More

    ರೇಶನಿಂಗ್ ಪದ್ಧತಿಯಿಂದ ಚಕ್ರಾನದಿ ಪಾತ್ರ ಜಲಸಮೃದ್ಧ, ಜಿಲ್ಲಾಧಿಕಾರಿ ಮಾರ್ಗದರ್ಶನ ಪಾಲನೆಯಿಂದ ಯಶಸ್ಸು

    ಶ್ರೀಪತಿ ಹೆಗಡೆ ಹಕ್ಲಾಡಿ ಹಳ್ಳಿಹೊಳೆ
    ವಿದ್ಯುತ್ ಉಚಿತ ಸಂಪರ್ಕಕ್ಕೆ ಹರಿವು ನಿಲ್ಲಿಸಿ ಜಲಚರಗಳ ಆಪೋಷನ ಪಡೆಯುತ್ತಿದ್ದ ಚಕ್ರಾನದಿ ಪಾತ್ರದಲ್ಲಿ ಪ್ರಸಕ್ತ ಸಾಕಷ್ಟು ನೀರು ತುಂಬಿದೆ. ರೇಶನ್ ಪದ್ಧತಿಯಲ್ಲಿ ನೀರಿನ ಬಳಕೆಯಿಂದ ಈ ಬಾರಿ ಚಕ್ರಾನದಿ ಬತ್ತಿಲ್ಲ.
    ಚಕ್ರಾನದಿ ಬತ್ತಿ ಜಲಚರಗಳ ಮಾರಣಹೋಮದ ಬಗ್ಗೆ ಇತ್ತೀಚೆಗೆ ನಡೆದಿದ್ದ ಡಿಸಿ ಜತೆಗಿನ ವಿಜಯವಾಣಿ ಫೋನ್ ಇನ್ ಕಾರ‌್ಯಕ್ರಮದಲ್ಲಿ ಗಮನ ಸೆಳೆದಿತ್ತು. ಈ ಸಂದರ್ಭ ಸಣ್ಣ ನೀರಾವರಿ ಇಲಾಖೆ ಜತೆ ಮಾತನಾಡಿ ಚಕ್ರಾನದಿ ನೀರು ಬಳಕೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದರು. ಕೊಟ್ಟ ಮಾತಿನಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ, ರೇಶನ್ ಪದ್ಧತಿಯಲ್ಲಿ ನೀರು ಬಳಕೆಗೆ ಸೂಚಿಸಿದ್ದರಿಂದ ಚಕ್ರಾನದಿ ಪಾತ್ರದಲ್ಲಿ ಪ್ರಸಕ್ತ ಹೇರಳ ಪ್ರಮಾಣದಲ್ಲಿ ನೀರು ತುಂಬಿದೆ.

    ಕೃಷಿಕರು ಯಥೇಚ್ಛವಾಗಿ ಕೃಷಿಗೆ ನೀರು ಬಳಸುತ್ತಿದ್ದರಿಂದ ನದಿ ಹರಿವು ನಿಲ್ಲಿಸಿ, ಜಲಚರಗಳು ಒದ್ದಾಡಿ ಜೀವ ಕಳೆದುಕೊಳ್ಳುವ ಜತೆ ಕುಡಿಯುವ ನೀರಿನ ಸಮಸ್ಯೆಗೂ ಕಾರಣವಾಗುತ್ತಿತ್ತು. ನೀರು ಮಿತ ಬಳಕೆಯಿಂದ ನದಿಯಲ್ಲಿ ಪ್ರಸಕ್ತ ನೀರಿದೆ. ನೀರು ಬಳಕೆಯಲ್ಲಿ ಇನ್ನಷ್ಟು ಕ್ರಮ ತೆಗೆದುಕೊಂಡರೆ, ಕಿಂಡಿ ಅಣೆಕಟ್ಟು ಕೆಳಬಾಗದ ರೈತರಿಗೂ ಅನುಕೂಲವಾಗುತ್ತದೆ.

    ಚಕ್ರಾನದಿಗೆ ಸಾವೆಹಕ್ಲು ಬಳಿ ಅಣೆಕಟ್ಟು ನಿರ್ಮಿಸಿದ್ದರಿಂದ ಯಡೆಮೊಗೆ, ಹಳ್ಳಿಹೊಳೆ, ಕಲಮಶಿಲೆ, ಚಕ್ರಾಮೈದಾನ, ಹೆಮ್ಮಣ್ಣು ಪ್ರದೇಶದಲ್ಲಿ ನಡೆಯುತ್ತಿದ್ದ ಸ್ವಾಭಾವಿಕ ಕೃಷಿ, ಕಟ್ಟುಗಳು ನಿಲುಗಡೆಯಾಗಿದೆ.

    ಅನಗತ್ಯ ನೀರು ಹಾಯಿಸಬೇಡಿ: ರೈತರು ನೀರು ಹೆಚ್ಚು ಬಳಸುವುದರಿಂದ ಅಡಕೆ ಕೃಷಿ, ಇಳುವರಿ ಹೆಚ್ಚುತ್ತದೆ ಎಂಬ ತಪ್ಪು ಕಲ್ಪನೆಯಿದೆ. ತೋಟದಲ್ಲಿ ಅನವಶ್ಯ ನೀರು ನಿಲ್ಲಿಸುವುದರಿಂದ ಪೋಷಕಾಂಶ, ಗೊಬ್ಬರ ಎಲ್ಲವೂ ಭೂಮಿಯಡಿ ಸೇರಿ ನಿಸ್ಸಾರವಾಗುತ್ತದೆ. ಈ ಬಾರಿ ಸರತಿಯಂತೆ ನೀರು ಬಿಡುವುದರಿಂದ ಚಕ್ರಾ ನದಿಯಲ್ಲಿ ನೀರಿದ್ದರೂ ಇನ್ನಷ್ಟು ನೀರು ಉಳಿಸಿಕೊಳ್ಳಲು ಸಾಧ್ಯ. ಅಡಕೆ ಮರಕ್ಕೆ ಎಷ್ಟು ನೀರು ಬೇಕೋ ಅಷ್ಟು ಬಿಡುವುದರಿಂದ ಕಿಂಡಿ ಅಣೆಕಟ್ಟು ಕೆಳಗಿನವರಿಗೂ ಚಕ್ರಾ ನದಿ ನೀರಿನ ಪ್ರಯೋಜನ ಪಡೆಯಲು ಸಾಧ್ಯ.

    ಚಕ್ರಾನದಿ ನೀರು ಬಳಕೆ ಕುರಿತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಹೊಳೆಯಲ್ಲಿ ನೀರು ಕಡಿಮೆ ಬಂದರೆ ರೇಶನಿಂಗ್ ಪದ್ಧತಿ ಹಾಗೂ ನೀರಿನ ಹರಿವಿಕೆ ಆಧಾರದಲ್ಲಿ ನೀರು ಬಳಸುವಂತೆ ಸೂಚಿಸಿರುವುದು ಫಲ ನೀಡಿದೆ. ನೀರು ಬಳಸುವ ಸಮಯ ನಿಗದಿ ಮೂಡುವ ಮೂಲಕ ಕಿಂಡಿ ಅಣೆಕಟ್ಟು ಕೆಳಭಾಗದ ರೈತರಿಗೂ ಚಕ್ರಾ ನದಿ ನೀರು ದೊರೆಯುವಂತೆ ಮಾಡುವ ಬಗ್ಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ.
    ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಚಕ್ರಾ ನದಿ ನೀರನ್ನು ಇಲ್ಲಿನ ಕೃಷಿಕರು ಸರತಿಯಂತೆ ಬಳಸಿಕೊಳ್ಳುತ್ತಿದ್ದಾರೆ. ಒಂದು ವಾರ ನದಿ ಒಂದು ಕಡೆ ರೈತರು ನೀರು ಬಳಸಿಕೊಂಡರೆ, ಮತ್ತೊಂದು ದಿನ ನದಿಯ ಮತ್ತೊಂದು ಪಾತ್ರದ ಕೃಷಿಕರು ಬಳಸಿಕೊಳ್ಳುತ್ತಾರೆ. ಮಂಗಳವಾರ ಹೊಳೆಯಿಂದ ನೀರೆತ್ತುವುದು ಕಡ್ಡಾಯವಾಗಿ ನಿಲ್ಲಿಸುತ್ತೇವೆ. ಈ ಪದ್ಧ್ದತಿಯ ಪರಿಣಾಮ ಚಕ್ರಾ ನದಿಯಲ್ಲಿ ಇನ್ನೂ ನೀರು ಖಾಲಿಯಾಗಿಲ್ಲ.
    ದಿನೇಶ್ ಎಡಿಯಾಳ, ಕೃಷಿಕ, ಗ್ರಾಪಂ ಸದಸ್ಯ ಹಳ್ಳಿಹೊಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts