ ಇಲ್ಲವೆ ತಟಸ್ಥಾಗಿ ಉಳಿಯದಂತೆ ಎಚ್ಚರ ವಹಿಸಬೇಕಾದ ಅಗತ್ಯವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts