More

    ಸಿನಿಮೀಯ ರೀತಿ ಬೆನ್ನಟ್ಟಿ ಸರಗಳ್ಳನ ಹಿಡಿದ ಪೇದೆ

    ಶಿವಮೊಗ್ಗ: ನಗರದ ಉಷಾ ನರ್ಸಿಂಗ್ ಹೋಮ್ ಬಳಿ ಹಾಡಹಗಲೇ ಯುವತಿಯ ಸರ ಕದಿಯಲು ಯತ್ನಿಸಿ ಪರಾರಿಯಾಗುತ್ತಿದ್ದ ಸರಗಳ್ಳನನ್ನು ಸಂಚಾರ ಠಾಣೆ ಪೇದೆಯೊಬ್ಬರು ಸಿನಿಮೀಯ ರೀತಿಯಲ್ಲಿ ಎರಡು ಕಿಮೀವರೆಗೂ ಬೆನ್ನಟ್ಟಿ ಹಿಡಿದಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
    ಪಶ್ಚಿಮ ಸಂಚಾರ ಠಾಣೆ ಪೇದೆ ವಿ.ಎಚ್.ಮುನೇಶಪ್ಪ ಈ ಸಾಹಸ ಮೆರೆದವರು. ಪ್ರಕರಣದಲ್ಲಿ ಮೊಹಮ್ಮದ್ ಶಾರುಖ್ ಎಂಬಾತನನ್ನು ಬಂಧಿಸಲಾಗಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ.
    ಭಾನುವಾರ ಮಧ್ಯಾಹ್ನ ಉಷಾ ನರ್ಸಿಂಗ್ ಹೋಮ್ ಎದುರು ಬಸ್‌ಗಾಗಿ ತಾಯಿ-ಮಗಳು ಕಾಯುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಸರಗಳ್ಳರಿಬ್ಬರು ಯುವತಿ ಕೊರಳಲಿದ್ದ ಚಿನ್ನದ ಸರಕ್ಕೆ ಕೈಹಾಕಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ಯುವತಿ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಕೈಯಲ್ಲಿದ್ದ ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಗಟ್ಟಿಯಾಗಿ ಬೈಕ್ ಹಿಡಿದಿಟ್ಟುಕೊಂಡಿದ್ದ ಯುವತಿಯನ್ನು ಸ್ವಲ್ಪ ದೂರ ಎಳೆದೊಯ್ದಿದ್ದರು.
    ಇದೇ ಸಂದರ್ಭದಲ್ಲಿ ಕರ್ತವ್ಯ ಮುಗಿಸಿ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಸಂಚಾರ ಠಾಣೆ ಪೇದೆ ವಿ.ಎಚ್.ಮುನೇಶಪ್ಪ ಬೈಕ್‌ನಲ್ಲಿ ಸರಗಳ್ಳರನ್ನು ಬೆನ್ನಟ್ಟಿದ್ದಾರೆ. ರೈಲ್ವೆ ಟ್ರ್ಯಾಕ್ ಪಕ್ಕದ ಚಾನಲ್ ರಸ್ತೆ ಮೂಲಕ ಎರಡು ಕಿಮೀ ವರೆಗೂ ಬೆನ್ನಟ್ಟಿದ್ದಾಗ ಶರಾವತಿನಗರದಲ್ಲಿ ಪೆಟ್ರೊಲ್ ಖಾಲಿಯಾಗಿದ್ದರಿಂದ ಸರಗಳ್ಳರು ಬೈಕ್‌ನ್ನು ಅಲ್ಲೇ ಬಿಟ್ಟು ಓಡಿಹೋಗಲು ಮುಂದಾಗಿದ್ದರು. ಅವರನ್ನು ಬೆನ್ನಟ್ಟಿದ್ದ ಮುನೇಶಪ್ಪನಿಗೆ ಸರಗಳ್ಳರು ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಆದರೂ ಧೈರ್ಯಗುಂದದೆ ಮುನೇಶಪ್ಪ ಒಬ್ಬ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ. ಆರೋಪಿ ಮೊಹಮ್ಮದ್ ಶಾರುಖ್‌ನನ್ನು ಜಯನಗರ ಠಾಣೆಗೆ ಒಪ್ಪಿಸಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಾಕು ವಶಕ್ಕೆ ಪಡೆದಿದ್ದಾರೆ. ಸಂಚಾರ ಠಾಣೆ ಪೇದೆ ಮುನೇಶಪ್ಪ ಅವರ ಸಾಹಸಕ್ಕೆ ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts