More

  ಚಳಿ ಇಳಿಯುವ ಮುನ್ನ ಬಿಸಿಲ ಝಳ: ಮಾಯಗಾನಹಳ್ಳಿ ಬಳಿ ಕಾಡಿಗೆ ಬೆಂಕಿ

  ರಾಮನಗರ: ಚಳಿಗಾಲ ಮುಗಿಯುವ ಹಂತದಲ್ಲಿರುವಾಗಲೇ ಬಿಸಿಲ ಝಳ ಹೆಚ್ಚಿದ್ದು ಬೆಂಕಿ ಅವಘಡಗಳು ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ.

  ಚಳಿ ಹೆಚ್ಚಿರುವಾಗಲೇ ಭಾನುವಾರ ಮಾಯಗಾನಹಳ್ಳಿ ಸಮೀಪದ ಕಾಡೊಂದಕ್ಕೆ ಬೆಂಕಿ ಬಿದ್ದಿರುವುದು ಅಪಾಯದ ಮುನ್ಸೂಚನೆ ನೀಡಿದಂತಿದೆ. ಈ ಹಿನ್ನೆಲೆಯಲ್ಲಿ ಬೆಂಕಿಗೆ ಸುಲಭವಾಗಿ ತುತ್ತಾಗುವ ಅರಣ್ಯ, ಕೃಷಿ ಪ್ರದೇಶಗಳು ಮತ್ತು ತೋಟಗಳನ್ನು ಎಚ್ಚರಿಕೆಯಿಂದ ಕಾಯಬೇಕಾದ ಅನಿವಾರ್ಯತೆ ಇದೆ.

  ಕಳೆದ ಸಾಲಿನಲ್ಲಿ ವ್ಯಾಪಕ ಬೆಂಕಿ: 2019ರ ಫೆಬ್ರವರಿ ಅಂತ್ಯಕ್ಕೆ ಜಿಲ್ಲೆಯಲ್ಲಿ ಸಾಕಷ್ಟು ಮಾವಿನ ತೋಟಗಳು, ಕಾಡುಗಳು, ನೂರಾರು ತೆಂಗಿನ ಗಿಡಗಳು ಬೆಂಕಿಗೆ ಆಹುತಿಯಾಗಿದ್ದವು. ಬಿಡದಿ ಹೋಬಳಿ ತಾಯಪ್ಪನದೊಡ್ಡಿ, ಹಾರೋಹಳ್ಳಿಯ ಗಾರೆಪಾಳ್ಯ, ಎರೇಹಳ್ಳಿಯಲ್ಲಿ ಸುಮಾರು ನೂರಾರು ತೆಂಗಿನ ಮರಗಳು ಭಸ್ಮವಾಗಿದ್ದವು. ಹಂದಿ ಗುಂದಿ ಬೆಟ್ಟದ ಸಮೀಪವೇ ಮಾವಿನ ತೋಟವೊಂದು ಬೆಂಕಿಗೆ ಆಹುತಿಯಾಗಿದ್ದರೆ, ಲಕ್ಷ್ಮೀಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಹುಲ್ಲಿನ ಬಣವೆಗಳು ಬೆಂದು ಹೋಗಿದ್ದವು. ಇದರ ಜತೆಗೆ ಸಂಗಮ ವಲಯದಲ್ಲಿ ಅರಣ್ಯ ಪ್ರದೇಶವೂ ಕಾಡ್ಗಿಚ್ಚಿಗೆ ನಲುಗಿತ್ತು.

  ಏನೇನು ಮಾಡಬೇಕು?:
  1) ಬೆಂಕಿ ತಗುಲಿದಾಗ ಅಗ್ನಿಶಾಮಕ ಮತ್ತು ತುರ್ತು ಸೇವೆಗೆ 101 ಅಥವಾ 080-22971500, ರಾಮನಗರ ಅಗ್ನಿಶಾಮಕ ಕಚೇರಿ 080-29785101, ಕನಕಪುರ – 080-29761101, ಮಾಗಡಿ – 080-29704446, ಚನ್ನಪಟ್ಟಣ – 080-29721354ಗೆ ಸಂಪರ್ಕಿಸುವುದು.

  2) ಮನೆ, ಹುಲ್ಲಿನ ಮೆದೆಗೆ, ಮರದ ರಾಶಿಗೆ ಬೆಂಕಿ ತಗುಲಿದಾಗ ಸಾಕಷ್ಟು ಮರಳು ಮತ್ತು ನೀರು ಸುರಿಯುವುದು.

  3) ಸೀಮೆಎಣ್ಣೆ, ಪೆಟ್ರೋಲ್ ಅಥವಾ ಇತರ ಎಣ್ಣೆ ಪದಾರ್ಥಗಳಿಗೆ ಬೆಂಕಿ ತಗುಲಿದಾಗ ನೀರು ಸುರಿಯದೆ, ಬೆಂಕಿ ನಂದಿಸಲು ಹೆಚ್ಚಿನ ಮರಳು ಬಳಸುವುದು.

  4) ವಿದ್ಯುತ್‌ನಿಂದಾಗಿ ಸಂಭವಿಸುವ ಬೆಂಕಿ ಅವಘಡಕ್ಕೆ ನೀರು ಎರಚದೆ, ಮೈನ್ ಸ್ವಿಚ್ ಆಫ್ ಮಾಡಬೇಕು ಹಾಗೂ ಮರಳು ಎರಚಬೇಕು. ಗೋಧಿ, ಸೇರಿ ಇತರ ಕಾಳುಗಳ ಹಿಟ್ಟುಗಳನ್ನೂ ಬೆಂಕಿ ನಂದಿಸಲು ಬಳಕೆ ಮಾಡಬಹುದು.

  5) ಎಲ್‌ಪಿಜಿ ಸೋರಿಕೆಯ ವಾಸನೆ ಬಂದ ಕೂಡಲೇ ಎಲ್ಲ್ಲ ಕಿಟಕಿ ಬಾಗಿಲುಗಳನ್ನು ತೆರೆದು ಗಾಳಿಯಾಡುವಂತೆ ವ್ಯವಸ್ಥೆ ಮಾಡಬೇಕು.

  ಜಮೀನುಗಳಲ್ಲಿ ಏನು ಮಾಡಬೇಕು?:
  1) ಮಾವು/ತೆಂಗು ಸೇರಿ ಯಾವುದೇ ತೋಟಗಳಲ್ಲಿ ಕಳೆ ಹೆಚ್ಚಾಗಿ ಬೆಳೆಯದಂತೆ ಮತ್ತು ಒಣಗಿದ ಕಳೆ /ಹುಲ್ಲು ಇರದಂತೆ ಗಮನಹರಿಸಬೇಕು.

  2) ಒಣಗಿದ ಎಲೆಗಳನ್ನು ಸಾಧ್ಯವಾದಷ್ಟು ಮಣ್ಣಿನಿಂದ ಮುಚ್ಚಬೇಕು.

  3) ಬದುಗಳಲ್ಲಿ ಬೆಳೆದಿರುವ ಕಳೆ ನಿಯಂತ್ರಣ ಮಾಡುವ ಸಲುವಾಗಿ ಬೆಂಕಿ ಹಾಕಬಾರದು. ಗಾಳಿಯಿಂದಾಗಿ ಬೆಂಕಿ ವ್ಯಾಪಿಸುವ ಸಾಧ್ಯತೆ ಹೆಚ್ಚಿರುತ್ತದೆ.

  4) ಬೆಂಕಿ ಬಳಕೆ ಮಾಡಿದರೂ ಅದು ನಂದಿ ಹೋಗುವವರೆಗೂ ನಿಗಾ ಇಟ್ಟು ನೋಡಿಕೊಳ್ಳಬೇಕು, ಅದರ ಮೇಲೆ ಮರಳು, ಇಲ್ಲವೇ ನೀರು ಸುರಿಯಬೇಕು.

  ಅರಣ್ಯಕ್ಕೂ ವ್ಯಾಪಿಸುತ್ತಿದೆ: ಸದ್ಯಕ್ಕೆ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಈ ಬಾರಿ ಬೆಂಕಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲವಾದರೂ ಬೇಸಿಗೆ ಇನ್ನೂ ಸಾಕಷ್ಟು ದಿನ ಇರುವ ಮುಂಚೆಯೇ ಮಾಯಗಾನಹಳ್ಳಿ ಸಮೀಪ ಕಾಡಿಗೆ ಬೆಂಕಿ ಬಿದ್ದಿರುವುದು ಇಲಾಖೆಗೆ ಎಚ್ಚರಿಕೆ ಗಂಟೆಯಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಹ ಬೆಂಕಿ ನಿಯಂತ್ರಣಕ್ಕೆ ಹೆಚ್ಚಿನ ಗಮನ ನೀಡಬೇಕಿದೆ. ಅಲ್ಲದೆ, ಕಾಡಿನಲ್ಲಿ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಬೆಂಕಿ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸ್ವಾಭಾವಿಕವಾಗಿಯೇ ಅಥವಾ ಕಿಡಿಗೇಡಿಗಳ ಕೃತ್ಯದಿಂದಲೋ ಕಾಡು ನಾಶವಾಗಲಿದೆ.

  ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲ ಜಳ ಹೆಚ್ಚಿದೆ. ಈ ಸಂದರ್ಭದಲ್ಲಿ ಬೆಂಕಿ ಅವಘಡಗಳು ಹೆಚ್ಚಾಗುತ್ತವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದೇ ಎಲ್ಲಕ್ಕಿಂತ ದೊಡ್ಡ ಪರಿಹಾರ. ಬೆಂಕಿ ಅಪಘಾತ ಸಂಭವಿಸಿದ ತಕ್ಷಣ ತಿಳಿಸಿದರೆ ಅಗ್ನಿಶಾಮಕ ಇಲಾಖೆ ನಿಮ್ಮ ನೆರವಿಗೆ ಬರಲಿದೆ.

  ಮಂಜುನಾಥ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ, ರಾಮನಗರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts