More

    ನರೇಗಾ ಕಾರ್ಮಿಕರಿಗೆ ಮತದಾನ ಜಾಗೃತಿ, ಕಡ್ಡಾಯವಾಗಿ ಮತ ಚಲಾಯಿಸಲು ಸಿಇಒ ರಿಶಿ ಆನಂದ ಮನವಿ

    ವಿಜಯಪುರ: ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸುವಂತೆ ಜಿಪಂ ಸಿಇಒ ರಿಶಿ ಆನಂದ ನರೇಗಾ ಕೂಲಿ ಕಾರ್ಮಿಕರಲ್ಲಿ ಮನವಿ ಮಾಡಿದರು.

    ತಾಲೂಕಿನ ನಾಗಠಾಣ ಗ್ರಾಪಂ ವ್ಯಾಪ್ತಿಯ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಕೆರೆಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಅವರು ನರೇಗಾ ಕಾರ್ಮಿಕರಿಗೆ ಮತದಾನ ಜಾಗೃತಿ ಮೂಡಿಸಿದರು.

    ಮೇ 7ರಂದು ನಡೆಯಲಿರುವ ಮತದಾನದ ದಿನದಂದು ಕಡ್ಡಾಯವಾಗಿ ಮತಗಟ್ಟೆಗಳಿಗೆ ಬಂದು ಎಲ್ಲರೂ ಮತದಾನ ಮಾಡಬೇಕು. ನಿಮಗಾಗಿ, ನಿಮ್ಮ ಭವಿಷ್ಯಕ್ಕಾಗಿ, ನಮ್ಮ ಸಮಾಜಕ್ಕಾಗಿ ಮತ್ತು ನಮ್ಮ ದೇಶಕ್ಕಾಗಿ ಮತದಾನ ಮಾಡಿ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕೆಂದರು.

    ಪ್ರಸ್ತುತ ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ನರೇಗಾ ಯೋಜನೆಯಡಿ ಈ ವರ್ಷದ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳುಗಳಲ್ಲಿ ಕೂಲಿ ಆಧಾರಿತ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಎಲ್ಲರೂ ಇನ್ನೂ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಬೇಕು. ನರೇಗಾ ಯೋಜನೆಯಡಿ ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನವಾದ ಕೂಲಿ ಒದಗಿಸಲಾಗುತ್ತಿದೆ ಪ್ರತಿದಿನ ಒಬ್ಬರಿಗೆ 349 ರೂಪಾಯಿಗಳನ್ನು ನೀಡಲಾಗುತ್ತಿದೆ ಎಂದರು.

    ಜನರಿಗೆ ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಲು ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿರುತ್ತದೆ. ಆದ್ದರಿಂದ ತಾವೆಲ್ಲರೂ ಇನ್ನೂ ಹೆಚ್ಚು ಹೆಚ್ಚು ಉದ್ಯೋಗ ಮಾಡಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಮತ್ತು ಅಭಿವೃದ್ಧಿ ಹೊಂದಬೇಕು. ಕಾಮಗಾರಿ ಸ್ಥಳದಲ್ಲಿ ತಮ್ಮೆಲ್ಲರಿಗೂ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗುತ್ತದೆ ಹಾಗೂ ಮೂಲ ಸೌಕರ್ಯಗಳಾದ ನೆರಳಿನ ವ್ಯವಸ್ಥೆ, ಕುಡಿಯುವ ನೀರು ಮತ್ತು ಉಚಿತ ಆರೋಗ್ಯ ತಪಾಸಣೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಸ್ತುತ ದಿನಗಳಲ್ಲಿ ಬಿಸಿಲಿನ ತಾಪಮಾನ ಅತೀ ಹೆಚ್ಚು ಇರುವುದರಿಂದ ತಮ್ಮೆಲ್ಲರಿಗೂ ಆರೋಗ್ಯದಲ್ಲಿ ಏರುಪೇರು ಉಂಟಾಗದಂತೆ ಎಚ್ಚರವಹಿಸಿ, ಕಾಮಗಾರಿ ಸ್ಥಳದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

    ಪ್ರತಿಯೊಬ್ಬರೂ ಕಡ್ಡಾಯವಾಗಿ ನಿಮ್ಮ ನಿಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಿ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ ಹೆಚ್ಚಿನ ಚಿಕಿತ್ಸೆಯ ಅವಶ್ಯವಿದ್ದಲ್ಲಿ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಲಾಗುವುದು. ಆದ್ದರಿಂದ ನೀವೆಲ್ಲರೂ ಇದರ ಸದುಪಯೋಗವನ್ನು ಪಡೆದು ಆರೋಗ್ಯವಂತರಾಗಿರಬೇಕು ಎಂದು ಹೇಳಿದರು.

    ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಮೂರು ವರ್ಷದ ಒಳಗಿನ ಮಕ್ಕಳನ್ನು ಆರೈಕೆ ಮಾಡಲು ಜಿಲ್ಲೆಯಲ್ಲಿ 163 ಕೂಸಿನ ಮನೆಗಳನ್ನು ಪ್ರಾರಂಭ ಮಾಡಲಾಗಿದೆ. ಅದೇ ರೀತಿ ನಾಗಠಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಕೂಸಿನ ಮನೆಯನ್ನು ಪ್ರಾರಂಭಿಸಲಾಗಿದೆ. ಎಲ್ಲರೂ ನಿಮ್ಮ ಮೂರು ವರ್ಷದ ಒಳಗಿನ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಬರಬಹುದು. ಸದರಿ ಕೂಸಿನ ಮನೆಯಲ್ಲಿ ನಿಮ್ಮ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಆರೈಕೆ ಮಾಡಲು ಪ್ರತ್ಯೇಕವಾಗಿ ಮಕ್ಕಳ ಆರೈಕೆದಾರರನ್ನು ಆಯ್ಕೆ ಮಾಡಲಾಗಿದೆ. ಅಲ್ಲಿ ಮಕ್ಕಳ ಆರೈಕೆದಾರರು ಮಕ್ಕಳಿಗೆ ಆಟ-ಪಾಠ, ಪಾಲನೆ-ಪೋಷಣೆ, ವೈಯಕ್ತಿಕ ಸ್ವಚ್ಛತೆ ಕಡೆಗೆ ವಿಶೇಷ ಗಮನ ನೀಡುತ್ತಾರೆ. ನೀವು ನಿರ್ಭೀತಿಯಿಂದ ನಿಮ್ಮ ಮಕ್ಕಳನ್ನು ಕೂಸಿನ ಮನೆಗಳಲ್ಲಿ ಬಿಟ್ಟು ನೆಮ್ಮದಿಯಿಂದ ಕೆಲಸ ಮಾಡಬಹುದು ಎಂದು ತಿಳಿಸಿದರು.

    ನಂತರ ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ಸಾಕ್ಷಿ ಹಿರೇಮಠ ಮತದಾನ ಜಾಗೃತಿ ಗೀತೆ ಪ್ರಸ್ತುತಪಡಿಸಿದರು. ಅಮೋಘಸಿದ್ದ ಗೌಳಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಜಿಲ್ಲಾ ಸ್ವೀಪ್ ಸಮಿತಿಯ ನೊಡೆಲ್ ಅಧಿಕಾರಿ ಸಿ.ಆರ್. ಮುಂಡರಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ. ಹೊಂಗಯ್ಯ, ತಾಪಂ ಸಹಾಯಕ ನಿರ್ದೇಶಕ(ಗ್ರಾ.ಉ) ಕಾಸಿಮಸಾಬ ಮಸಳಿ, ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ಸಹನಾ ಕುಡಿಗನೂರ, ನಾಗಠಾಣ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಿ.ಆರ್. ರಾಠೋಡ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts