More

    ಗರ್ಭಕಂಠದ ಕ್ಯಾನ್ಸರ್ ತಡೆಗೆ ಉಚಿತ ಲಸಿಕೆ

    ಬೆಂಗಳೂರು: ಮಹಿಳೆಯರನ್ನು ಇತ್ತೀಚಿನ ದಿನಗಳಲ್ಲಿ ಅತಿಯಾಗಿ ಕಾಡುತ್ತಿರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ 9 ರಿಂದ 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಅಗತ್ಯ ಪ್ರೋತ್ಸಾಹ ನೀಡಲಿದ್ದು, ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದೆ.

    ಕೇಂದ್ರ ಆರೋಗ್ಯ ಸಚಿವಾಲಯವು ಗರ್ಭಕಂಠದ ಕ್ಯಾನ್ಸರ್ ಅನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ರಾಜ್ಯ ಮತ್ತು ಆರೋಗ್ಯ ಇಲಾಖೆಗಳಿಂದ ಮಾಹಿತಿ ಪಡೆದಿದೆ. ಇದೀಗ ಈ ಕಾಯಿಲೆ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಉಚಿತವಾಗಿ ಲಸಿಕೆ ನೀಡಲು ಕ್ರಮವಹಿಸುವುದಾಗಿ ಬಜೆಟ್‌ನಲ್ಲಿ ವಿತ್ತಸಚಿವರು ಘೋಷಿಸಿದ್ದಾರೆ.

    ಭಾರತದಲ್ಲಿ ಪ್ರತಿ ವರ್ಷ 80 ಸಾವಿರ ಮಹಿಳೆಯರು ಈ ಸಮಸ್ಯೆಗೆ ಒಳಗಾಗುತ್ತಿದ್ದು, 35 ಸಾವಿರ ಮಹಿಳೆಯರು ಸಾವಿಗೀಡಾಗುತ್ತಿದ್ದಾರೆ. ಪ್ರಸ್ತುತ ಭಾರತದಲ್ಲಿ ಸೀರಮ್ ಇನ್‌ಸ್ಟ್ಟಿಟ್ಯೂಟ್ ತಯಾರಿಸಿದ ಲಸಿಕೆ ಖಾಸಗಿಯಾಗಿ ಮಾರುಕಟ್ಟೆಯಲ್ಲಿ 2 ಸಾವಿರ ರೂ. ಗೆ ಲಭ್ಯವಿದೆ. ಇದೀಗ ಸರ್ಕಾರದಿಂದಲೇ ಈ ಲಸಿಕೆ ನೀಡಲು ಕ್ರಮವಹಿಸಲಾಗಿದೆ ಎಂದಿದ್ದಾರೆ.

    ಸಕ್ಷಮ್ ಅಂಗನವಾಡಿ: ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕಾಗಿ ಸಮಗ್ರ ಕಾರ್ಯಕ್ರಮ ರೂಪಿಸಲಿದ್ದು, ಸಕ್ಷಮ್ ಅಂಗನವಾಡಿ ಮತ್ತು ಪೋಷಣೆ 2.0 ಅಡಿ ಅಂಗನವಾಡಿ ಕೇಂದ್ರಗಳ ಉನ್ನತೀಕರಣ, ಸುಧಾರಿತ ಪೌಷ್ಟಿಕಾಂಶ ವಿತರಣೆ, ಬಾಲ್ಯದ ಆರೈಕೆ ಮತ್ತು ಅಭಿವೃದ್ಧಿಗಾಗಿ ತ್ವರಿತ ಕ್ರಮಕೈಗೊಳ್ಳಲಾಗುವುದು ಎಂದು ಪ್ರಸ್ತಾಪಿಸಿದ್ದಾರೆ.

    ಯು-ವಿನ್ ಪೋರ್ಟಲ್: ಹೊಸದಾಗಿ ವಿನ್ಯಾಸಗೊಳಿಸಲಾದ ಯು-ವಿನ್ ಪೋರ್ಟಲ್ (ಯೂನಿವರ್ಸಲ್ ಇಮ್ಯುನೈಸೇಷನ್ ಪ್ರೋಗ್ರಾಂ) ಮೂಲಕ ಇನ್ಮುಂದೆ ಲಸಿಕೆ ವಿತರಣೆ ಮತ್ತು ನಿರ್ವಹಣೆ ಮಾಡಲಾಗುತ್ತದೆ. ಪ್ರಸ್ತುತ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎರಡು ಜಿಲ್ಲೆಗಳಲ್ಲಿ ಈ ಪೋರ್ಟಲ್ ಅನ್ನು ಡಿಜಿಟಲೀಕರಣಗೊಳಿಸುವ ಕಾರ್ಯಕ್ರಮ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಯು-ವಿನ್ ಪೋರ್ಟಲ್, ಕೋ-ವಿನ್ ಪೋರ್ಟಲ್‌ನೊಂದಿಗೆ ಸಂಪರ್ಕ ಹೊಂದಿದ್ದು, ಇದು ಲಸಿಕೆ ವಿತರಣೆಯ ಸಂಪೂರ್ಣ ಮಾಹಿತಿಯ ರಿಜಿಸ್ಟ್ರಿಯನ್ನು ನಿರ್ವಹಿಸಲಿದೆ. ಇದರಿಂದ ದೇಶಾದ್ಯಂತ ಮಿಷನ್ ಇಂದ್ರಧನುಷ್ ಲಸಿಕೆ ಅಭಿಯಾನವನ್ನು ತ್ವರಿತವಾಗಿ ನಡೆಸಲು ಸಹಕಾರಿಯಾಗಲಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.

    ಆಯುಷ್ಮಾನ್ ಭಾರತ್ ವಿಸ್ತರಣೆ: ಆಯುಷ್ಮಾನ್ ಭಾರತ್ ಯೋಜನೆ ಅಡಿ ಎಲ್ಲ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಆರೋಗ್ಯ ರಕ್ಷಣೆಯನ್ನು ವಿಸ್ತರಿಸಲಾಗುವುದು. ಈ ಸಂಬಂಧ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಗಾಗಿ (ಪಿಎಂಜೆಎವೈ) 6,800 ಕೋಟಿ ಯಿಂದ 7,500 ಕೋಟಿ ರೂ.ಗೆ ಅನುದಾನ ಹೆಚ್ಚಿಸಲಾಗಿದೆ. ಇದರೊಂದಿಗೆ 12 ಕೋಟಿ ಕುಟುಂಬಗಳಿಗೆ ಆಸ್ಪತ್ರೆಗಳಲ್ಲಿ ದ್ವಿತೀಯ ಮತ್ತು ತೃತೀಯ ಹಂತದ ಆರೈಕೆಗಾಗಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ. ಆರೋಗ್ಯ ರಕ್ಷಣೆ ಒದಗಿಸುವ ಗುರಿಯನ್ನು ಹೊಂದಿರುವುದಾಗಿ ಕೇಂದ್ರ ಸಚಿವೆ ತಿಳಿಸಿದ್ದಾರೆ.

    ವೈದ್ಯಕೀಯ ಕಾಲೇಜುಗಳಿಗೆ ಸಮಿತಿ: ಸಾಕಷ್ಟು ಯುವಕರು ವೈದ್ಯರಾಗಿ ಅರ್ಹತೆ ಪಡೆಯುವ ಮಹತ್ವಾಕಾಂಕ್ಷೆ ಹೊಂದಿದ್ದು, ಅವರು ಸುಧಾರಿತ ಆರೋಗ್ಯ ಸೇವೆಗಳ ಮೂಲಕ ಜನರಿಗೆ ಸೇವೆ ನೀಡುವ ಗುರಿ ಇಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೆ ವಿವಿಧ ಇಲಾಖೆಗಳಡಿ ಅಸ್ತಿತ್ವದಲ್ಲಿರುವ ಆಸ್ಪತ್ರೆ ಮೂಲಸೌಕರ್ಯ ಬಳಸಿಕೊಂಡು ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಈ ವಿಷಯ ಕುರಿತು ಪರಿಶೀಲನೆ ನಡೆಸಿ ಶಿಾರಸು ಮಾಡಲು ಸಮಿತಿ ರಚಿಸುವುದಾಗಿ ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts