More

    ಚಡಚಣದಲ್ಲಿ ಚುನಾವಣೆ ಮುಂದೂಡಿಕೆ

    ಚಡಚಣ: ನಿಗದಿತ ಅವಧಿಯಲ್ಲಿ ಯಾವೊಬ್ಬ ಸದಸ್ಯನೂ ನಾಮಪತ್ರ ಸಲ್ಲಿಸದ ಕಾರಣ ಚಡಚಣ ತಾಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿದೆ.
    ಇಂಡಿ ತಾಪಂನಿಂದ ಬೇರ್ಪಟ್ಟ ನಂತರ ಇದೇ ಪ್ರಥಮ ಬಾರಿಗೆ ಚಡಚಣ ತಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಚುನಾವಣೆ ಘೋಷಣೆ ಮಾಡಿತ್ತು. ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ ಪ್ರವರ್ಗ-ಎಗೆ ಮೀಸಲು ಮಾಡಲಾಗಿದೆ. ಚುನಾವಣಾಧಿಕಾರಿ, ಇಂಡಿ ಉಪವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ ಅವರು ಜು.21ರ ದಿನಾಂಕ ನಿಗದಿಪಡಿಸಿ ಎಲ್ಲ ಸದಸ್ಯರಿಗೆ ನೋಟಿಸ್ ಕೂಡ ಜಾರಿಗೊಳಿಸಿದ್ದರು. ನಿಗದಿಯಂತೆ ಮಂಗಳವಾರ ಬೆಳಗ್ಗೆ ಚಡಚಣ ತಾಪಂ ಕಾರ್ಯಾಲಯದಲ್ಲಿ ಆಯ್ಕೆ ಪ್ರಕ್ರಿಯೆ ಆರಂಭವಾಯಿತು. ನಾಮಪತ್ರ ಸಲ್ಲಿಕೆಗೆ ಬೆಳಗ್ಗೆ 10.30 ರಿಂದ 12.30 ಗಂಟೆವರೆಗೆ ಕಾಲಾವಕಾಶ ನಿಗದಿಗೊಳಿಸಲಾಗಿತ್ತು. ಆದರೆ, ನಿಗದಿತ ಸಮಯದಲ್ಲಿ ತಾಪಂನ 12 ಸದಸ್ಯರಲ್ಲಿ ಯಾರೊಬ್ಬರೂ ನಾಮಪತ್ರ ಸಲ್ಲಿಸಲು ತಾಪಂ ಕಾರ್ಯಾಲಯಕ್ಕೆ ಆಗಮಿಸಲಿಲ್ಲ. ನಿಗದಿತ ಸಮಯ ಮುಗಿದ ನಂತರ ಚುನಾವಣಾಧಿಕಾರಿ ಸ್ನೇಹಲ್ ಲೋಖಂಡೆ ಅವರು ಚುನಾವಣೆ ಮುಂದೂಡಲಾಗಿದೆ ಎಂದು ನೋಟಿಸ್ ಜಾರಿ ಮಾಡಿದರು.
    ಚಡಚಣ ತಾಪಂ ಆಡಳಿತಾರೂಢ ಬಿಜೆಪಿ-4, ಕಾಂಗ್ರೆಸ್-3, ಜೆಡಿಎಸ್-2 ಹಾಗೂ 3 ಪಕ್ಷೇತರ ಸದಸ್ಯರ ಬಲಾಬಲ ಹೊಂದಿದೆ. ಬಿಜೆಪಿಯಿಂದ ಬರಡೋಲ ಮತಕ್ಷೇತ್ರದ ರಾಜು ಝಳಕಿ, ಕಾಂಗ್ರೆಸ್‌ನಿಂದ ದೇವರನಿಂಬರಗಿ ಮತಕ್ಷೇತ್ರದ ಸಂಗವ್ವ ಕಲ್ಲಪ್ಪ ಬಿರಾದಾರ ಹಾಗೂ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ತದ್ದೇವಾಡಿ ಮತಕ್ಷೇತ್ರದ ಭಾರತಿ ಸಾಹೇಬಗೌಡ ಬಿರಾದಾರ ಮಧ್ಯೆ ಅಧ್ಯಕ್ಷಗಿರಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯ ಮೂವರು, ಜೆಡಿಎಸ್‌ನ ಇಬ್ಬರು ಹಾಗೂ ಮೂವರು ಪಕ್ಷೇತರ ಸದಸ್ಯರು ಕಾಂಗ್ರೆಸ್ ತೆಕ್ಕೆಗೆ ಜಾರಿದ ಪರಿಣಾಮ ಬಿಜೆಪಿ ಪಕ್ಷದಲ್ಲಿ ಉಳಿದ ಏಕೈಕ ಅಭ್ಯರ್ಥಿ ರಾಜು ಝಳಕಿ ಅವರು ನಾಮಪತ್ರ ಸಲ್ಲಿಸಲು ಹಿಂದೇಟು ಹಾಕಿದರು. ತಾಪಂನ ಒಟ್ಟು 12 ಸದಸ್ಯರ ಪೈಕಿ 11 ಸದಸ್ಯರನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆ ಅತೀ ಸುಲಭವಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾದ ಸಂಗವ್ವ ಕಲ್ಲಪ್ಪ ಬಿರಾದಾರ ಹಾಗೂ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಭಾರತಿ ಸಾಹೇಬಗೌಡ ಬಿರಾದಾರ ಅವರ ಮಧ್ಯೆ ಕೊನೆಯ ಅವಧಿಯವರೆಗೂ ಒಮ್ಮತ ಮೂಡದ ಕಾರಣ ನಾಮಪತ್ರ ಸಲ್ಲಿಕೆಯಾಗುವ ಕೊನೆಯ ಅವಧಿಯವರೆಗೂ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಘೋಷಿಸಲು ವಿಲವಾಗಿದ್ದರಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಲಿಲ್ಲ. ಕಾರಣ ಈ ಚುನಾವಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವುದು ಚುನಾವಣಾಧಿಕಾರಿಗೆ ಅನಿವಾರ್ಯವಾಯಿತು.
    ಚುನಾವಣೆ ಪ್ರಕ್ರಿಯೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ವಿಜಯಕುಮಾರ ಆಜೂರ, ಇಂಡಿ ತಹಸೀಲ್ದಾರ್ ವಿರುಪಾಕ್ಷ ಬಣಗಾರ, ಚಡಚಣ ತಹಸೀಲ್ದಾರ್ ಆರ್.ಎಸ್. ರೇವಡಿಗಾರ ಸೇರಿ ಕಂದಾಯ ಹಾಗೂ ತಾಪಂ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
    ಇಂಡಿ ಡಿವೈಎಸ್ಪಿ ಎಂ.ಬಿ. ಸಂಕದ ಪೊಲೀಸ್ ಸಿಬ್ಬಂದಿಯೊಂದಿಗೆ ಬಿಗಿ ಭದ್ರತೆ ಒದಗಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts