More

    ಹೆಕ್ಟೇರ್‌ಗೆ 25 ಸಾವಿರ ರೂ. ಪರಿಹಾರಕ್ಕೆ ಪಟ್ಟು

    ಚಳ್ಳಕೆರೆ: ಮಳೆ ಕೊರತೆಯಿಂದ ಬೆಳೆನಷ್ಟ ಮಾಡಿಕೊಂಡಿರುವ ರೈತರಿಗೆ ಹೆಕ್ಟೇರ್‌ಗೆ 25 ಸಾವಿರ ರೂ. ಪರಿಹಾರ ಹಾಗೂ ವಿಮೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ತಾಲೂಕು ಕಚೇರಿ ಎದುರು ರೈತಸಂಘದ ನೂರಾರು ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

    ಜಿಲ್ಲಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರಡ್ಡಿ ಮಾತನಾಡಿ, ತಾಲೂಕಿನಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದೆ. ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಬರ ಅಧ್ಯಯನ ಸಮೀಕ್ಷೆ ನಡೆಸಿವೆ, ಬರಪೀಡಿತ ಪ್ರದೇಶವೆಂದು ಘೋಷಿಸಿವೆ. ಬೆಳೆ ಪರಿಹಾರ ಮತ್ತು ವಿಮೆಗಾಗಿ ರೈತ ಸಂಘಟನೆಗಳ ಮೂಲಕ ಹಲವು ಬಾರಿ ಮನವಿ ಸಲ್ಲಿಸಲಾಗಿದೆ ಎಂದರು.

    ಆದರೂ ಬೆಳೆ ಪರಿಹಾರ ಬಿಡುಗಡೆ ಮಾಡದೆ ರೈತ ವಿರೋಧಿಯಾಗಿ ಸರ್ಕಾರಗಳು ವರ್ತಿಸುತ್ತಿವೆ. ತಾಲೂಕು ಆಡಳಿತದಿಂದ ಹೊಲಗಳ ರಸ್ತೆ ಸಮಸ್ಯೆ ಸೇರಿ ಸರ್ವೇ ಸ್ಕೆಚ್, ನಕಾಶೆ ವಿತರಣೆಗೆ ಸ್ಪಂದನೆ ಸಿಗುತ್ತಿಲ್ಲ ಎಂದು ದೂರಿದರು.

    ಕಚೇರಿ ಕೆಲಸಕ್ಕೆ ಅಧಿಕಾರಿಗಳು ಸಕಾಲಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ. ಮೇಲಾಧಿಕಾರಿಗಳು ನಿರ್ಲಕ್ಷ್ಯ ತೋರುವ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು.

    ರೈತರಿಂದ ಬೆಳೆವಿಮೆ ಕಟ್ಟಿಸಿಕೊಂಡಿರುವ ಸರ್ಕಾರ ಈ ಕೂಡಲೇ ವಿಮೆ ಹಣ ಬಿಡುಗಡೆ ಮಾಡಿಸಬೇಕು ಎಂದು ಆಗ್ರಹಿಸಿದರು.

    ಬೇಸಿಗೆ ಪರಿಸ್ಥಿತಿಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆಗೆ ಹೆಚ್ಚಿನ ನಿಗಾ ವಹಿಸಬೇಕು. ಕೂಲಿ ಕಾರ್ಮಿಕರ ಕುಟುಂಬಗಳ ನಿರ್ವಹಣೆಗೆ ಖಾತ್ರಿ ಯೋಜನೆಯಡಿ ಬರಗಾಲ ಕಾಮಾಗಾರಿಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

    ತಹಸೀಲ್ದಾರ್ ರೆಹಾನ್ ಪಾಷಾ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಕೊಟ್ರಬಸಪ್ಪ, ಚಂದ್ರಶೇಖರ ನಾಯಕ, ಮಲ್ಲಸಮುದ್ರ ಗಂಗಾಧರ, ಕೆ.ಮಲ್ಲೇಶಪ್ಪ, ಒ.ಟಿ.ತಿಪ್ಪೇಸ್ವಾಮಿ, ಮಂಜುನಾಥ, ರಾಮನಾಯಕ, ವೀರೇಶ, ಚಂದ್ರಣ್ಣ, ರಾಜಣ್ಣ, ಎಸ್.ಮಂಜುನಾಥ, ಪಿ.ಈರಣ್ಣ, ಪಾಪಯ್ಯ, ಬೊಮ್ಮಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts