More

    ನನ್ನ ಹಿಂದುತ್ವ ಸಿದ್ಧಾಂತ ಬಿಜೆಪಿಗಿಂತ ವಿಭಿನ್ನ, ನನಗೆ ಅಸ್ಥಿರ ಹಿಂದು ರಾಷ್ಟ್ರ ನಿರ್ಮಾಣ ಆಗುವುದು ಬೇಕಿಲ್ಲ: ಮಹಾ ಸಿಎಂ ಉದ್ಧವ್ ಠಾಕ್ರೆ

    ಮುಂಬೈ: 2018ರಲ್ಲಿ ನಡೆದಿದ್ದ ಭೀಮಾ-ಕೋರೆಗಾಂವ್​ ಹಿಂಸಾಚಾರ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ)ಗೆ ಒಪ್ಪಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರೋಧಿಸಿದ್ದಾರೆ.

    ಹಿಂಸಾಚಾರಕ್ಕೆ ಸಂಬಂಧಪಟ್ಟ ಎಲ್ಲ ಕೇಸ್​ಗಳನ್ನೂ ಹಿಂಪಡೆಯಲು ಮಹಾರಾಷ್ಟ್ರ ಮಹಾ ವಿಕಾಸ ಅಘಾಡಿ ಸರ್ಕಾರ ನಿರ್ಧಾರ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಅದೇ ಸಮಯದಲ್ಲಿ ತನಿಖೆಯನ್ನು ಎನ್​ಐಎಗೆ ವಹಿಸಿತ್ತು. ಇದೇ ವಿಚಾರಕ್ಕಾಗಿ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರದ ಮಧ್ಯೆ ಈಗಾಗಲೇ ಸಂಘರ್ಷ ಏರ್ಪಟ್ಟಿದೆ.
    ಉದ್ಧವ್​ ಠಾಕ್ರೆ ಶಿವಸೇನೆಯ ಮುಖವಾಣಿ ಪತ್ರಿಕೆ ಸಾಮ್ನಾಕ್ಕೆ ನೀಡಿದ ಸಂದರ್ಶನದಲ್ಲಿ ಮತ್ತೊಮ್ಮೆ ಭೀಮಾ-ಕೋರೆಗಾಂವ್​ ವಿಚಾರವನ್ನು ಉಲ್ಲೇಖಿಸಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

    ಹಿಂಸಾಚಾರ ಪ್ರಕರಣ ತನಿಖೆಯನ್ನು ಎನ್​ಐಎಗೆ ವಹಿಸುವುದಕ್ಕೂ ಮೊದಲು ಕೇಂದ್ರ ಸರ್ಕಾರ ನಮ್ಮ ರಾಜ್ಯಸರ್ಕಾರದ ಜತೆ ಮಾತುಕತೆ ನಡೆಸಬೇಕಿತ್ತು ಎಂದು ಹೇಳಿದ್ದಾರೆ. ಅಲ್ಲದೆ, ಬಿಜೆಪಿ ನನಗೆ ದ್ರೋಹ ಮಾಡಿದೆ. ನಮ್ಮ ಹಿಂದುತ್ವ ಸಿದ್ಧಾಂತ ಬಿಜೆಪಿಯ ಸಿದ್ಧಾಂತಕ್ಕಿಂತ ವಿಭಿನ್ನವಾಗಿದೆ. ನನಗೆ ಅಸ್ಥಿರ ಹಿಂದು ರಾಷ್ಟ್ರ ನಿರ್ಮಾಣ ಆಗುವುದು ಬೇಕಾಗಿಲ್ಲ. ಹಾಗಾದರೆ ಸರ್ಕಾರಗಳು ಪತನಗೊಳ್ಳುತ್ತವೆ, ಕೋಮು ಸಂಘರ್ಷ ಹುಟ್ಟಿಕೊಳ್ಳುತ್ತದೆ ಎಂದು ಉದ್ಧವ್​ ಠಾಕ್ರೆ ಹೇಳಿದ್ದಾರೆ.

    ಭೀಮಾ-ಕೋರೆಗಾಂವ್​​ ಹಿಂಸಾಚಾರದ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಎಲ್ಲ ರೀತಿಯ ಅಧಿಕಾರವೂ ಇದೆ. ಆದರೆ ತನಿಖೆಯನ್ನು ಎನ್​ಐಗೆ ವಹಿಸುವುದಕ್ಕೂ ಮೊದಲು ನಮ್ಮ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ನಾವೇನು ಯೋಜನೆ ಹಾಕಿಕೊಂಡಿದ್ದೇವೆ ಎಂಬುದನ್ನು ಕೇಳಬೇಕಿತ್ತು. ಯಾಕೆಂದರೆ ಶರದ್​ ಪವಾರ್​ ಅವರು ವಿಶೇಷ ತನಿಖಾ ದಳ (SIT) ಗೆ ಪ್ರಕರಣವನ್ನು ಒಪ್ಪಿಸುವ ಇಂಗಿತ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ನಮ್ಮ ಅಭಿಪ್ರಾಯ ಕೇಳದೆ ಎನ್​ಐಎಗೆ ವಹಿಸಿದ್ದು ಸರಿಯಲ್ಲ ಎಂದಿದ್ದಾರೆ.

    ಕೇಂದ್ರದ ನಿರ್ಧಾರದಿಂದ ನನಗೆ ಅಚ್ಚರಿಯಾಗಿದೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ತನಿಖಾ ದಳಗಳ ಮೇಲೆ ನಂಬಿಕೆ ಇಡಬೇಕು. ಆದರೆ ಹೀಗೆಲ್ಲ ವರ್ತಿಸಿದರೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಹದಗೆಡುತ್ತದೆ ಎಂದು ಠಾಕ್ರೆ ಸಾಮ್ನಾಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

    2018ರ ಜನವರಿ 1ರಂದು ಪುಣೆಯ ಭೀಮಾ-ಕೋರೆಗಾಂವ್​ ಯುದ್ಧದ ವಿಜಯೋತ್ಸವದ ವೇಳೆ ಹಿಂಸಾಚಾರ ಸಂಭವಿಸಿತ್ತು. ಮೊದಲು ತನಿಖೆ ಕೈಗೆತ್ತಿಕೊಂಡ ಪುಣೆ ಪೊಲೀಸರು, 2017ರ ಡಿಸೆಂಬರ್​ 31ರಂದು ಎಲ್ಗರ್ ಪರಿಷತ್​ ಸಮಾವೇಶದಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದ್ದೇ ಹಿಂಸಾಚಾರಕ್ಕೆ ಕಾರಣ. ಈ ಸಮಾವೇಶದಲ್ಲಿ ಮಾವೋವಾದಿಗಳು ಇದ್ದರು ಎಂದು ವರದಿ ನೀಡಿದ್ದರು. (ಪಿಟಿಐ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts