More

    ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಲು ಸಿದ್ಧ

    ಚಡಚಣ: ನನ್ನ ಮೇಲಿನ ವೈಯಕ್ತಿಕ ದ್ವೇಷದಿಂದಾಗಿ ಡಿಸಿಎಂ ಗೋವಿಂದ ಕಾರಜೋಳ ಅವರು ನಾಗಠಾಣ ಮತಕ್ಷೇತ್ರದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಈ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ಬೇಕಾದರೆ ಡಿಸಿಎಂ ಕಾರಜೋಳ ತಮ್ಮ ಪುತ್ರನನ್ನು ನಾಗಠಾಣ ಮತಕ್ಷೇತ್ರದಿಂದ ಗೆಲ್ಲಿಸಿಕೊಂಡು ಬಂದು ಕ್ಷೇತ್ರದ ಅಭಿವೃದ್ಧಿ ಮಾಡಲಿ ಎಂದು ನಾಗಠಾಣ ಶಾಸಕ ಡಾ.ದೇವಾನಂದ ಚವಾಣ್ ಹೇಳಿದರು.
    ಇತ್ತೀಚೆಗೆ ನನ್ನ ಮತಕ್ಷೇತ್ರದಲ್ಲಿ ಪ್ರವಾಸ ಕೈಗೊಂಡ ಡಿಸಿಎಂ ಕಾರಜೋಳ ಅವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡ ಕಾಮಗಾರಿಗಳಿಗೆ ಭೂಮಿಪೂಜೆ, ಲೋಕಾರ್ಪಣೆ ಮತ್ತು ಉದ್ಘಾಟನೆ ನೆರವೇರಿಸಿ ತಮ್ಮಿಂದ ಹಾಗೂ ತಮ್ಮ ಸರ್ಕಾರದಿಂದ ಈ ಎಲ್ಲ ಕಾಮಗಾರಿಗಳು ಆಗಿವೆ ಎನ್ನುವ ರೀತಿಯಲ್ಲಿ ಬಿಂಬಿಸಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ಇದೇ ಪ್ರಥಮ ಬಾರಿಗೆ ನನ್ನ ಮತಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದ ಡಿಸಿಎಂ ಅವರು ಕ್ಷೇತ್ರಕ್ಕೆ ಏನಾದರೂ ಅನುದಾನ ಘೋಷಣೆ ಮಾಡಬಹುದೆಂದು ಜನತೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನೈಯಾಪೈಸೆ ಅನುದಾನ ಘೋಷಣೆ ಮಾಡದೆ ಬರೀ ಭಾಷಣ ಬಿಗಿದು ಹೋಗಿದ್ದು ಇಲ್ಲಿನ ಮತದಾರರಿಗೆ ಬಹಳ ನಿರಾಸೆ ಉಂಟು ಮಾಡಿದೆ. ಅಲ್ಲದೆ, ನಾನು ಅನುದಾನ ಕೇಳಿದರೆ ಪ್ರವಾಹ ಹಾಗೂ ಕರೋನಾ ನೆಪ ಹೇಳುತ್ತಾರೆ. ರಾಜ್ಯದ ಇನ್ನುಳಿದ 223 ಕ್ಷೇತ್ರಗಳಿಗೆ ಯಾವುದೇ ನೆಪ ಹೇಳದೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಹಾಗಾದರೆ ನನ್ನ ಕ್ಷೇತ್ರಕ್ಕೆ ಮಾತ್ರ ಪ್ರವಾಹ ಹಾಗೂ ಕರೊನಾ ಸಂಕಷ್ಟ ಎದುರಾಗಿದೆಯೇ ಎಂದು ಪ್ರಶ್ನಿಸಿದರು.
    ಇತ್ತೀಚೆಗೆ ಡಿಸಿಎಂ ಅವರು ನನ್ನ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾಗ ನಾನು ಅಂದು ಅವರ ಜತೆಯಲ್ಲಿಯೇ ಇದ್ದರೂ ಮತಕ್ಷೇತ್ರದ ಶಾಸಕ ಎಂದು ಕೂಡ ಪರಿಗಣಿಸದೆ ಶಿಷ್ಟಾಚಾರ ಮೀರಿ ಉಮರಾಣಿ ಗ್ರಾಮದ ಬ್ರಿಜ್ ಕಂ ಬಾಂದಾರ ಉದ್ಘಾಟನೆ ಮಾಡಿದರು. ಇದು ಡಿಸಿಎಂ ಅವರ ಘನತೆಗೆ ತಕ್ಕದಲ್ಲ ಎಂದರು. ಚಡಚಣ ಪಟ್ಟಣ ನೂತನ ತಾಲೂಕು ಕೇಂದ್ರವಾಗಿದ್ದು, ವಿವಿಧ ಕಚೇರಿಗಳಿಗಾಗಿ ಮಿನಿ ವಿಧಾನಸೌಧ ಕಟ್ಟಡ ಅತ್ಯವಶ್ಯಕವಿದೆ. ಆದರೆ, ಕಟ್ಟಡದ ಜಾಗದ ಸಲುವಾಗಿ ಪಟ್ಟಣದ ಸಾರ್ವಜನಿಕರಲ್ಲಿ ಹಾಗೂ ಅಧಿಕಾರಿಗಳಲ್ಲಿ ಗೊಂದಲ ಮೂಡಿಸಿ ಮಿನಿ ವಿಧಾನಸೌಧ ನಿರ್ಮಾಣವಾಗದಂತೆ ಜಾಣತನ ಪ್ರದರ್ಶಿಸುತ್ತಿದ್ದಾರೆ. ಈಗಾಗಲೇ ಪಟ್ಟಣಕ್ಕೆ ಮಂಜೂರಾಗಿರುವ ಅಗ್ನಿಶಾಮಕ ಠಾಣೆ, ಬಸ್ ಡಿಪೋ ನಿರ್ಮಾಣ ಸೇರಿ ಮತ್ತಿತರ ಅಭಿವೃದ್ಧಿ ಕೆಲಸಗಳಿಗೆ ಡಿಸಿಎಂ ಕಾರಜೋಳ ತಡೆವೊಡ್ಡುತ್ತಿದ್ದಾರೆ ಎಂದು ಆರೋಪಿಸಿದರು.
    ಪಟ್ಟಣದ ಸಿಸಿ ರಸ್ತೆಗಾಗಿ ಸಮ್ಮಿಶ್ರ ಸರ್ಕಾರದಲ್ಲಿ 4 ಕೋಟಿ ರೂ. ಮಂಜೂರಾಗಿ ಶೇ. 70ರಷ್ಟು ಕೆಲಸ ಕೂಡ ಪೂರ್ಣಗೊಂಡಿದೆ. ಈಗ ಡಿಸಿಎಂ ತಡೆವೊಡ್ಡಿದ್ದರಿಂದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಗುತ್ತಿಗೆದಾರ ನ್ಯಾಯಾಲಯದ ಮೊರೆ ಹೋದ ಪರಿಣಾಮ ನ್ಯಾಯಾಲಯವು ಸರ್ಕಾರಕ್ಕೆ ದಂಡ ವಿಧಿಸಿ ಗುತ್ತಿಗೆದಾರರಿಗೆ ಹಣ ಪಾವತಿಸುವಂತೆ ಆದೇಶಿಸಿದೆ ಎಂದರು.
    ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಚಡಚಣಕ್ಕೆ ಸರ್ಕಾರಿ ಪಿಯು ಹಾಗೂ ಪದವಿ ಕಾಲೇಜುಗಳೂ ಮಂಜೂರಾಗಿವೆ. ಡಿಸಿಎಂ ಅವರು ಈ ಭಾಗದ ಬಡ ಮಕ್ಕಳ ಬಾಳಿಗೆ ಬೆಳಕಾಗುವುದನ್ನು ಬಿಟ್ಟು ಸ್ಥಳೀಯ ರಾಜಕೀಯ ಮುಖಂಡರ ಮಾತಿಗೆ ಮನ್ನಣೆ ನೀಡಿ ಅವೆಲ್ಲವನ್ನೂ ತಡೆಹಿಡಿದಿದ್ದಾರೆ ಎಂದು ದೂರಿದರು.
    ಡಿಸಿಎಂ ಕಾರಜೋಳ ಅವರು ನನ್ನ ಮೇಲಿನ ವೈಯಕ್ತಿಕ ದ್ವೇಷ, ಪ್ರತಿಷ್ಠೆ ಹಾಗೂ ರಾಜಕೀಯ ಬಿಟ್ಟು ಪಕ್ಷಾತೀತವಾಗಿ ಮತಕ್ಷೇತ್ರದ ಅಭಿವೃದ್ಧಿಗೋಸ್ಕರ ಸಹಕರಿಸಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts