More

    ಶತಮಾನಗಳ ಕಾಲ ಕಾಡುವ ಪರ್ವ: ಈಗ ರಂಗಪ್ರಯೋಗದ ಸದ್ದು; ಮತ್ಸರಕ್ಕೆಲ್ಲಿದೆ ಮದ್ದು?

    ಶತಮಾನಗಳ ಕಾಲ ಕಾಡುವ ಪರ್ವ: ಈಗ ರಂಗಪ್ರಯೋಗದ ಸದ್ದು; ಮತ್ಸರಕ್ಕೆಲ್ಲಿದೆ ಮದ್ದು?| ಪ್ರೊ. ಜಿ.ಎಲ್. ಶೇಖರ್

    ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರ ‘ಪರ್ವ’ ಕಾದಂಬರಿಯ ರಂಗಪ್ರಯೋಗದ ಬಗ್ಗೆ ಕೆಲವರಿಂದ ಮತ್ಸರದ ಮಾತುಗಳು ಕೇಳಿಬರತೊಡಗಿವೆ. ಅದನ್ನು ಭಾರಿ ಖರ್ಚಿನ, ದೀರ್ಘಾವಧಿಯ, ಬಿಜೆಪಿ/ಆರೆಸ್ಸೆಸ್ ಕೃಪಾಪೋಷಿತ ನಾಟಕವೆಂದು ಹೇಳುವ ಜನರು ಮೈಸೂರಿನಲ್ಲಿ ‘ಪರ್ವ’ ನಾಟಕವನ್ನು ನೋಡಿ ಆನಂದಿಸಿದ 2000ಕ್ಕೂ ಹೆಚ್ಚು ಪ್ರೇಕ್ಷಕರ ಜತೆ ತಾವೂ ಪಾಲ್ಗೊಂಡು ನಂತರ ನಾಟಕವನ್ನು ವಿಶ್ಲೇಷಿಸಬಹುದಿತ್ತು. ನಾಟಕ ಮುಗಿದ ನಂತರ ಪ್ರೇಕ್ಷಕರೆಲ್ಲರೂ ಎದ್ದು ನಿಂತು 5 ನಿಮಿಷ ಚಪ್ಪಾಳೆ ತಟ್ಟಿದರು. ‘ಸುಮಾರು 8 ಗಂಟೆಗಳ ನಾಟಕವಾದರೂ ಅಭೂತಪೂರ್ವ ಅನುಭವ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    600ಕ್ಕೂ ಹೆಚ್ಚು ಪುಟಗಳಿರುವ ‘ಪರ್ವ’ ಬೃಹತ್ ಕಾದಂಬರಿಯನ್ನು ದೀರ್ಘಾವಧಿ ನಾಟಕವೆಂದು ರಂಗಾಯಣ ವಿನ್ಯಾಸಗೊಳಿಸಿದೆ. ‘ರಾಮಾಯಣ ದರ್ಶನಂ’ ಮತ್ತು ‘ಮಲೆಗಳಲ್ಲಿ ಮದುಮಗಳು’ ರೀತಿಯಲ್ಲಿ ‘ಪರ್ವ’ವೂ ಒಂದು ಮಹಾಪ್ರಯೋಗ. ದೀರ್ಘ ನಾಟಕವಾದರೂ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ನಿರ್ದೇಶಕ ಪ್ರಕಾಶ್ ಬೆಳವಾಡಿ ಗೆದ್ದಿದ್ದಾರೆ. ಇನ್ನು ಕರ್ನಾಟಕ ಸರ್ಕಾರ ‘ಪರ್ವ’ ನಾಟಕಕ್ಕೆ 1 ಕೋಟಿ ರೂ. ಅನುದಾನ ಕೊಡುತ್ತಿರುವುದಕ್ಕೂ ಮತ್ಸರದ ಮಾತು. ರಂಗಭೂಮಿ ಬೆಳೆಸಲು ಹಲವಾರು ವರ್ಷಗಳಿಂದ ಯಾವುದೇ ಪಕ್ಷದ ಸರ್ಕಾರವಿದ್ದರೂ ಧನಸಹಾಯ ಕೊಡುತ್ತಾ ಬಂದಿದೆ. ಇಲ್ಲಿ ಬಿಜೆಪಿ/ಆರೆಸ್ಸೆಸ್ ಅಥವಾ ಇನ್ನಾವುದೇ ಪಕ್ಷ ಎಂಬುದು ಎಲ್ಲಿಂದ ಬಂತು? ನಾಟಕವನ್ನು ನೋಡಿದವರೊಬ್ಬರು ಹೀಗೆ ವಿಶ್ಲೇಷಿಸಿದ್ದಾರೆ. ‘‘ಪರ್ವ ನಾಟಕ ನೋಡಿದಾಗ ಅನ್ನಿಸಿದ್ದು ಒಂದೇ… ವ್ಯಾಸರ ಭಾರತವನ್ನು ಭೈರಪ್ಪನವರು ಮತ್ತೆ ಬರೆದು ಇನ್ನಷ್ಟು ಎತ್ತರಕ್ಕೇರಿದರು ಮತ್ತು ಅವರ ಈ ಕೃತಿಯ ಸಾರ್ಥಕ ರಂಗ ಪ್ರಯೋಗದ ಮೂಲಕ ಪ್ರಕಾಶ್ ಬೆಳವಾಡಿ ಮತ್ತಷ್ಟು ಎತ್ತರಕ್ಕೇರಿದರು. ಒಟ್ಟಿನಲ್ಲಿ ಗೆದ್ದದ್ದು ಮಹಾಭಾರತವೆಂಬ ಸನಾತನ ಪರಂಪರೆಯ ಮೇರು ಕೃತಿ.’’ ಇಂತಹ ವಿಮರ್ಶೆಗಳು ಹಲವಾರು ಬಂದಿವೆ. ನಾಟಕದಲ್ಲಿ ಸ್ವಲ್ಪ ನೀರಸವೆನ್ನಿಸಿದ ಭಾಗಗಳೂ ಇವೆ. ಮುಂದಿನ ದಿನಗಳಲ್ಲಿ ಅಂತಹ ಭಾಗಗಳನ್ನು ನಿರ್ದೇಶಕರು ತೆಗೆದುಹಾಕಬಹುದು.

    ಇನ್ನು ದ್ರೌಪದಿ ಬಗ್ಗೆ ಎದ್ದಿರುವ ವಿವಾದ. ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವವರು ಯಾವ ಪುಸ್ತಕವನ್ನು ಆಧಾರವಾಗಿ ಇಟ್ಟುಕೊಂಡಿದ್ದಾರೆ? ಭೈರಪ್ಪನವರು ಹೇಳಿದ್ದು- ‘‘ಫೆ. 21ರಂದು ಮೈಸೂರಿನ ಕಲಾಮಂದಿರದಲ್ಲಿ ‘ಪರ್ವ’ ಕುರಿತ ವಿಚಾರ ಸಂಕಿರಣದಲ್ಲಿ ನಾನು ಹೇಳಿದ್ದೇನೆಂದರೆ, ಪಾಂಡವರು ವನವಾಸದಲ್ಲಿದ್ದಾಗ ದುರ್ಯೋಧನನ ತಂಗಿಯ ಗಂಡ ಜಯದ್ರಥನು ದ್ರೌಪದಿಯು ಒಬ್ಬಳೇ ಇದ್ದಾಗ ಅವಳನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ಅವಳು ಆರ್ತಳಾಗಿ ಕಿರುಚಿಕೊಂಡಳು. ಅದು ದೂರದಲ್ಲಿದ್ದ ಭೀಮನಿಗೆ ಕೇಳಿ ಅವನು ಓಡಿಬಂದು ದ್ರೌಪದಿಯನ್ನು ಬಿಡಿಸಿ ಜಯದ್ರಥನನ್ನು ಹಿಡಿದು, ಅವನ ಕೈಕಾಲುಗಳನ್ನು ಹೆಡೆಮುರಿ ಕಟ್ಟಿ ತಂದು ಧರ್ಮರಾಜನ ಎದುರಿಗೆ ಎಸೆಯುತ್ತಾನೆ. ಆಗ ಧರ್ಮರಾಜನು ‘ಭೀಮ, ಇವನು ನಮ್ಮ ತಂಗಿಯ ಗಂಡ. ಅವನನ್ನು ಹೆಡೆಮುರಿ ಕಟ್ಟಿದ್ದರಿಂದ ನಮ್ಮ ತಂಗಿಗೆ ನೋವಾಗುವುದಿಲ್ಲವೇ? ನಮ್ಮ ತಾಯಿ ಗಾಂಧಾರಿಗೆ ತನ್ನ ಮಗಳ ಗಂಡನನ್ನು ಕಟ್ಟಿ ಹಾಕಿದ್ದರಿಂದ ನೋವಾಗುವುದಿಲ್ಲವೇ? ತಕ್ಷಣ ಅವನ ಕಟ್ಟುಗಳನ್ನು ಬಿಚ್ಚು’ ಎಂದು ಧರ್ಮಬೋಧೆ ಮಾಡುತ್ತಾನೆ. ಆದರೆ ಹತ್ತಿರದಲ್ಲೇ ನಿಂತಿದ್ದ ದ್ರೌಪದಿಗೆ ಆಗಿದ್ದ ನೋವನ್ನು ಅವನು ಗಮನಿಸುವುದಿಲ್ಲ. ಈ ಗಂಡನ ಬಗೆಗೆ ದ್ರೌಪದಿಗೆ ಏನೆನ್ನಿಸಿರಬೇಕು? ಭೀಮನು ಬರದಿದ್ದರೆ ಈ ದುಷ್ಟನು ಅತ್ಯಾಚಾರ

    ಮಾಡುತ್ತಿದ್ದ, ಅವನನ್ನು ದಂಡಿಸದೆ ಇವನು ಧರ್ಮ ಬೋಧೆ ಮಾಡುತ್ತಿದ್ದಾನೆ ಎಂದು ಕೋಪ ಬರದೇ ಇರುತ್ತಿತ್ತೇ?’’ ಎಂದು. ಸುಮಾರು 700 ಜನರಿದ್ದ ಸಭಿಕರಲ್ಲಿ ಬೇರೆ ಭಾಷೆ ಬಲ್ಲವರು ಹಲವರಿದ್ದರು. ಹಲವರಿಗೆ ಅತ್ಯಾಚಾರ, ಮಾನಭಂಗ ಎಂಬ ಶಬ್ದಗಳು ಅರ್ಥವಾಗುವುದಿಲ್ಲ ಎಂಬ ಎಚ್ಚರದಿಂದ ಅವರು ಇಂಗ್ಲಿಷ್​ನ ರೇಪ್ ಶಬ್ದವನ್ನು ಬಳಸಿದರು. ಭೈರಪ್ಪನವರು ಪಾತ್ರಗಳ ಭಾವನೆಗಳನ್ನು ಹೇಳಿದರೇ ಹೊರತು ಸ್ವಂತ ಭಾವನೆಗಳನ್ನಲ್ಲ.

    ‘ಪರ್ವ’ ಕಾದಂಬರಿ ಓದಿದರೆ ತಿಳಿಯುತ್ತದೆ, ಆ ಕಾದಂಬರಿಯಲ್ಲಿ ಅವರು ದ್ರೌಪದಿಯ ಪಾತ್ರವನ್ನು ಅತ್ಯಂತ ಗೌರವ ಮತ್ತು ಅನುಕಂಪದಿಂದ ಚಿತ್ರಿಸಿದ್ದಾರೆ. ‘ಪರ್ವ’ ಕಾದಂಬರಿಯ 2019ನೇ ಇಸವಿಯಲ್ಲಿ ಪ್ರಕಟವಾಗಿರುವ ಮುದ್ರಣದ 198, 199, 200, 584ನೇ ಪುಟಗಳನ್ನು ಓದಿದರೆ ಗೊತ್ತಾಗುತ್ತದೆ, ಭೈರಪ್ಪನವರು ಎಲ್ಲಿಯೂ ದ್ರೌಪದಿಗೆ ಅಗೌರವವಾಗುವಂತೆ ಬರೆದಿಲ್ಲವೆಂದು.

    ಈ ಸಂಬಂಧ ಶತಾವಧಾನಿ ಡಾ. ಆರ್. ಗಣೇಶ್ ಕೂಡ ಕೆಲವು ಗ್ರಂಥಗಳನ್ನು ಉಲ್ಲೇಖಿಸಿದ್ದಾರೆ. ಉದಾಹರಣೆಗೆ ಮಹಾಭಾರತದಲ್ಲಿನ ಶ್ಲೋಕಗಳು ಮತ್ತು ಅರ್ಥ: ‘‘ಜಗ್ರಾಹ ತಾಮ್ ಉತ್ತರವಸ್ತ್ರದೇಶೇ ಜಯದ್ರಥಃ’’, ‘‘ಜಯದ್ರಥನು ಅವಳ ಸೆರಗನ್ನು ಸೆಳೆದನು’’ (3-252.23); ‘‘ಪ್ರಗೃಹ್ಯಮಾಣಾ ತು ಮಹಾಜವೇನ ಮುಹುರ್ವಿನಿಃಶ್ವಸ್ಯ ಚ ರಾಜಪುತ್ರೀ ಸಾ ಕೃಷ್ಯಮಾಣಾ ರಥಮಾರುರೋಹ’’, ‘‘ಸೈಂದವನಿಂದ ವೇಗವಾಗಿ ಸೆಳೆಯಲ್ಪಟ್ಟ ದ್ರೌಪದಿ ಸಂಕಟದ ನಿಟ್ಟುಸಿರು ಬಿಡುತ್ತಿದ್ದಳು. ಅವಳು ಅವನ ಬಲವಂತದಿಂದ ರಥವನ್ನು ಹತ್ತಿದಳು’’ (3.252.24); ಭೀಮ-ಅರ್ಜುನರು ಬೆನ್ನಟ್ಟಿ ಬಂದು ಸೈಂಧವನನ್ನು ಯುದ್ಧದಲ್ಲಿ ಸೋಲಿಸಿದಾಗ ಧರ್ಮರಾಜನು ಸೈಂಧವನನ್ನು ಬಿಡುಗಡೆ ಮಾಡಲು ಆಣತಿ ನೀಡುತ್ತಾನೆ (3.255.43). ಅದನ್ನು ಕೇಳಿ ದ್ರೌಪದಿ ಕೆರಳುತ್ತಾಳೆ. ಸಂಕಟಪಟ್ಟು ಭೀಮ- ಅರ್ಜುನರಿಗೆ ಹೀಗೆನ್ನುತ್ತಾಳೆ – ‘‘ನೀವು ನನಗೆ ಸಂತೋಷ ಕೊಡಬೇಕೆಂದಿದ್ದಲ್ಲಿ ನರಾಧಮನಾದ ಈ ಪಾಪಿ ಸೈಂಧವನನ್ನು ಕೊಲ್ಲಬೇಕು. ಇವನು ದುರ್ಬುದ್ಧಿಯ ಕುಲಗೇಡಿಗ. ಯಾರು ನಮಗೆ ಶತ್ರುವಲ್ಲದಿದ್ದರೂ ನಮ್ಮ ರಾಜ್ಯವನ್ನು ಅಪಹರಿಸಿ ಹೆಣ್ಣನ್ನೂ ಕಸಿಯುತ್ತಾನೋ ಅಂಥವನು ಜೀವಭಿಕ್ಷೆ ಬೇಡಿದರೂ ಯುದ್ಧದಲ್ಲಿ ಬದುಕಬಾರದು.’’ (3.255.44-46)

    ಕುಮಾರವ್ಯಾಸನು ಅರಣ್ಯಪರ್ವದ 22ನೆ ಸಂಧಿಯಲ್ಲಿ ಈ ಪ್ರಕರಣವನ್ನು ವರ್ಣಿಸಿದ್ದಾನೆ. ಸೈಂಧವ ದ್ರೌಪದಿಯನ್ನು ಮೂದಲಿಸಿ ಸೆರಗುತಲೆಗೂದಲುಗಳನ್ನು ಹಿಡಿದು ಹೊತ್ತೊಯ್ಯುತ್ತಾನೆ. ‘‘ಅಹಹ ಪಾತಿವ್ರತ್ಯವತಿ ಸನ್ನಿಹಿತವಲ್ಲಾ ನಿನಗೆ! ಹಲಬರ ಮಹಿಳೆ ಸತಿಹೆನಿಸುವರೆ? ಸೂಳೆಯರೇಕಪುರುಷರಲಿ ವಿಹರಿಸುವರೇ? ಲೋಕಧರ್ಮದ ರಹಣಿ ರಹಿಸುವುದೈಸಲೇ! ನಮಗಿಹುದು ಮತವಲ್ಲದೊಡೆ ಮಾಣಲೆನುತ್ತ ಮುರಿದೆದ್ದ’’ (3.22.18); ‘‘ತರಳೆ ಮಿಗೆ ತಲ್ಲಣಿಸಿ ತಳಿರೋವರಿಯ ಹೋಗುತಿರಲಟ್ಟಿ ಮೇಲುದ ಬರಸೆಳೆದು ತುರುಬಿಂಗೆ ಹಾಯ್ದನು ಹಿಡಿದು ಕುಸುಬಿದನು. ಒರಲಿದಳು ಹಾ ಭೀಮ! ಹಾ ನೃಪವರ! ಹಾ ಧನಂಜಯ! ಹಾ ಎನುತ ಕಾತರಿಸೆ ಕಮಲಾನನೆಯ ಕಂಠವನೌಚಿ ಹೊರವಂಟ’’ (3.22.10). ಇಂಥ ಅವಮಾನಕ್ಕೆ ತಕ್ಕ ಪ್ರತೀಕಾರ ಆಗಲಿಲ್ಲವೆಂಬ ನೋವು ದ್ರೌಪದಿಗೆ ಇತ್ತು. ಹೀಗಾಗಿ ಅವಳು ಇದನ್ನು ಮತ್ತೆ ಮತ್ತೆ ಎತ್ತಾಡುತ್ತಿರುತ್ತಾಳೆ. ಉದಾಹರಣೆಗೆ ವಿರಾಟಪರ್ವದ ಕೀಚಕವಧೆಯ ಪ್ರಕರಣವನ್ನು ನೋಡಬಹುದು: ‘‘ಯಮಸುತಂಗರಹುವೆನೆ ಧರ್ಮಕ್ಷಮೆಯ ಗರ ಹೊಡೆದಿಹುದು’’ (4.3.33); ‘‘ಗಂಡರೈವರು ಮೂರು ಲೋಕದ ಗಂಡರೊಬ್ಬಳನಾಳಲಾರಿರಿ ಗಂಡರೋ ನೀವ್ ಭಂಡರೋ ಹೇಳೆಂದಳಿಂದುಮುಖಿ’’ (4.3.46) (ಗಂಡರೋ ನೀವ್ ಷಂಢರೋ ಎಂಬ ಪಾಠಾಂತರವೂ ಇದೆ); ಇವನ್ನೆಲ್ಲಾ ಕಂಡಾಗ ತನ್ನ ಪತಿಗಳು ಇದಕ್ಕೆ ತಕ್ಕ ಪ್ರತೀಕಾರ ಮಾಡಲಿಲ್ಲವೆಂಬ ನೋವು ಕೂಡ ದ್ರೌಪದಿಗೆ ಇತ್ತೆಂದು ಸ್ಪಷ್ಟವಾಗಿ ತಿಳಿಯುತ್ತದೆ.

    ಭೈರಪ್ಪ ಅವರೇ ಹೇಳಿದಂತೆ ವ್ಯಾಸ ಮಹರ್ಷಿಗಳ ಮಹಾಭಾರತವನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿರುವ ಕಾದಂಬರಿ ‘ಪರ್ವ’ ಕುರಿತು ದಿ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಹೀಗೆ ವರ್ಣಿಸಿದ್ದಾರೆ. ‘‘ಭೈರಪ್ಪನವರು ಮಹಾಭಾರತವನ್ನು ‘ಪರ್ವ’ದಲ್ಲಿ ಸೃಜನಾತ್ಮಕ ಕಾದಂಬರಿಯಾಗಿ ಪುನರ್ ಸೃಷ್ಟಿಸಿದ್ದಾರೆ. ಈ ಮೂಲಕ ಅವರು ಪಂಪ, ಕುಮಾರವ್ಯಾಸರಂಥ ಮಹಾಕವಿಗಳ ಸಾಲಿಗೆ ಸೇರಿದ್ದಾರೆ. ಜನಪ್ರಿಯತೆಯಲ್ಲಿಯಂತೂ ಅವರನ್ನು ಶರಚ್ಛಂದ್ರ, ಪ್ರೇಮಚಂದ್​ರಂಥ ಮಹಾ ಕಾದಂಬರಿಕಾರರ ಜತೆ ಮಾತ್ರ ಹೋಲಿಸಬಹುದು.’’ ತೊಂಬತ್ತರ ಹಿರಿಯ ಚೇತನ ಭೈರಪ್ಪನವರು ಪರ್ವತದಂತೆ ಬೆಳೆದು ಭಾರತದ ಅಗ್ರಗಣ್ಯ ಕಾದಂಬರಿಕಾರರಾಗಿ ನಿಂತು, ನಮ್ಮ ಕಾಲದ ದಾರ್ಶನಿಕರಾಗಿ ನಮ್ಮ ಜತೆ ಇರುವುದು ಪುಣ್ಯ. ಇಪ್ಪತ್ತೆರಡನೇ ಶತಮಾನವನ್ನೂ ದಾಟುವ ಅಂತಃಶಕ್ತಿಯನ್ನು ಹೊಂದಿರುವ ‘ಪರ್ವ’ದ ಮೇಲಿನ ಚರ್ಚೆ, ವಿವಾದಗಳನ್ನು ಗಮನಿಸುತ್ತಿರುವ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಹೇಳಿದಂತೆ ‘ಪರ್ವ’ ಇನ್ನೂ ಕಾಡುತ್ತಲೇ ಇರಲಿ.

    (ಲೇಖಕರು ನಿವೃತ್ತ ಪ್ರಾಂಶುಪಾಲರು, ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಇಂಜಿನಿಯರಿಂಗ್, ಮೈಸೂರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts