More

    ಅಯೋಧ್ಯೆ ರಾಮಾಸ್ತ್ರದ ಬಳಿಕ ನಮೋ ಪೌರಾಸ್ತ್ರ! 3 ದೇಶಗಳ ಅಲ್ಪಸಂಖ್ಯಾತ ಹಿಂದುಗಳಿಗೆ ಪೌರತ್ವ

    ನವದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನನ್ನು ಪ್ರತಿಷ್ಠಾಪಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಭರವಸೆಯನ್ನು ಅನುಷ್ಠಾನಗೊಳಿಸಿದೆ. ಸಂಸತ್​ನಲ್ಲಿ ಅನುಮೋದನೆಗೊಂಡರೂ ರಾಜಕೀಯ ವಿರೋಧದಿಂದಾಗಿ ಕಳೆದ 4 ವರ್ಷದಿಂದ ಗ್ರಹಣ ಕವಿದಂತಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಲೋಕಸಭೆ ಚುನಾವಣೆ ಹೊತ್ತಲ್ಲೇ ಜಾರಿ ಆಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಸೋಮವಾರ ಅಧಿಸೂಚನೆ ಹೊರಡಿಸಿದೆ.

    2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಪೌರತ್ವ ತಿದ್ದುಪಡಿ ಮಸೂದೆಯ ಭರವಸೆ ನೀಡಿತ್ತು. ಇತ್ತೀಚೆಗಷ್ಟೇ ಸಿಎಎ ವಿಚಾರ ಪ್ರಸ್ತಾಪಿಸಿದ್ದ ಕೇಂದ್ರ ಸಚಿವ ಅಮಿತ್ ಷಾ ಲೋಕಸಭೆ ಚುನಾವಣೆಗೆ ಮೊದಲೇ ದೇಶದಲ್ಲಿ ಕಾಯ್ದೆ ಜಾರಿಗೆ ತರುವ ಸುಳಿವು ನೀಡಿದ್ದರು. ಕಾಯ್ದೆಯಿಂದ ಮುಸ್ಲಿಮರಿಗೆ ಭಯ ಬೇಡ. ರಾಜಕೀಯ ಪಕ್ಷಗಳ ಆರೋಪಗಳಿಗೆ ಯಾರೂ ಹೆದರಬೇಕಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅನ್ನು ಕುಟುಕಿದ್ದರು. 2019ರಲ್ಲಿ ಸಿಎಎ ಮಸೂದೆ ಸಂಸತ್​ನಲ್ಲಿ ಅಂಗೀಕಾರಗೊಂಡಿತ್ತು. ರಾಷ್ಟ್ರಪತಿ ಅಂಕಿತ ಬಿದ್ದ ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು. ಇದರಿಂದಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರಲಿಲ್ಲ.

    ಯಾರಿಗೆಲ್ಲ ಪೌರತ್ವ: ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ, 2014ರ ಡಿ.31ಕ್ಕೂ ಮೊದಲು ಭಾರತಕ್ಕೆ ವಲಸೆ ಬಂದ ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೖೆಸ್ತರಿಗೆ ಕಾಯ್ದೆಯಲ್ಲಿ ಅವಕಾಶವಿದೆ. ಯಾವುದೇ ಸೂಕ್ತ ದಾಖಲೆಗಳಿಲ್ಲದಿದ್ದರೂ ಪ್ರಯಾಣದ ವಿವರ ನೀಡಿ ಭಾರತದ ಪೌರತ್ವ ಪಡೆಯಬಹುದಾಗಿದೆ. ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣ ಆನ್​ಲೈನ್ ಆಗಿದ್ದು, ಅದಕ್ಕೆಂದೇ ಪೋರ್ಟಲ್ ರೂಪಿಸಲಾಗಿದೆ.

    ಬಿಗಿಭದ್ರತೆ: ಸಿಎಎ ಸಂಸತ್​ನಲ್ಲಿ ಅನುಮೊದನೆಗೊಂಡ ಬಳಿಕ 2019ರ ಡಿಸೆಂಬರ್ ಹಾಗೂ 2020ರ ಜನವರಿಯಲ್ಲಿ ದೆಹಲಿ ಸೇರಿದಂತೆ ದೇಶದ ಹಲವೆಡೆ ವ್ಯಾಪಕ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ಬಿಜೆಪಿಯ ಪ್ರಣಾಳಿಕೆ: ಪೌರತ್ವ ತಿದ್ದುಪಡಿ ಮಸೂದೆ ಬಿಜೆಪಿ ಚುನಾವಣಾ ಪ್ರಣಾಳಿಕೆ ವಿಷಯ. 2014, 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸಿಎಎ ಜಾರಿಯ ಭರವಸೆ ನೀಡಿತ್ತು.

    ಈಶಾನ್ಯದಲ್ಲೇಕೆ ಕಾಯ್ದೆಗೆ ವಿರೋಧ?
    ಅಸ್ಸಾಂ, ಮೇಘಾಲಯ, ತ್ರಿಪುರ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಣಿಪುರದಲ್ಲಿ ನಿರಾಶ್ರಿತರು ಹೆಚ್ಚಿದ್ದಾರೆ. ಹಿಂದುಗಳು ಸೇರಿ ಎಲ್ಲ ನಿರಾಶ್ರಿತರು ಅಕ್ರಮ ವಲಸಿಗರೇ. ಸಿಎಎ ಜಾರಿಯಾದರೆ ಹಿಂದು ಅಕ್ರಮ ವಲಸಿಗರಿಗೂ ಪೌರತ್ವ ಸಿಗುತ್ತದೆ. ಹೀಗಾದಲ್ಲಿ ಸ್ಥಳೀಯ ಅವಕಾಶ ಕೈತಪ್ಪಲಿದೆ ಎಂಬ ಆತಂಕವಿದೆ.

    ಆರು ತಿಂಗಳ ಮೊದಲು ನಿಯಮ ತಿಳಿಸಿರಬೇಕು, ಒಳ್ಳೆಯ ವಿಷಯಗಳಿಗೆ ನಾವು ಸದಾ ಬೆಂಬಲಿಸುತ್ತೇವೆ. ಇದೇ ದಿನಾಂಕವನ್ನು ರಂಜಾನ್​ಗೆ ಮುಂಚಿತವಾಗಿ ಏಕೆ ಆರಿಸಲಾಗಿದೆ ಎಂಬುದು ನನಗೆ ತಿಳಿದಿದೆ.

    | ಮಮತಾ ಬ್ಯಾನರ್ಜಿ, ಬಂಗಾಳ ಸಿಎಂ

    ಪೌರತ್ವ ಧರ್ಮ ಅಥವಾ ರಾಷ್ಟ್ರೀಯತೆಯನ್ನು ಆಧರಿಸಿರಬಾರದು. ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸಲು ಸಿಎಎ ಜಾರಿ ಮಾಡಲಾಗಿದೆ.

    | ಅಸಾದುದ್ದೀನ್ ಒವೈಸಿ, ಎಐಎಂಐಎಂ ಅಧ್ಯಕ್ಷ.

    ವಿಪಕ್ಷಗಳಿಗೆ ಹೊಸ ಅಸ್ತ್ರ
    ಮೋದಿ ಅಲೆ ನಡುವೆ ಮಂಕಾಗಿದ್ದ ವಿಪಕ್ಷಗಳ ಇಂಡಿ ಮೈತ್ರಿಕೂಟಕ್ಕೆ ಸಿಎಎ ಹೊಸ ಅಸ್ತ್ರವಾಗಿ ಸಿಕ್ಕಿದೆ. ಕಾಂಗ್ರೆಸ್ ಹಾಗೂ ಟಿಎಂಸಿ ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಕಾಂಗ್ರೆಸ್​ನ ಜೈರಾಮ್ ರಮೇಶ್, ಟಿಎಂಸಿಯ ಮಮತಾ ಬ್ಯಾನರ್ಜಿ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದರೆ, ಸಿಎಎ ಕೋಮುವಿಭಜಕ ಕಾನೂನು ಎಂದು ಕೇರಳ ಮುಖ್ಯಮಂತ್ರಿ ವಿಜಯನ್ ಕಿಡಿಕಾರಿದ್ದಾರೆ. ಯಾವುದೇ ಕಾರಣಕ್ಕೂ ಕೇರಳದಲ್ಲಿ ಸಿಎಎ ಜಾರಿಗೆ ತರುವುದಿಲ್ಲ ಎಂದು ಹೇಳಿದ್ದಾರೆ.

    ಸಾಕಾರಗೊಂಡ ಪ್ರಧಾನಿ ಮೋದಿ ಗ್ಯಾರಂಟಿಗಳು

    1. 5 ಶತಮಾನಗಳ ಬಳಿಕ ರಾಮಮಂದಿರ ನಿರ್ಮಾಣ

    2. ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ

    3. ತ್ರಿವಳಿ ತಲಾಕ್ ಭಾರತದಲ್ಲಿ ಈಗಾಗಲೇ ರದ್ದಾಗಿದೆ

    4. ಮಹಿಳಾ ಮಸೂದೆ ಸಂಸತ್​ನಲ್ಲಿ ಅಂಗೀಕಾರ

    5. ಭಾರತೀಯ ಸೈನಿಕರಿಗೆ ಒಆರ್​ಪಿ ಜಾರಿ

    6. 1 ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ

    7. ಡಿಜಿಟಲ್, ಮೇಕ್ ಇನ್ ಇಂಡಿಯಾ ಜಾರಿ

    8. ದೇಶದ ಹಲವೆಡೆ ವಂದೇ ಭಾರತ್ ರೈಲು ಪರಿಚಯ

    ಸಿಎಎ ಅಧಿಸೂಚನೆಯೊಂದಿಗೆ ಮೋದಿ ಮತ್ತೊಮ್ಮೆ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಪಾಕ್, ಬಾಂಗ್ಲಾ, ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೀಡಾಗಿದ್ದ ಅಲ್ಪಸಂಖ್ಯಾತರಿಗೆ ನಮ್ಮ ಸಂವಿಧಾನದಡಿ ನೀಡಿದ್ದ ಭರವಸೆಯನ್ನು ನನಸಾಗಿಸಿದ್ದಾರೆ.

    | ಅಮಿತ್ ಷಾ ಕೇಂದ್ರ ಗೃಹ ಸಚಿವ

    ನೊಂದ ಮಾನವೀಯತೆಯ ಕಲ್ಯಾಣಕ್ಕಾಗಿ ಸಿಎಎ ಜಾರಿ ನಿರ್ಧಾರ ಐತಿಹಾಸಿಕವಾಗಿದೆ. ಇದು ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ ಧಾರ್ವಿುಕ ದೌರ್ಜನ್ಯದಿಂದ ಬಳಲುತ್ತಿರುವ ಸಮುದಾಯಗಳಿಗೆ ಗೌರವಯುತ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ.

    | ಯೋಗಿ ಆದಿತ್ಯನಾಥ ಸಿಎಂ, ಉತ್ತರಪ್ರದೇಶ

    ಏನಿದು ಸಿಎಎ?
    ಬಾಂಗ್ಲಾ, ಅಫ್ಘಾನಿಸ್ತಾನ, ಪಾಕಿಸ್ತಾನದ ಅಲ್ಪಸಂಖ್ಯಾತ ವಲಸಿಗರಿಗೆ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ ಮಸೂದೆ. 1955 ರ ಕಾಯ್ದೆಗೆ ತಿದ್ದುಪಡಿ ಮಾಡಿ ಹೊಸ ಮಸೂದೆ ರೂಪಿಸಲಾಗಿದೆ. 2019ರಲ್ಲೇ ಮಸೂದೆ ಸಂಸತ್​ನಲ್ಲಿ ಅನುಮೋದನೆಗೊಂಡಿದೆ.

    ಜಾರಿ ಮುಂದೇನು?

    * ಪೌರತ್ವ ಪಡೆಯುವ ಫಲಾನುಭವಿ ಗಳಿಗೆ ಆನ್​ಲೈನ್ ಅವಕಾಶ
    * ಫಲಾನುಭವಿಗಳಿಗಾಗಿ ಪೋರ್ಟಲ್ ರಚಿಸಿದ ಕೇಂದ್ರ ಸರ್ಕಾರ
    * ಭಾರತಕ್ಕೆ ಬಂದ ವರ್ಷ, ಪ್ರಯಾಣದ ದಾಖಲೆ ನೀಡಬೇಕು
    * ಇದನ್ನು ಹೊರತುಪಡಿಸಿ ಉಳಿದ ಯಾವುದೇ ದಾಖಲೆ ಬೇಕಿಲ್ಲ

    ನಾಯಿ ರೀತಿ ಇರುತ್ತೇನೆಂದರು, ರೂಮಿಗೆ ಕರೆದರು… ಹಲವು ವರ್ಷಗಳ ಬಳಿಕ ನಟಿ ಲಕ್ಷ್ಮೀ ರಹಸ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts